Menu

ಪ್ರತಿ ಟನ್ ಕಬ್ಬಿಗೆ ₹4,000 ನೀಡಲು ಕಾರ್ಖಾನೆ ಮಾಲೀಕರಿಗೆ ಸಿಎಂ ಡಿ.ಕೆ. ಶಿವಕುಮಾರ್ ಸೂಚನೆ: ಲಕ್ಷ್ಮಣ ಸವದಿ ಪ್ರಶಂಸೆ

ಉದಯಕಾಲ ನ್ಯೂಸ್, ಬೆಳಗಾವಿ: ರಾಜ್ಯದಲ್ಲಿ ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದಿಟ್ಟ ಹೆಜ್ಜೆ ಇರಿಸಿದ್ದು, ಪ್ರಸ್ತುತ ಸಕ್ಕರೆ ಧಾರಣೆಯ ಆಧಾರದ ಮೇಲೆ ಪ್ರತಿ ಟನ್ ಕಬ್ಬಿಗೆ ಕನಿಷ್ಠ 4,000 ರೂ.ಗಳನ್ನು ರೈತರಿಗೆ ನೀಡುವಂತೆ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಡಿ.ಕೆ. ಶಿವಕುಮಾರ್ ಅವರ ಈ ರೈತ ಪರ ಕಾಳಜಿಯ ನಿರ್ಧಾರವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಪ್ರತಿವರ್ಷ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸುವುದನ್ನು ತಪ್ಪಿಸಿ, ಸಂಘರ್ಷಕ್ಕೆ ಅವಕಾಶ ನೀಡದೆ ಶಾಶ್ವತ ಪರಿಹಾರ ಒದಗಿಸಲು ಸಿಎಂ ಸ್ವತಃ ಮುಂಚೂಣಿಯಲ್ಲಿ ನಿಂತು ಸಂಧಾನ ನಡೆಸಿರುವುದು ಅಭಿನಂದನಾರ್ಹ ಎಂದರು.

ಮಾರುಕಟ್ಟೆಯಲ್ಲಿ ಸಕ್ಕರೆ ದರ 48 ರೂ.ವರೆಗೆ ಇರುವ ಹಿನ್ನೆಲೆಯಲ್ಲಿ, ಇಂದಿನ ಸಕ್ಕರೆ ಧಾರಣೆಯ ಆಧಾರದಲ್ಲೇ ಪ್ರತಿ ಟನ್ ಕಬ್ಬಿಗೆ ಕನಿಷ್ಠ 4,000 ರೂ.ಗಳನ್ನು ರೈತರಿಗೆ ಕೊಡಬೇಕು ಎಂದು ಕಾರ್ಖಾನೆ ಮಾಲೀಕರಿಗೆ ಸಿಎಂ ಡಿ.ಕೆ. ಶಿವಕುಮಾರ್ ಸೂಚಿಸಿದ್ದಾರೆ. ಇದಕ್ಕೆ ಮಾಲೀಕರು ಎರಡು ದಿನಗಳ ಕಾಲಾವಕಾಶ ಕೋರಿದ್ದಾರೆ.
ರಾಜ್ಯದಲ್ಲಿ ತೀವ್ರ ಬರಗಾಲವಿದ್ದು, ನದಿಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ ಮತ್ತು ಕೊಳವೆಬಾವಿಗಳು ಬತ್ತುತ್ತಿವೆ. ಇದರಿಂದ ಕಬ್ಬು ಬೆಳೆ ಒಣಗುವ ಆತಂಕವಿರುವ ಕಾರಣ, ಕೂಡಲೇ ಕಾರ್ಖಾನೆಗಳನ್ನು ಆರಂಭಿಸಲು ರೈತರು ಮತ್ತು ಮಾಲೀಕರು ಸಹಕರಿಸುವಂತೆ ಸಿಎಂ ಮನವಿ ಮಾಡಿದ್ದಾರೆ.

ಅಥಣಿ ತಾಲೂಕಿನಿಂದ ಅಕ್ಕಪಕ್ಕದ ಮಹಾರಾಷ್ಟ್ರ ರಾಜ್ಯಕ್ಕೆ ಕಬ್ಬು ಕೊಂಡೊಯ್ಯುವುದನ್ನು ತಪ್ಪಿಸಿ, ರಾಜ್ಯದ ಕಾರ್ಖಾನೆಗಳಲ್ಲೇ ರೈತರಿಗೆ ನ್ಯಾಯಸಮ್ಮತ ಬೆಲೆ ಹಾಗೂ ನಿಖರ ತೂಕ ಸಿಗುವಂತೆ ಮನವರಿಕೆ ಮಾಡಿಕೊಡಲಾಗುವುದು ಎಂದು ಸಚಿವರು ತಿಳಿಸಿದರು. ತಾವೂ ಕೂಡ ಒಬ್ಬ ಕಬ್ಬು ಬೆಳೆಗಾರನಾಗಿ ರೈತರ ಕಷ್ಟ-ನಷ್ಟಗಳನ್ನು ಬಲ್ಲವನಾಗಿದ್ದು, ರೈತರ ದುಡಿಮೆಗೆ ತಕ್ಕ ಪ್ರತಿಫಲ ದೊರಕಿಸಿಕೊಡಲು ಸಿಎಂ ನೇತೃತ್ವದ ಸರ್ಕಾರ ಬದ್ಧತೆಯಿಂದ ಶ್ರಮಿಸುತ್ತಿದೆ ಎಂದು ಲಕ್ಷ್ಮಣ ಸವದಿ ಹೇಳಿದರು.

ಮಾತು ಮುಂದುವರಿಸಿದ ಸಚಿವರು, ಸಿಎಂ ಡಿ.ಕೆ. ಶಿವಕುಮಾರ್ ಅವರ ಈ ಸಮರ್ಥ ಹಾಗೂ ದಿಟ್ಟ ನಾಯಕತ್ವದಿಂದಾಗಿ ಕಬ್ಬು ಬೆಳೆಗಾರರ ದೀರ್ಘಕಾಲದ ಸಮಸ್ಯೆಗೆ ಶೀಘ್ರದಲ್ಲೇ ಸುಖಾಂತ್ಯ ಸಿಗುವ ವಿಶ್ವಾಸವಿದೆ ಎಂದರು. ರೈತರು ಮತ್ತು ಕಾರ್ಖಾನೆ ಮಾಲೀಕರ ನಡುವೆ ಪರಸ್ಪರ ಒಪ್ಪಂದದ ಮೂಲಕ ಸೌಹಾರ್ದಯುತ ತೀರ್ಮಾನ ಹೊರಬರಲಿದೆ ಎಂದು ಅವರು ತಿಳಿಸಿದರು.
#CMDKShivakumar #SugarcanePrice #LaxmanSavadi #BelagaviNews #UdayakalaNews #KarnatakaGovt #SugarcaneFarmers #KarnatakaPolitics #SuvarnaSoudha

Related Posts

Leave a Reply

Your email address will not be published. Required fields are marked *