ಮಾಡೆಲ್ ತ್ವಿಷಾ ಶರ್ಮಾ ನಿಗೂಢ ಸಾವು ಪ್ರಕರಣದ ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ಪ್ರಕರಣದ ಸ್ವಯಪ್ರೇರಿತ ವಿಚಾರಣೆಗೆ ಮುಂದಾಗಿರುವ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಹಾಗೂ ಹೇಳಿಕೆಗಳನ್ನು ಪ್ರಕಟಿಸಬಾರದು ಎಂದು ಮಾಧ್ಯಮಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಪ್ರಕರಣದ ತನಿಖೆ ಮುಂದುವರಿದಿರುವ ಸನ್ನಿವೇಶದಲ್ಲಿ ಮಾಧ್ಯಮಗಳ ವರದಿಗಾರಿಕೆ ಮತ್ತು ನಡೆ ಕುರಿತು ಕೋರ್ಟ್ ಕಿಡಿ ಕಾರಿದೆ. ಕೆಲವು ನಡೆಗಳು ನೊಂದ ಕುಟುಂಬಕ್ಕೆ ಮತ್ತಷ್ಟು ನೋವುಂಟು ಮಾಡಿವೆ. ಕುಟುಂಬದವರ ಹೇಳಿಕೆಗಳನ್ನು ಪರಿವರ್ತಿಸಿ ಪ್ರಸಾರ ಮಾಡುವುದು ಸರಿಯಲ್ಲ. ಪ್ರಕರಣದ ಸತ್ಯಾಂಶ ಬಹಿರಂಗವಾಗುವವರೆಗೆ ತನಿಖೆಗೆ ಅವಕಾಶ ನೀಡಬೇಕು ಎಂದು ಹೇಳಿದೆ.
ಮಾಧ್ಯಮಗಳು ತನಿಖೆಗೆ ಸಂಬಂಧಿಸಿದ ಸಾಕ್ಷಿದಾರರಾಗುವ ಸಾಧ್ಯತೆ ಇರುವವರ ಹೇಳಿಕೆಗಳನ್ನು ನಿರಂತರವಾಗಿ ಪ್ರಸಾರ ಮಾಡಿ ತನಿಖೆಯ ದಿಕ್ಕಿನ ಮೇಲೆ ಪರಿಣಾಮ ಬೀರುವಂತೆ ಆಗಬಾರದು ಎಂದು ಕೋರ್ಟ್ ಎಚ್ಚರಿಕೆ ನೀಡಿದೆ. ನೊಂದ ಮತ್ತು ಆರೋಪಿತರ ಕುಟುಂಬದವರು ಸಾರ್ವಜನಿಕ ವೇದಿಕೆಗಳಲ್ಲಿ ಹೇಳಿಕೆ ನೀಡುವುದಕ್ಕಿಂತ ತನಿಖಾ ಸಂಸ್ಥೆಗಳ ಮುಂದೆ ಹೇಳಿಕೆಗಳನ್ನು ದಾಖಲಿಸಬೇಕು ಎಂದು ಸೂಚಿಸಿದೆ.
ಮಧ್ಯಪ್ರದೇಶ ಹೈಕೋರ್ಟ್ ತ್ವರಿತವಾಗಿ ಎರಡನೇ ಬಾರಿಯ ಮರಣೋತ್ತರ ಪರೀಕ್ಷೆಗೆ ಆದೇಶ ನೀಡಿದ್ದ ಕ್ರಮವನ್ನೂ ಸುಪ್ರೀಂ ಕೋರ್ಟ್ ಒಪ್ಪಿದೆ, ಆರೋಪಿತರ ಪರ ವಕೀಲರು ಮಾಧ್ಯಮಗಳ ಮುಂದೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಭರವಸೆ ನೀಡಿದರು.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ತ್ರಿಸದಸ್ಯ ಪೀಠವು ಈ ಪ್ರಕರಣದ ನಿಷ್ಪಕ್ಷಪಾತ ತನಿಖೆಗಾಗಿ ಈ ಮಹತ್ವದ ಆದೇಶ ನೀಡಿದೆ. ಸಾಲಿಸಿಟರ್ ಜನರಲ್, ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವ ವಿಚಾರವನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಸುಪ್ರೀಂ ಕೋರ್ಟ್, ದೇಶದ ಪ್ರಮುಖ ತನಿಖಾ ಸಂಸ್ಥೆಯಾದ ಸಿಬಿಐ ಮೇಲೆ ವಿಶ್ವಾಸ ಇಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ.
33 ವರ್ಷದ ಮಾಜಿ ‘ಮಿಸ್ ಪುಣೆ’ ಹಾಗೂ ನಟಿ ತ್ವಿಷಾ ಶರ್ಮಾ ಮೇ 12, 2026 ರಂದು ಭೋಪಾಲ್ನಲ್ಲಿರುವ ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮದುವೆಯಾದ ಐದು ತಿಂಗಳಲ್ಲೇ ಈ ದುರಂತ ನಡೆದು ಹೋಗಿದೆ. ಪೋಷಕರು ಇದು ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.
ತ್ವಿಷಾ ಪತಿ, ವಕೀಲ ಸಮರ್ಥ್ ಸಿಂಗ್ ಮತ್ತು ತಾಯಿ ಗಿರಿಬಾಲಾ ಸಿಂಗ್ (ನಿವೃತ್ತ ಜಿಲ್ಲಾ ನ್ಯಾಯಾಧೀಶರು) ಪ್ರಮುಖ ಆರೋಪಿಗಳಾಗಿದ್ದಾರೆ. ಪತಿ ಸಮರ್ಥ್ ಸಿಂಗ್ ಪೊಲೀಸ್ ವಶದಲ್ಲಿದ್ದಾರೆ. ಆರೋಪಿಗಳ ಕುಟುಂಬವು ಕಾನೂನು ಹಿನ್ನೆಲೆ ಹೊಂದಿರುವುದರಿಂದ ತನಿಖೆಯಲ್ಲಿ ಲೋಪದೋಷಗಳು ನಡೆದಿವೆ ಎಂಬ ಆರೋಪ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ.


