Thursday, October 15, 2026
Menu

ಅಕ್ಟೋಬರ್ 23ರಿಂದ ದೇಶಾದ್ಯಂತ ಬೃಹತ್ ಜನಾಂದೋಲನ ಹಾಗೂ ಪ್ರತಿಭಟನೆಗೆ ಸಿಜೆಪಿ ಸಜ್ಜು!

ಉದಯಕಾಲ ನ್ಯೂಸ್, ನವದೆಹಲಿ: ಚುನಾವಣಾ ಆಯೋಗದ (Election Commission) ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರೀ ಅಕ್ರಮಗಳು ನಡೆದಿವೆ ಎಂದು ಗಂಭೀರ ಆರೋಪ ಮಾಡಿರುವ ಕಾಕ್ರೋಚ್ ಜನತಾ ಪಾರ್ಟಿ (CJP), ಇದರ ವಿರುದ್ಧ ಅಕ್ಟೋಬರ್ 23ರಿಂದ ದೇಶಾದ್ಯಂತ ಉಗ್ರ ಜನಾಂದೋಲನವನ್ನು ಪ್ರಾರಂಭಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ. ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿರುವ ಸಿಜೆಪಿ ನಾಯಕರು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ಅವರನ್ನು ತಕ್ಷಣವೇ ಪದಚ್ಯುತಗೊಳಿಸಬೇಕೆಂಬ ತಮ್ಮ ಬೇಡಿಕೆಯನ್ನು ಮತ್ತೊಮ್ಮೆ ಬಲವಾಗಿ ಪುನರುಚ್ಚರಿಸಿದ್ದಾರೆ.

ಮುಂದಿನ ದಿನಗಳಲ್ಲಿ ಚುನಾವಣೆ ನಡೆಯಲಿರುವ ವಿವಿಧ ರಾಜ್ಯಗಳಿಗೂ ತಮ್ಮ ಅಭಿಯಾನವನ್ನು ವಿಸ್ತರಿಸಲು ಸಿಜೆಪಿ ನಿರ್ಧರಿಸಿದೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಡೆದಿವೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದ ಪ್ರಮುಖ ಪುರಾವೆಗಳನ್ನು ಸಂಗ್ರಹಿಸಿ ಸಾರ್ವಜನಿಕರ ಮುಂದಿಡಲಾಗುವುದು ಎಂದು ಪಕ್ಷ ತಿಳಿಸಿದೆ. ರೈತರು, ದಲಿತರು, ವಿದ್ಯಾರ್ಥಿಗಳು ಹಾಗೂ ಯುವ ಜನತೆಯನ್ನು ಒಗ್ಗೂಡಿಸಿ ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡಲಾಗುವುದು ಎಂದು ಸಿಜೆಪಿ ಮುಖಂಡರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಕಪಿಮುಷ್ಟಿಯಲ್ಲಿ ನಲುಗಿದ್ದ ಹಿಂದಿನ ದೆಹಲಿ ಪ್ರತಿಭಟನೆ

ಇತ್ತೀಚೆಷ್ಟೇ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಸಿಜೆಪಿ ನೇತೃತ್ವದಲ್ಲಿ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಅಕ್ಟೋಬರ್ 10ರಂದು ಜಂತರ್ ಮಂತರ್ ಬಳಿ ನಡೆದ ಆ ಪ್ರತಿಭಟನೆಯನ್ನು ಪೊಲೀಸರ ಬಲಪ್ರಯೋಗ ಬಳಸಿ ಕೇಂದ್ರ ಸರ್ಕಾರ ಹೋರಾಟವನ್ನೇ ಮೊಟಕುಗೊಳಿಸಿತ್ತು. ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಸೇರಿದಂತೆ ಹಲವು ಮುಖಂಡರನ್ನು ಸ್ಥಳದಲ್ಲೇ ಬಂಧಿಸಲಾಗಿತ್ತು.

ಕೇಂದ್ರ ದೆಹಲಿಯಾದ್ಯಂತ ಭಾರಿ ಪೊಲೀಸ್‌ ಪಡೆಗಳೊಂದಿಗೆ ದಿಗ್ಬಂಧನ ಸೃಷ್ಟಿಸಿ, ಬ್ಯಾರಿಕೇಡ್‌ಗಳ ನಿರ್ಮಿಸಿ, ಸಾರ್ವಜನಿಕ ಸಾರಿಗೆ ಹಾಗೂ ಇಂಟರ್ನೆಟ್ ಸೇವೆಗಳ ಮೇಲೂ ನಿರ್ಬಂಧ ಹೇರಲಾಗಿತ್ತು. ಜಂತರ್ ಮಂತರ್ ಬದಲು ಕನ್ನಾಟ್ ಪ್ಲೇಸ್, ದಿಲ್ಲಿ ಹಾತ್ ಮತ್ತು ರಾಜ್‌ಘಾಟ್ ಪ್ರದೇಶಗಳಲ್ಲಿ ಪ್ರತಿಭಟನಾಕಾರರು ಸಣ್ಣಪುಟ್ಟ ಪ್ರತಿಭಟನೆಗಳನ್ನು ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು. ಆ ಬಂಧನ ಹಾಗೂ ನಿರ್ಬಂಧಗಳ ಬೆನ್ನಲ್ಲೇ ಇದೀಗ ಅಕ್ಟೋಬರ್ 23ರಿಂದ ರಾಷ್ಟ್ರವ್ಯಾಪಿ ಹೊಸ ಹಂತದ ಹೋರಾಟಕ್ಕೆ ಸಿಜೆಪಿ ರಣಕಹಳೆ ಮೊಳಗಿಸಿದೆ. ಮುಂದೆ ಸಿಜೆಪಿ ಹೋರಾಟ ಯಾವ ಸ್ವರೂಪ ಪಡೆದುಕೊಳ್ಳುವುದೇ ಕಾದು ನೋಡಬೇಕಿದೆ.
#CJP #CockroachJanataParty #ElectionCommission #SIRControversy #GyaneshKumar #DelhiProtest #Udayakala #NationalNews #LatestUpdates

Related Posts

Leave a Reply

Your email address will not be published. Required fields are marked *