Menu

ರಾಜ್ಯಸಭೆ ಚುನಾವಣೆ ಚರ್ಚೆಗೆ ಸಿಎಂ ದೆಹಲಿಗೆ: ಈಶ್ವರ ಖಂಡ್ರೆ

ಮುಂಬರುವ ರಾಜ್ಯಸಭಾ ಚುನಾವಣೆಯ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸಲು ಮುಖ್ಯಮಂತ್ರಿಗಳು ಮತ್ತು ನಾಯಕರು ದೆಹಲಿಗೆ ಹೋಗಿದ್ದಾರೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವರ ದರ್ಶನ ಮಾಡಿದ ಬಳಿಕ ಮಾಧ್ಯಮದವರ  ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರವಾಗಿದ್ದು, ಊಹಾತ್ಮಕ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದರು.

ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರಲು ಇರುವ ನಾಲ್ಕೂ ಪ್ರವೇಶ ರಸ್ತೆಗಳಲ್ಲಿ ಏಕಬಳಕೆ ಪ್ಲಾಸ್ಟಿಕ್ ತಪಾಸಣೆಗಾಗಿ ಚಕ್ ಪೋಸ್ಟ್ ಸ್ಥಾಪಿಸಲು ಆದೇಶ ನೀಡಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದರ್ಶನಾನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಾವು ಇಂದು ದೇವಾಲಯಕ್ಕೆ ಬರುವಾಗ ರಸ್ತೆಯ ಬದಿಯಲ್ಲಿ ಪ್ಲಾಸ್ಟಿಕ್ ಬಾಟಲಿ, ತಟ್ಟೆ ಇತ್ಯಾದಿ ಬಿದ್ದಿರುವುದನ್ನು ನೋಡಿ ಆತಂಕವಾಯಿತು. ಕೂಡಲೇ ಅಧಿಕಾರಿಗಳ ಸಭೆ ನಡೆಸಿ ಚಕ್ ಪೋಸ್ಟ್ ಸ್ಥಾಪಿಸಿ 2 ಹಂತದ ತಪಾಸಣೆ ಮಾಡಲು ಸೂಚಿಸಿರುವುದಾಗಿ ತಿಳಿಸಿದರು.

ರಾಜ್ಯದಲ್ಲಿ ಡೀಮ್ಡ್ ಅರಣ್ಯಕ್ಕೆ ಸಂಬಂಧಿಸಿದಂತೆ ಸಮಸ್ಯೆ ಇದೆ. ಬಿಜೆಪಿ ಕಾರ್ಯಕಾಲದಲ್ಲಿ 2022ರಲ್ಲಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ 3.33ಲಕ್ಷ ಹೆಕ್ಟೇರ್ ಭೂಮಿ ಡೀಮ್ಡ್ ಎಂದು ಉಲ್ಲೇಖಿಸಲಾಗಿದೆ. ಆದರೆ ಇದರಲ್ಲೂ ಅಂಗನವಾಡಿ, ಸರ್ಕಾರಿ ಆಸ್ಪತ್ರೆ, ಪಟ್ಟಾ ಭೂಮಿ ಇದ್ದು, ಈ ಸಮಸ್ಯೆ ಪರಿಹರಿಸಲು ಕಂದಾಯ ಇಲಾಖೆಯ ಜೊತೆಯಲ್ಲಿ ಜಂಟಿ ಸರ್ವೆ ನಡೆಸುತ್ತಿರುವುದಾಗಿ ಹೇಳಿದರು.

ಕಂದಾಯ ಇಲಾಖೆಯಲ್ಲಿ ಮೋಜಿಣಿದಾರರು ಕೆಲ ತಿಂಗಳಿಂದ ಮುಷ್ಕರ ನಡೆಸುತ್ತಿದ್ದಾರೆ. ಜೊತೆಗೆ ಸರ್ವೆಯರ್ ಗಳ ಕೊರತೆ ಇರುವುದಾಗಿ ಉಡುಪಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಅರಣ್ಯ ಜಂಟಿ ಸರ್ವೆಗಾಗಿಯೇ ವಿಶೇಷವಾಗಿ ಸಿಬ್ಬಂದಿ ನಿಯೋಜಿಸಲು ತಿಳಿಸಿದ್ದು ಈ ಬಗ್ಗೆ ಕಂದಾಯ ಸಚಿವರೊಂದಿಗೆ ಸಮಾಲೋಚಿಸುವುದಾಗಿ ಮಾಹಿತಿ ನೀಡಿದರು.

ಮಾನವನ ಜೀವ ಅತ್ಯಮೂಲ್ಯವಾಗಿದ್ದು ಒಂದೇ ಒಂದು ಪ್ರಾಣಹಾನಿಯೂ ಆಗಬಾರದು, ಈ ನಿಟ್ಟಿನಲ್ಲಿ ಕ್ರಮ ವಹಿಸಲು ಅರಣ್ಯಾಧಿಕಾರಿಗಳಿಗೆ ತಿಳಿಸಲಾಗಿದೆ. ವನ್ಯಜೀವಿಗಳ ಸಂಚಾರದ ಬಗ್ಗೆ ನಿಗಾ ಇಡಲು ಡ್ರೋನ್ ಸೇರಿದಂತೆ ಅತ್ಯಾಧುನಿಕ ಉಪಕರಣಗಳನ್ನು ಬಳಸಲಾಗುತ್ತಿದೆ. ಕಮಾಂಡ್ ಸೆಂಟರ್ ತೆರೆಯಲಾಗಿದೆ ಎಂದರು.

ಕುಕ್ಕೆ ಸುಬ್ರಹ್ಮಣ್ಯಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಅವರ ಮೇಲೆ ವನ್ಯಜೀವಿ ದಾಳಿ ಮಾಡದಂತೆ ಎಚ್ಚರ ವಹಿಸಲು ಮತ್ತು ಚಿರತೆ ಸಮಸ್ಯೆ ಇರುವ ಕಡೆಗೆ ಹೆಚ್ಚಿನ ಬೋನು ನೀಯೋಜಿಸಲು ಮತ್ತು ಆನೆಗಳು ಬಾರದಂತೆ ಕಂದಕ ಕಾಮಗಾರಿ ಪೂರ್ಣಗೊಳಿಸಲು ಮತ್ತು ಸೌರ ತಂತಿ ಬೇಲಿ ಅಳವಡಿಸಲು ಸೂಚಿಸಿದರು.

ಕುಮಾರಧಾರಾ ನದಿಗೆ ತ್ಯಾಜ್ಯವನ್ನು ನೇರವಾಗಿ ಹರಿಯಬಿಡುತ್ತಿರುವವರ ಮೇಲೆ ಕ್ರಮ ವಹಿಸಲು ಸೂಚಿಸಿದ ಈಶ್ವರ ಖಂಡ್ರೆ, ಸ್ಥಳೀಯ ಸಂಸ್ಥೆಗಳು ಈ ಬಗ್ಗೆ ನಿಗಾ ಇಡಬೇಕು, ತ್ಯಾಜ್ಯ ಜಲ ಸಂಸ್ಕರಣಾ ಘಟಕಗಳ ಪರಿಶೀಲನೆ ಮಾಡಬೇಕು, ಯಾರೇ ಸಂಸ್ಕರಿಸದೆ ತ್ಯಾಜ್ಯ ನದಿಗೆ ಬಿಟ್ಟಿದ್ದರೆ ಮೊದಲಿಗೆ ಎಚ್ಚರಿಕೆ ನೀಡಬೇಕು. ಪದೇ ಪದೇ ಇದೇ ತಪ್ಪು ಮಾಡಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *