Menu

ಮುಲ್ಕಿಯಲ್ಲಿ 35 ಲಕ್ಷ ರೂ. ಮೌಲ್ಯದ ಗಾಂಜಾ ವಶ: ಕಾಲೇಜು ವಿದ್ಯಾರ್ಥಿನಿ ಅರೆಸ್ಟ್‌

ಮಂಗಳೂರಿನ ಮುಲ್ಕಿ ಪೊಲೀಸರು ಕಾರ್ಯಾಚರಣೆ ನಡೆಸಿ ಲಕ್ಷಾಂತರ ರೂ. ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿದ್ದು, ಚೆನ್ನೈನಿಂದ ಮಂಗಳೂರಿಗೆ ಹೈಡ್ರೋವಿಡ್ ಗಾಂಜಾ ಸಾಗಾಟ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿನಿಯನ್ನು ಬಂಧಿಸಿದ್ದಾರೆ.

ಕಾಲೇಜು ವಿದ್ಯಾರ್ಥಿನಿ ಸುಹಾನಳನ್ನು ಬಂಧಿಸಿ 35 ಲಕ್ಷ ರೂಪಾಯಿ ಮೌಲ್ಯದ ಹೈಡ್ರೋವಿಡ್ ಗಾಂಜಾ ವಶಕ್ಕೆ ಪೆಯಲಾಗಿದೆ. ಆಕೆ ವಿರುದ್ಧ ಈಗಾಗಲೇ ಮಂಗಳೂರು ಮತ್ತು ಬೆಂಗಳೂರಿನಲ್ಲಿ ಪ್ರಕರಣ ದಾಖಲಾಗಿವೆ. ಬಂಧಿತ ಆರೋಪಿ ಸುಹಾನ ಶಿವಮೊಗ್ಗದ ಸಾಗರ ತಾಲೂಕಿನ ನಿವಾಸಿ. ಕುಂದಾಪುರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಅಂತಿಮ ವರ್ಷದ BCA ವಿದ್ಯಾರ್ಥಿನಿ. ಮುಲ್ಕಿ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಮಾದಕ ದ್ರವ್ಯ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಪಣಂಬೂರು ಎಸಿಪಿ ತಂಡ ಹಾಗೂ ಮುಲ್ಕಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನ್ ಮತ್ತು ಇತರ ದಾಖಲೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸುಹಾನ ಈ ಮಾದಕ ವಸ್ತುವನ್ನು ಚೆನ್ನೈನಿಂದ ಮಂಗಳೂರಿಗೆ ತರಿಸಿಕೊಂಡಿದ್ದಳು. ಕಾಲೇಜು ವಿದ್ಯಾರ್ಥಿಗಳು ಹಾಗೂ ಶ್ರೀಮಂತ ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಗಳಿಸುವ ಸಂಚು ರೂಪಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದೆ ಈಕೆಯ ವಿರುದ್ಧ ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಇಲಾಖೆಯಲ್ಲೂಮಾದಕ ದ್ರವ್ಯ ಸಾಗಾಟದ ಪ್ರಕರಣ ದಾಖಲಾಗಿದೆ. ಈ ಜಾಲದ ಹಿಂದೆ ಇರುವ ವ್ಯಕ್ತಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಹುಬ್ಬಳ್ಳಿ ಜೈನ ಮಂದಿರಗಳಲ್ಲಿ ಕಳವು
ಹುಬ್ಬಳ್ಳಿ-ಧಾರವಾಡ ನಗರದ ಜೈನ ಮಂದಿರಗಳನ್ನೇ ಗುರಿಯಾಗಿಸಿಕೊಂಡು ಸರಣಿ ಕಳ್ಳತನಗಳು ನಡೆಯುತ್ತಿದ್ದು, ಹುಬ್ಬಳ್ಳಿಯ ಹೊಸರು ಬಡಾವಣೆಯಲ್ಲಿರುವ ಜೈನ ಮಂದಿರಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ ಆಭರಣಗಳನ್ನು ದೋಚಿದ್ದಾರೆ.

ಕಳೆದ ವಾರ ಧಾರವಾಡದ ಜೈನ ಮಂದಿರ ಹಾಗೂ ಈ ಹಿಂದೆ ಹುಬ್ಬಳ್ಳಿಯ ಗೊಬ್ಬೂರು ಬಳಿಯ ಮಂದಿರದಲ್ಲಿ ಕಳ್ಳತನವಾಗಿತ್ತು. ಈಗ ಹೊಸರು ಬಡಾವಣೆಯ ಮಂದಿರದಲ್ಲಿ ಮೂವರು ಕಳ್ಳರು ಗರ್ಭಗುಡಿಯಲ್ಲಿದ್ದ ಬೆಳ್ಳಿ ಆಭರಣಗಳನ್ನು ದೋಚಿದ್ದಾರೆ. ಹುಂಡಿಯಲ್ಲಿದ್ದ ನೋಟುಗಳನ್ನು ಮಾತ್ರ ತೆಗೆದುಕೊಂಡು ಹೋಗಿರುವ ಕಳ್ಳರು ಚಿಲ್ಲರೆ ಹಣ ಬಿಟ್ಟು ಹೋಗಿದ್ದಾರೆ.

ಸಿಸಿಟಿವಿ ವೈರ್ ಕಟ್ ಮಾಡಿ ಸಾಕ್ಷ್ಯ ನಾಶಪಡಿಸಲು ಕಳ್ಳರು ಯತ್ನಿಸಿದ್ದು, ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕ್ರೈಮ್ ವಿಭಾಗದ ಡಿಸಿಪಿ ರವೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕಳ್ಳರ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ.

Related Posts

Leave a Reply

Your email address will not be published. Required fields are marked *