Menu

ಬಿಎಲ್‌ಒಗಳೇ ಮನೆ ಮನೆಗೆ ಹೋಗಿ SIR ಎನ್ಯುಮರೇಶನ್ ಫಾರಂ ವಿತರಿಸಬೇಕು: ಡಿಕೆ ಶಿವಕುಮಾರ್‌

ಬಿಎಲ್‌ಒಗಳೇ ಮನೆ ಮನೆಗೆ ಹೋಗಿ ಗಣತಿ ನಮೂನೆ ವಿತರಿಸಬೇಕು. ಶಾಸಕರು ಹೇಳಿದರು ಎಂದು ಬೇರೆಯವರಿಂದ  ವಿತರಣೆ ಆಗಬಾರದು. ಭರ್ತಿ ಮಾಡಿದ ಗಣತಿ ನಮೂನೆಗಳನ್ನು ಬೇಕಾದರೆ ಜನರಿಂದ ಸಂಗ್ರಹಿಸಿ ಬಿಎಲ್‌ಒ ಗಳಿಗೆ ನೀಡಲು ಅವಕಾಶವಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ  ಅವರು ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಕಲ್ಯಾಣ ಮಂಟಪಗಳಲ್ಲಿ ಗಣತಿ ನಮೂನೆ ವಿತರಣೆ ಮಾಡಲಾಗುತ್ತಿದೆ ಎಂಬ ಆರೋಪಗಳ ಬಗ್ಗೆ ಕೇಳಿದಾಗ, ಈ ವಿಚಾರ ನನ್ನ ಗಮನಕ್ಕೂ ಬಂದಿದೆ. ಇದು ಕಾನೂನು ಬಾಹಿರ. ಇದನ್ನು ಯಾರೇ ಮಾಡಿದರೂ ಅದಕ್ಕೆ ಅವಕಾಶ ನೀಡುವುದಿಲ್ಲ. ನಮ್ಮ ಶಾಸಕರು ಮಾಡಿದರೂ ನಾವು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.

ಕುಮಾರಸ್ವಾಮಿ  ರಾಮನಗರವನ್ನು ಉಲ್ಲೇಖಿಸಿ ಈ ಆರೋಪ ಮಾಡಿದ್ದಾರೆ ಎಂದು ಕೇಳಿದಾಗ, ಜಯನಗರದಲ್ಲಿ ಬಿಜೆಪಿ ಶಾಸಕರು ಇದನ್ನೇ ಮಾಡುತ್ತಿದ್ದಾರೆ. ಎಲ್ಲೇ ಆದರೂ ಬಿಎಲ್‌ಒಗಳೇ  ವಿತರಣೆ ಮಾಡಬೇಕು. ಜು.29ರವರೆಗೆ ಕಾಲಾವಕಾಶವಿದೆ. ಬಿಎಲ್ಓಗಳೇ ಮನೆಗೇ ಹೋಗಿ ಅರ್ಜಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸುತ್ತಿದ್ದೇನೆ ಎಂದರು.

ಎಸ್ಐಆರ್ ಪ್ರಕ್ರಿಯೆಯನ್ನು ನೀವು ಬಹಳ ಗಂಭೀರವಾಗಿ ಪರಿಗಣಿಸಿದ್ದೀರಿ ಎಂದು ಕೇಳಿದಾಗ, ಪ್ರತಿಯೊಬ್ಬ ನಾಗರಿಕರ ಮತದಾನದ ಹಕ್ಕನ್ನು ಕಾಪಾಡುವುದು ನಮ್ಮ ಸರ್ಕಾರದ ಜವಾಬ್ದಾರಿ. ಹೀಗಾಗಿ ಪ್ರತಿ ವಾರ್ಡ್ ಹಾಗೂ ಬೂತ್ ನಲ್ಲಿ ಸಹಾಯ ಕೇಂದ್ರ ಸ್ಥಾಪಿಸಲು ಮುಂದಾಗಿದ್ದೇವೆ ಎಂದು ಉತ್ತರಿಸಿದರು.

ರಾಜ್ಯದ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಕೇಳಿದಾಗ, ವಿರೋಧ ಪಕ್ಷಗಳು ಇರುವುದೇ ಆರೋಪ ಮಾಡಲು. ನಾವು ಇರುವುದು ಜನರ ಸೇವೆಗೆ. ನಾವು ನಮ್ಮ ಕರ್ತವ್ಯ ಮಾಡುತ್ತೇವೆ ಎಂದು ತಿಳಿಸಿದರು.

ಈ ವರ್ಷ ಮುಂಗಾರು ಅಧಿವೇಶನ ಕರೆಯಬೇಕಾಗಿತ್ತು. ಸಧ್ಯಕ್ಕೆ ಎಸ್ಐಆರ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ಮುಗಿಯುವವರೆಗೂ ಕಾಯಲು ತೀರ್ಮಾನಿಸಲಾಗಿದೆ. ಎಲ್ಲಾ ಶಾಸಕರು ತಮ್ಮ ಕ್ಷೇತ್ರದ ಮತದಾರರ ರಕ್ಷಣೆ ಮಾಡಿಕೊಳ್ಳಬೇಕಾಗಿದೆ. ಅವರಿಗೆ ತೊಂದರೆ ಆಗುವುದು ಬೇಡ ಎಂದು ತೀರ್ಮಾನಿಸಿದ್ದು, ಆಗಸ್ಟ್ 5ರಂದು ಕರಡು ಮತದಾರರಪಟ್ಟಿ ಬಿಡುಗಡೆ ಮಾಡಲಿದ್ದು, ಅದಾದ ನಂತರ ಮೊದಲ ಅಥವಾ ಎರಡನೇ ವಾರದಲ್ಲಿ ಅಧಿವೇಶನದ ದಿನಾಂಕ ನಿಗದಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಪ್ರಜಾಸೇವೆ ಎಂಬ ಪ್ರತ್ಯೇಕ ಸಚಿವಾಲಯ ರೂಪಿಸುತ್ತಿದ್ದು, ಸಚಿವರಿಗೆ ಇದರ ಜವಾಬ್ದಾರಿ ವಹಿಸಲಾಗುವುದು. ಯಾರ ದೂರೇ ಇರಲಿ, ಸಮಸ್ಯೆ ಇರಲಿ, ಪ್ರತಿಭಟನೆ ಮಾಡುವವರು ತಮ್ಮ ನೋವು ಹೇಳಿಕೊಳ್ಳಲು ಹಾಗೂ ಅವರ ಸಮಸ್ಯೆ ಬಗೆಹರಿಸಲು ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಹಾಗೂ ಜಿಲ್ಲಾ ಸಚಿವರಿಗೆ ಆ ವಿಚಾರ ತಲುಪಿಸಲು ಈ ಇಲಾಖೆ ಕಾರ್ಯನಿರ್ವಹಿಸಲಿದೆ. ಇದಕ್ಕೆ ಐಎಎಸ್ ಅಧಿಕಾರಿಯನ್ನು ಕಾರ್ಯದರ್ಶಿಯಾಗಿ ನೇಮಿಸುತ್ತಿದ್ದು, ಅಗತ್ಯ ಅಧಿಕಾರಿಗಳನ್ನು ನೀಡಲು ತೀರ್ಮಾನಿಸಲಾಗಿದೆ. ಎಲ್ಲೇ ಪ್ರತಿಭಟನೆ ನಡೆದರೂ ಅವರ ಅರ್ಜಿ ಸ್ವೀಕರಿಸಿ ಕಾನೂನುಬದ್ಧವಾಗಿ ಸಹಾಯ ಮಾಡಲು ಅವಕಾಶವಿದ್ದರೆ ನಾವು ಕಾರ್ಯನಿರ್ವಹಿಸುತ್ತೇವೆ ಎಂದು ತಿಳಿಸಿದರು.

ಪ್ರತಿ ಜಿಲ್ಲಾ ಉಸ್ತುವಾರಿ ಸಚಿವರು ಕಡ್ಡಾಯವಾಗಿ ತಿಂಗಳಿಗೆ 2 ದಿನ (ಮೊದಲ ಹಾಗೂ ಮೂರನೇ ಶನಿವಾರದಂದು) 2 ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಈ ಪ್ರಜಾಸೇವೆ ಅಭಿಯಾನದಲ್ಲಿ ಭಾಗವಹಿಸಬೇಕು. ಎಲ್ಲಾ ಇಲಾಖೆಗಳ ಶಾಖೆಗಳು ಅಲ್ಲಿ ತೆರೆಯಲಾಗುವುದು. ಆ ಜಿಲ್ಲೆಗೆ ಸಂಬಂಧಿಸಿದ ಅಧಿಕಾರಿಗಳು ಅಲ್ಲಿ ಉಪಸ್ಥಿತರಿರಬೇಕು. ಆ ಭಾಗದ ಜನರಿಗೆ ಈ ಸಭೆ ಕುರಿತು ಮುಂಚಿತವಾಗಿ ಮಾಹಿತಿ ನೀಡಲಾಗುವುದು. ಸರ್ಕಾರವೇ ಜನರ ಮನೆ ಬಾಗಿಲಿಗೆ ಹೋಗುವಂತಾಗಬೇಕು. ನಾನು ಕೂಡ ಕೆಲವು ತಾಲ್ಲೂಕುಗಳಿಗೆ ಮಧ್ಯೆ ಮಧ್ಯೆ ಭೇಟಿ ಮಾಡುತ್ತೇನೆ ಎಂದರು.

ಪಾದಚಾರಿ ಮಾರ್ಗ ಒತ್ತುವರಿ ತೆರವು ವಿಚಾರವಾಗಿ ಕೇಳಿದಾಗ, ಈ ವಿಚಾರವಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವರು ವಿವರಿಸಿದ್ದಾರೆ. ಈ ಹಿಂದೆ ನಾನು ಈ ವಿಚಾರವಾಗಿ ವಿರೋಧ ಪಕ್ಷದ ಶಾಸಕರ ಜೊತೆ ಚರ್ಚೆ ಮಾಡಿದ್ದೆ. ಅವರು ಕೂಡ ಇದಕ್ಕೆ ಒಪ್ಪಿದ್ದರು. ಈ ಪಾದಚಾರಿ ಮಾರ್ಗದಲ್ಲಿದ್ದ ವ್ಯಾಪಾರಿಗಳನ್ನು ಬೇರೆ ರಸ್ತೆಗಳಿಗೆ ಸ್ಥಳಾಂತರಿಸುತ್ತಿದ್ದೇವೆ. ಬೀದಿಬದಿ ವ್ಯಾಪಾರಿಗಳಿಗೆ ವಾಹನ ವಿತರಿಸಲು ನಾವು ಮುಂದಾಗಿದ್ದೇವೆ. ಇದಕ್ಕಾಗಿ 37 ಸಾವಿರ ಜನ ನೋಂದಣಿ ಮಾಡಿಸಿಕೊಂಡಿದ್ದಾರೆ. ಸುಮಾರು 60 ಸಾವಿರ ಜನ ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ಮಾಡಿದ್ದೇವೆ. ವಾಹನ ವಿತರಣೆ ಯೋಜನೆ ಶೀಘ್ರವೇ ಜಾರಿಗೆ ತರಲಾಗುವುದು. ಬೀದಿ ಬದಿ ವ್ಯಾಪಾರಿಗಳಿಗೆ ಮುಖ್ಯರಸ್ತೆ ಬದಲಿಗೆ ಬೇರೆ ಸ್ಥಳಗಳಲ್ಲಿ ಅವಕಾಶ ಕಲ್ಪಿಸಲಾಗುವುದು. ನಾಗರಿಕರಿಂದ ನಮ್ಮ ಮೇಲೆ ಹೆಚ್ಚಿನ ಒತ್ತಡವಿತ್ತು. ಸುಪ್ರೀಂ ಕೋರ್ಟ್ ತೀರ್ಪಿನ ಅನುಸಾರ ಎಲ್ಲಾ ಶಾಸಕರು ಸರ್ವಾನುಮತದಿಂದ ಕೈಗೊಂಡಿರುವ ತೀರ್ಮಾನ ಇದಾಗಿದೆ ಎಂದು ತಿಳಿಸಿದರು.

ಸಂಪುಟದಲ್ಲಿ ಕೈಗೊಂಡ ಇತರ ಪ್ರಮುಖ ನಿರ್ಣಯಗಳು

• ರಾಷ್ಟ್ರೀಯ ಅಂಧತ್ವ ನಿಯಂತ್ರಣದಿಂದ ಸಣ್ಣ ಮಕ್ಕಳಲ್ಲಿ ದೃಷ್ಟಿ ಆರೈಕೆ ಬಲಪಡಿಸಲು 26 ಕೋಟಿ ಅನುದಾನಕ್ಕೆ ಅನುಮೋದನೆ.  ಬಾಗಲಕೋಟೆಯ ಬಿಳಗಿ ಕೃಷ್ಣಾ ನದಿಯಿಂದ 7 ಸಾವಿರ ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಲು ಬಿಳಗಿ ಏತ ನೀರಾವರಿ ಯೋಜನೆಗೆ 98.50 ಕೋಟಿಗೆ ಆಡಳಿತಾತ್ಮಕ ಅನುಮೋದನೆ.

• ಕಲಬುರ್ಗಿಯಲ್ಲಿ ವಾಣಿಜ್ಯ ಹಾಗೂ ಕೈಗಾರಿಕೆ ಇಲಾಖೆಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಂಟಿ ಸಹಕಾರದಲ್ಲಿ ಜವಳಿ ಪಾರ್ಕ್ ನಿರ್ಮಾಣಕ್ಕೆ ಕೆಐಎಡಿಬಿ ವತಿಯಿಂದ 700 ಕೋಟಿ ವೆಚ್ಚದ ಯೋಜನೆಗೆ ಮೊದಲ ಹಂತಕ್ಕೆ 320 ಕೋಟಿಗೆ ಅನುಮೋದನೆ.  ಎನ್ ಜಿಎಫ್ ನಲ್ಲಿ 60 ಎಕರೆ ಜಾಗದಲ್ಲಿ ಟ್ರೀ ಪಾರ್ಕ್ ನಿರ್ಮಾಣಕ್ಕೆ 26 ಕೋಟಿ ಅನುದಾನ ಮೀಸಲಿಡಲು ತೀರ್ಮಾನ.

• ಅಲ್ಪಸಂಖ್ಯಾತರ ಇಲಾಖೆಯಿಂದ ಕ್ರೀಡಾ ಉಡುಪು, ವಿದ್ಯಾರ್ಥಿ ಸಾಮಾಗ್ರಿ ವಿತರಣೆಗೆ 33 ಕೋಟಿ ಅನುದಾನಕ್ಕೆ ಅನುಮೋದನೆ.  ವಾಣಿಜ್ಯ ಹಾಗೂ ಕೈಗಾರಿಕ ಇಲಾಖೆ ದೇವನಹಳ್ಳಿಯಲ್ಲಿ ಏರೋಸ್ಪೇಸ್ ಪಾರ್ಕ್ ನಲ್ಲಿ ಕಾಮನ್ ಫೆಸಿಲಿಟ್ ಸೆಂಟರ್ ಮಾಡಲು 30 ಕೋಟಿ ಅನುದಾನ ನೀಡಲು ಕೆಐಎಡಿಬಿಗೆ ಅನುಮತಿ.

• ವಿಕಲಚೇತನ ಹಕ್ಕು ಕಾಯ್ದೆ ಅನ್ವಯ ಕೆಐಎಡಿಬಿಯಲ್ಲಿ 5% ಭೂ ಮೀಸಲಾತಿ ರಿಯಾಯಿತಿ ಬಗ್ಗೆ ಕಾನೂನು ತರಲಾಗಿತ್ತು. ಈಗ ಅವರಿಗೆ ಎರಡು ಆಯ್ಕೆ ನೀಡಿದ್ದು, ಭೂಮಿ ಮೌಲ್ಯದ 10% ಅಥವಾ ಗರಿಷ್ಠ 20 ಲಕ್ಷದವರೆಗೆ ರಿಯಾಯಿತಿ ನೀಡಲು ಮಿತಿ ಹಾಕಲಾಗಿದೆ.

Related Posts

Leave a Reply

Your email address will not be published. Required fields are marked *