Menu

ಇಂದು ಸಂಜೆ ಸಿಎಲ್‌ಪಿ ಸಭೆ: ನೂತನ ಸಿಎಂ ಆಯ್ಕೆ

ಇಂದು (ಶನಿವಾರ) ಸಂಜೆ ವಿಧಾನಸೌಧದಲ್ಲಿ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆ ನಡೆಯಲಿದ್ದು, ರಾಜ್ಯದ ನೂತನ ಮುಖ್ಯಮಂತ್ರಿಯ ಆಯ್ಕೆ ಪ್ರಕ್ರಿಯೆ ನಡೆಯಲಿದೆ.  ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಹೆಸರು ಮುಖ್ಯಮಂತ್ರಿ ಹುದ್ದೆಗೆ ಬಹುತೇಕ ಅಂತಿಮವಾಗಿದ್ದು, ಇಂದಿನ ಸಭೆಯಲ್ಲಿ ಹೈಕಮಾಂಡ್ ಅಧಿಕೃತ ತೀರ್ಮಾನ ಪ್ರಕಟಿಸಲಿದೆ.

ಸಂಜೆ ನಾಲ್ಕು ಗಂಟೆಗೆ ವಿಧಾನಸೌಧದ ಕಾನ್ಫರೆನ್ಸ್ ಹಾಲ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದ್ದು, ಸಿಎಂ ಸಿದ್ದರಾಮಯ್ಯ ಮೂಲಕವೇ ಡಿಕೆ ಶಿವಕುಮಾರ್ ಹೆಸರನ್ನು ಪ್ರಸ್ತಾಪಿಸುವಂತೆ ಹೈಕಮಾಂಡ್ ಸಭೆಯನ್ನು ರೂಪಿಸಿದೆ.
ಜೂನ್ 5, 6 ಅಥವಾ 7 ರಂದು ನೂತನ ಸಿಎಂ ಪದಗ್ರಹಣಕ್ಕೆ ಡಿಕೆ ಶಿವಕುಮಾರ್‌ ಅವರ ಆಪ್ತ ಜ್ಯೋತಿಷಿ ದ್ವಾರಕನಾಥ್ ದಿನ ನಿಗದಿಗೊಳಿಸಿದ್ದಾರೆ ಎನ್ನಲಾಗಿದೆ.

ನೂತನ ಸರ್ಕಾರ ಹಾಗೂ ಸಂಪುಟ ರಚನೆಗೆ ಶಿವಕುಮಾರ್  ನೀಲನಕ್ಷೆ ಸಿದ್ಧಪಡಿಸಿಕೊಂಡಿದ್ದಾರೆ. ದೆಹಲಿಗೆ ತೆರಳುವಾಗ ವಿಮಾನದಲ್ಲೇ ಸಂಭಾವ್ಯ ಸಚಿವರ ಪಟ್ಟಿಯನ್ನು ಹಿಡಿದು ಪರಿಶೀಲನೆ ನಡೆಸಿದ್ದ ಡಿಕೆಶಿ, ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ಪ್ರಮಾಣವಚನ ಸ್ವೀಕರಿಸಲಿರುವ ಸಚಿವರ ಪಟ್ಟಿಯನ್ನು ಗೌಪ್ಯವಾಗಿಟ್ಟಿದ್ದಾರೆ. ನೂತನ ಮುಖ್ಯಮಂತ್ರಿಗಳ ಪದಗ್ರಹಣ ಸಮಾರಂಭವನ್ನು ವಿಧಾನಸೌಧದ ಮುಂಭಾಗ ನಡೆಸಬೇಕೇ ಅಥವಾ ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಬೇಕೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

Related Posts

Leave a Reply

Your email address will not be published. Required fields are marked *