Menu

ಶಿವಗಂಗೆ ಶಾಂತಲಾ ಡ್ರಾಪ್‌ನಲ್ಲಿ ಮೃತದೇಹ: ನಾಪತ್ತೆಯಾಗಿರುವ ಟೆಕ್ಕಿಯದಾ?

ಶಿವಗಂಗೆ ಬೆಟ್ಟದಲ್ಲಿ ಟೆಕ್ಕಿ ಅದ್ವೈತ್ ಉಪಾಧ್ಯಾಯ ನಾಪತ್ತೆಯಾಗಿ ಐದು ದಿನಗಳಾಗಿದ್ದು, ಬೆಟ್ಟದ ಶಾಂತಲಾ ಡ್ರಾಪ್‌ ಕಂದಕದಲ್ಲಿ ಮೃತದೇಹವೊಂದು ಇರುವುದನ್ನು ಡ್ರೋನ್‌ ಕ್ಯಾಮೆರಾ ಪತ್ತೆ ಹಚ್ಚಿದೆ, ಈ ಮೃತದೇಹ ಅದ್ವೈತ್‌ ಅವರುದು ಆಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಶುಕ್ರವಾರ ಬೆಳಗ್ಗೆ ಟ್ರೆಕ್ಕಿಂಗ್‌ಗೆ ಹೋಗಿದ್ದ ಅದವೈತ್‌ ನಿಗೂಢವಾಗಿ ನಾಪತ್ತೆಯಾಗಿದ್ದ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ , ರಾಜ್ಯ ವಿಪತ್ತು ನಿರ್ವಹಣಾ ಪಡೆ , ಅರಣ್ಯ ಇಲಾಖೆ ಮತ್ತು ಪೊಲೀಸರು ಶಿವಗಂಗೆ ಬೆಟ್ಟಗಳ ಅಪಾಯಕಾರಿ ಇಳಿಜಾರುಗಳಲ್ಲಿ ಶೋಧ ನಡೆಸುತ್ತಿದ್ದಾರೆ. ಅತ್ಯಂತ ಕಡಿದಾದ ಮತ್ತು ಅಪಾಯಕಾರಿ ಜಾಗವಾಗಿರುವ ಶಾಂತಲಾ ಡ್ರಾಪ್‌ನ ತಳದಲ್ಲಿ ದಟ್ಟವಾದ ಕಾಡಿನ ಮಧ್ಯೆ ಒಂದು ದೇಹ ಕಂಡು ಬಂದಿದೆ ಎಂದು ಹೇಳಲಾಗಿದೆ.

ಅದ್ವೈತ್ ಹುಡುಕಾಟತಂಡಗಳು ನಿಯೋಜಿಸಿದ ಡ್ರೋನ್‌ಗಳು ಈ ದೃಶ್ಯವನ್ನು ಸೆರೆ ಹಿಡಿದಿವೆ.  ನಿರಂತರ ಮಳೆ, ಜಾರು ಬಂಡೆಗಳು ಮತ್ತು ಅಪಾಯಕಾರಿ ಕಂದಕಗಳಿಂದಾಗಿ ರಕ್ಷಣಾ ಸಿಬ್ಬಂದಿಗೆ ಆ ಸ್ಥಳ ತಲುಪಲು ಸಾಧ್ಯವಾಗಿಲ್ಲ. ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆ. ಆತ ಬಾಡಿಗೆಗೆ ಪಡೆದಿದ್ದ ಮೋಟಾರ್ ಸೈಕಲ್ ಬೆಟ್ಟದ ತಪ್ಪಲಿನಲ್ಲಿ ಸಿಕ್ಕಿದೆ. ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಬೆಟ್ಟದ ತಪ್ಪಲಿನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅದ್ವೈತ್ ಬೆಳಿಗ್ಗೆ 7.30ಕ್ಕೆ ಮೋಟಾರ್ ಸೈಕಲ್ ನಿಲ್ಲಿಸಿ ಮುಂದೆ ಸಾಗಿರುವುದು ದಾಖಲಾಗಿದೆ. ಬೆಟ್ಟದ ತುದಿಯಿಂದ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿ ಪ್ರಾಪ್ತಿ ಚೌಹಾಣ್‌ಗೆ ಸೆಲ್ಫಿ ಕಳುಹಿಸಿದ್ದರು. ಸ್ವಲ್ಪ ಸಮಯದ ನಂತರ ಅವರ ಫೋನ್ ಸ್ವಿಚ್ ಆಫ್ ಆಗಿತ್ತು.

ಮಳೆ ನಿಂತ ಬಳಿಕ ಶಾಂತಲಾ ಡ್ರಾಪ್ ತಳಕ್ಕೆ ಸಿಬ್ಬಂದಿ ಇಳಿಯುವ ಪ್ರಯತ್ನ ನಡೆಸಲಿದ್ದಾರೆ. ಡ್ರೋನ್‌ನಲ್ಲಿ ಕಂಡುಬಂದ ದೃಶ್ಯವನ್ನು ಖಚಿತಪಡಿಸಿಕೊಳ್ಳುವುದು ಆದ್ಯತೆಯಾಗಿದೆ. ಅದ್ವೈತ್ ತಾಯಿಯ ಜೊತೆ ವಾಸವಿದ್ದರು. ಶೀಘ್ರ ಇಂದೋರ್‌ಗೆ ಶಿಫ್ಟ್ ಆಗಿ ಅಲ್ಲೇ ಸೆಟಲ್ ಆಗಲು ಬಯಸಿದ್ದರು. ಪೋಲಿಸರು ಅದ್ವೈತ್ ಅವರ ಕಾಡುಗೋಡಿಯ ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಲ್ಯಾಪ್‌ಟಾಪ್ ಪತ್ತೆಯಾಗಿದೆ. ಲ್ಯಾಪ್‌ಟಾಪ್ ತಪಾಸಣೆ ವೇಳೆ ಬೆಚ್ಚಿಬೀಳಿಸುವ ಶಿವಗಂಗೆಯ ಶಾಂತಲಾ ಡ್ರಾಪ್‌ನಿಂದ ಬಿದ್ದರೆ ಎಷ್ಟೊತ್ತಿಗೆ ಸಾಯಬಹುದು ಎಂದು ಹುಡುಕಾಟ ನಡೆಸಿದ್ದು ಗೊತ್ತಾಗಿದೆ. ಈ ಎಲ್ಲ ಕಾರಣಗಳ ಹಿನ್ನಲೆ ಆತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.

Related Posts

Leave a Reply

Your email address will not be published. Required fields are marked *