Menu

ಡಿಜಿಟಲ್‌ ಅರೆಸ್ಟ್‌ ವಂಚನೆ: ಮಹಿಳೆಯಿಂದ ದೋಚಿದ್ದು 24 ಕೋಟಿ ರೂ.

Cyber fraud

ಡಿಜಿಟಲ್​​ ಅರೆಸ್ಟ್​​ ಎಂದು ಬೆದರಿಸಿದ ಸೈಬರ್‌ ವಂಚಕರು ಬೆಂಗಳೂರಿನ ಮಹಿಳೆಯೊಬ್ಬರಿಂದ 24 ಕೋಟಿ ರೂಪಾಯಿ ಸುಲಿಗೆ ಮಾಡಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ತನ್ನ ಬಳಿ ಇದ್ದ ಬಂಗಾರದ ಒಡವೆಗಳನ್ನು ಬ್ಯಾಂಕ್​​ನಲ್ಲಿ ಅಡ ಇಡಲು ಬಂದ ಕಾರಣ ಮಹಿಳೆ ಮತ್ತಷ್ಟು ವಂಚನೆಯಿಂದ ಪಾರಾಗಿದ್ದಾರೆ. ಜನವರಿಯಿಂದಲೇ ಆರೋಪಿಗಳು ಹಣ ಸುಲಿಗೆ ಆರಂಭಿಸಿದ್ದರು. ಬ್ಯಾಂಕ್‌ ಮ್ಯಾನೇಜರ್‌ ಸಮಯಪ್ರಜ್ಞೆಯಿಂದ ಆಕೆ ಇನ್ನಷ್ಟು ಹಣ ಕಳೆದುಕೊಲ್ಳುವುದು ತಪ್ಪಿದೆ.

ಶಿವಾಜಿನಗರ ನಿವಾಸಿ ಲಕ್ಷ್ಮೀ ಎಂಬವರಿಗೆ ಆಸ್ತಿ ಮಾರಿದ್ದರಿಂದ ಬಹಳಷ್ಟು ಹಣ ಬಂದಿದೆ. ಆಕೆಯ ಹಣದ ವಹಿವಾಟಿನ ಮಾಹಿತಿ ಪಡೆದ ಆರೋಪಿಗಳು ಡಿಜಿಟಲ್​​ ಅರೆಸ್ಟ್​​ ಹೆಸರಲ್ಲಿ ಹೆದರಿಸಿದ್ದಾರೆ.  ಅಕ್ರಮ ಹಣ ವರ್ಗಾವಣೆ ಆಗಿದೆ ಎಂದು ಭಯ ಹುಟ್ಟಿಸಿ , ಜನವರಿಯಿಂದ ಮೇ ತಿಂಗಳವರೆಗೆ ಒಟ್ಟು 24 ಕೋಟಿ ರೂಪಾಯಿ ಅವರಿಂದ ದೋಚಿದ್ದಾರೆ. ಮತ್ತೂ ಹಣ ಕೇಳಿದಾಗ ಆಕೆ ಮನೆಯಲ್ಲಿದ್ದ 1 ಕೆಜಿ 300 ಗ್ರಾಂ ಚಿನ್ನ ಅಡವಿಟ್ಟು ಹಣ ಪಡೆಯಲು ಬ್ಯಾಂಕ್​​ಗೆ ತೆರಳಿದ್ದರು. ಇದನ್ನು ಗಮನಿಸಿದ ಬ್ರಾಂಚ್ ಮ್ಯಾನೇಜರ್​​, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬ್ಯಾಂಕ್​​ಗೆ ಬಂದ ಸಿಸಿಬಿ ಸೈಬರ್​​ ಪೊಲೀಸರು, ಲಕ್ಷ್ಮೀ ಅವರನ್ನು ಈ ಸಂಬಂಧ ವಿಚಾರಿಸಿದ್ದಾರೆ. ಆರಂಭದಲ್ಲಿ ಏನನ್ನೂ ಅವರು ಬಹಿರಂಗಪಡಿಸಿಲ್ಲ. ಹೆಚ್ಚಿನ ವಿಚಾರಣೆ ನಡೆಸಿದಾಗ ಡಿಜಿಟಲ್​​ ಅರೆಸ್ಟ್​​ ವಿಚಾರ ತಿಳಿಸಿದ್ದಾರೆ. ಸಂತ್ರಸ್ತೆಯಿಂದ ದೂರು ಪಡೆದಿರುವ ಪೊಲೀಸರು, ವಿದೇಶದಲ್ಲಿರುವ ಅವರ ಮಕ್ಕಳಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಮುಂಬೈ ,ಅಲಹಬಾದ್, ದೆಹಲಿ ಮೂಲದ ಆರೋಪಿಗಳಾದ ಗೌರವ್ ಕುಮಾರ್ , ಓಂ ಪ್ರಕಾಶ್ ರಾಜ್ ಪುತ್ ಸೇರಿದಂತೆ ಐವರನ್ನು ಅರೆಸ್ಟ್ ಮಾಡಿದ್ದಾರೆ. ದೋಚಿದ್ದ ಹಣವನ್ನು ಆರೋಪಿಗಳು 22 ಖಾತೆಗಳಿಗೆ ವರ್ಗಾಯಿಸಿದ್ದು, 60 ಲಕ್ಷ ರೂ. ಇರುವ ಅಕೌಂಟ್ ಅನ್ನು ಪೊಲೀಸರು ಸೀಜ್‌ ಮಾಡಿದ್ದಾರೆ.

Related Posts

Leave a Reply

Your email address will not be published. Required fields are marked *