ಸಿಐಡಿ ವಿಭಾಗದ ಇನ್ಸ್‌ಪೆಕ್ಟರ್ ತಂಡ ಕಟ್ಟಿಕೊಂಡು ಪೊಲೀಸ್ ಜೀಪ್‌ನಲ್ಲಿ ಬೆಂಗಳೂರಿನ ಮಡಿವಾಳದ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದ ಕೇರಳದ ಉದ್ಯಮಿಗಳನ್ನು ಬೆದರಿಸಿ 20 ಲಕ್ಷ ರೂಪಾಯಿ ದರೋಡೆ ಮಾಡಿದ್ದಾರೆ. ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ದರೋಡೆಯ ಸಂಚು ರೂಪಿಸಿದ್ದು, ಪೊಲೀಸರ ತನಿಖೆ ತೀವ್ರಗೊಳ್ಳುತ್ತಿದ್ದಂತೆಯೇ ಪರಾರಿಯಾಗಿದ್ದಾರೆ.
ವ್ಯಾಪಾರ ಉದ್ದೇಶಗಳಿಗಾಗಿ ಹಣದೊಂದಿಗೆ ಬಂದಿದ್ದ ಕೇರಳದ ಉದ್ಯಮಿಗಳು ಮಡಿವಾಳದ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಬಗ್ಗೆ ನಿಖರ ಮಾಹಿತಿ ಪಡೆದಿದ್ದ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ, ಹ್ಯಾರಿಸ್, ಕುಪೇಂದ್ರ, ಶಪಿ ಮತ್ತು ಶಾನಿ ಎಂಬ ನಾಲ್ವರೊಂದಿಗೆ ಸೇರಿ ದರೋಡೆಗೆ ಸಂಚು ರೂಪಿಸಿದ್ದಾರೆ.
ಹೋಟೆಲ್ ಮುಂಭಾಗ ಅಧಿಕೃತ ಸಿಐಡಿ ಪೊಲೀಸ್ ಜೀಪ್ ನಿಲ್ಲಿಸಿ ಇನ್ಸ್‌ಪೆಕ್ಟರ್ ಮಹೇಶ್ ಒಳಗೆ ಕುಳಿತಿದ್ದರು. ಗ್ಯಾಂಗ್‌ನ ಇಬ್ಬರು ಹೋಟೆಲ್ ಕೋಣೆಗೆ ನುಗ್ಗಿ ತಾವು ಪೊಲೀಸರೆಂದು ಇನ್ಸ್‌ಪೆಕ್ಟರ್ ಅವರ ಅಧಿಕೃತ ಗುರುತಿನ ಚೀಟಿ ತೋರಿಸಿ, ಅಕ್ರಮವಾಗಿ ಟ್ರೇಡಿಂಗ್ ಮಾಡಲು ಹಣ ತಂದಿದ್ದೀರಿ ಎಂದು ಉದ್ಯಮಿಗಳನ್ನು ಬೆದರಿಸಿದ್ದಾರೆ. ಅವರಿಂದ 20 ಲಕ್ಷ ರೂಪಾಯಿ ನಗದನ್ನು ಕಸಿದುಕೊಂಡು ಹೊರಗೆ ನಿಂತಿದ್ದ ಪೊಲೀಸ್ ಜೀಪ್‌ನಲ್ಲೇ ಪರಾರಿಯಾಗಿದ್ದಾರೆ.
ಹಣ ಕಳೆದುಕೊಂಡ ಉದ್ಯಮಿಗಳು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ತಕ್ಷಣ ಕಾರ್ಯಾಚರಣೆ ಕೈಗೊಂಡ ಮಡಿವಾಳ ಠಾಣೆ ಪೊಲೀಸರು ದರೋಡೆ ತಂಡದಲ್ಲಿದ್ದ ಕುಪೇಂದ್ರ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಇಡೀ ಪ್ರಕರಣದ ಮಾಹಿತಿ ಹೊರ ಬಂದಿದೆ. ಪ್ರಕರಣದ ಪ್ರಮುಖ ರೂವಾರಿ ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಎಂಬುದು ಗೊತ್ತಾಗಿದೆ.
ಕುಪೇಂದ್ರ ಅರೆಸ್ಟ್ ಆಗುತ್ತಿದ್ದಂತೆಯೇ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಹಾಗೂ ಉಳಿದ ಮೂವರು ಆರೋಪಿಗಳು ನಾಪತ್ತೆಯಾಗಿದ್ದಾರೆ. ಪೊಲೀಸರು ದರೋಡೆಗೆ ಬಳಸಲಾಗಿದ್ದ ಸಿಐಡಿ ಜೀಪನ್ನು ಜಪ್ತಿ ಮಾಡಿದ್ದು, ತಲೆಮರೆಸಿಕೊಂಡಿರುವ ನಾಲ್ವರಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.


