ಈ ವರ್ಷ ದೇಶದಲ್ಲಿ ಭೀಕರ ಬರಗಾಲ ಎದುರಾಗುವ ಮುನ್ಸೂಚನೆ ಇದೆ. ರಾಜ್ಯದ ಬಹುತೇಕ ಅಣೆಕಟ್ಟುಗಳಲ್ಲಿನ ಒಳಹರಿವು ಶೂನ್ಯಕ್ಕೆ ತಲುಪಿದೆ. ಹೀಗಾಗಿ ರೈತರು ಅಣೆಕಟ್ಟು ನೀರು ನಂಬಿಕೊಂಡು ಬೆಳೆ ಹಾಕಬೇಡಿ ಎಂದು ಸಿಎಂ ಡಿಕೆ ಶಿವಕುಮಾರ್ ಕರೆ ನೀಡಿದರು.
ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಅವರು ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದರು. ರಾಜ್ಯದಲ್ಲಿ ಬರ ಪರಿಸ್ಥಿತಿ ಗಂಭೀರವಾಗುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ತುಂಗಭದ್ರಾ, ಘಟ್ಟಪ್ರಭಾ, ಮಲಪ್ರಭಾ, ನಾರಾಯಣಪುರ, ವಾಣಿವಿಲಾಸ ಅಣೆಕಟ್ಟುಗಳ ಒಳಹರಿವಿನ ಪ್ರಮಾಣ ಶೂನ್ಯವಾಗಿದೆ. ಕಾವೇರಿ ಪಾತ್ರದಲ್ಲಿ ಮಳೆ ಪ್ರಮಾಣ ಕುಸಿದಿದೆ. ಕಳೆದ ವರ್ಷ ಈ ಸಮಯದಲ್ಲಿ ಹೇಮಾವತಿಯಲ್ಲಿ 80 ಅಡಿ ಇತ್ತು, ಈ ವರ್ಷ 40 ಅಡಿಗೆ ಕುಸಿದಿದೆ. ಕೆಆರ್ ಎಸ್ ನಲ್ಲಿ 100 ಅಡಿ ಇದ್ದ ನೀರಿನ ಪ್ರಮಾಣ ಈಗ 22 ಅಡಿಯಷ್ಟಿದೆ, ಕಬಿನಿಯಲ್ಲಿ 79 ಅಡಿ ಇತ್ತು, ಈಗ 26 ಅಡಿಯಷ್ಟಿದೆ. ಈ ಅಣೆಕಟ್ಟುಗಳಲ್ಲಿ ಒಳಹರಿವಿನ ಪ್ರಮಾಣ 20%ಗೆ ಕುಸಿದಿದೆ. ಹೀಗಾಗಿ ಸಮಸ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ವಿವರಿಸಿದರು.
ನೀರು ಬಿಡುವ ವಿಚಾರದಲ್ಲಿ ರೈತರು ಒತ್ತಡ ಹಾಕಬೇಡಿ. ಮುಂದಿನ ದಿನಗಳಲ್ಲಿ ಮಳೆ ಗಮನದಲ್ಲಿಟ್ಟುಕೊಂಡು ಬೆಳೆ ಹಾಕಿ. ಮಳೆ ಬಂದರೆ ನಾವು ನೀರನ್ನು ಒದಗಿಸಿಕೊಡುತ್ತೇವೆ. ಸಚಿವರುಗಳಿಗೆ 2-3 ಜಿಲ್ಲೆಗಳ ಉಸ್ತುವಾರಿ ವಹಿಸಲಾಗಿದ್ದು, ನಾನು ನಾಲ್ಕು ವಿಭಾಗಗಳಿಗೆ ತೆರಳಿ ಪರಿಶೀಲನೆ ಮಾಡುತ್ತೇನೆ. ಪ್ರಧಾನ ಮಂತ್ರಿಗಳು ಈಗಾಗಲೇ ನೀರು ಹಾಗೂ ವಿದ್ಯುತ್ ವಿಚಾರವಾಗಿ ಎಚ್ಚರಿಕೆ ನೀಡಿದ್ದಾರೆ. ದೇಶದಲ್ಲೇ ಭೀಕರ ಬರಗಾಲ ಬರಲಿದೆ ಎಂದು ಕೇಂದ್ರ ಸರ್ಕಾರ ಸಂದೇಶ ನೀಡಿದೆ. ವಿದ್ಯುತ್ ವಿಚಾರವಾಗಿ ಇಂಧನ ಇಲಾಖೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ನಾವು ಈ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರಬೇಕು. ಮೇವು ಹಾಗೂ ಕುಡಿಯುವ ನೀರಿನ ವಿಚಾರವಾಗಿ ಜಿಲ್ಲಾ ಸಚಿವರಿಗೆ ಪ್ರವಾಸ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ತುರ್ತಾಗಿ ಕೊಳವೆ ಬಾವಿ ಕೊರೆಯಲು ಸೂಚಿಸಲಾಗಿದೆ. ನಾನು ಕೂಡ ನಾಲ್ಕು ವಿಭಾಗಕ್ಕೆ ಪ್ರವಾಸ ಮಾಡಲಿದ್ದು, ನಂತರ ಜಿಲ್ಲಾ ಕೇಂದ್ರಗಳಿಗೆ ತೆರಳುತ್ತೇನೆ ಎಂದು ಕರೆ ನೀಡಿದರು.
ಒಸಿ ಸಿಸಿ ಸಂಬಂಧಿಸಿದಂತೆ ವಿನಾಯಿತಿ ನೀಡಬೇಕು ಎಂದು ರಾಜ್ಯದ ಎಲ್ಲಾ ಕಡೆಗಳಿಂದ ಮನವಿ ಬಂದಿತ್ತು. ಇದಕ್ಕೆ ನಾವು ಅವಕಾಶ ಕಲ್ಪಿಸಿದ್ದೆವು. ಆದರೆ ಕೆಲವರು ನಾವು ಕಟ್ಟಡ ನಿರ್ಮಾಣ ಮಾಡಿದ್ದು, ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಹಾಕಿಲ್ಲ ಎಂದು ಮನವಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ, ಯಾರೆಲ್ಲಾ ವಸತಿ ಕಟ್ಟಡ ನಿರ್ಮಾಣ ಮಾಡಿದ್ದಾರೆ, ಅವರ ದಾಖಲೆ, ಫೋಟೋಗಳೊಂದಿಗೆ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಹಾಕಲು ಆಗಸ್ಟ್ 15ರವರೆಗೆ ಅವಕಾಶ ಕಲ್ಪಿಸಿದ್ದೇವೆ ಎಂದು ತಿಳಿಸಿದರು.
ವಾಣಿಜ್ಯ ಕಟ್ಟಡಗಳಿಗೂ ವಿನಾಯಿತಿ ನೀಡಿ ಎಂಬ ಬೇಡಿಕೆ ಬಗ್ಗೆ ಕೇಳಿದಾಗ,“ಬೇಕಾದಷ್ಟು ಬೇಡಿಕೆಗಳು ಇರುತ್ತವೆ. ಆದರೆ ನಾನು ಸುಪ್ರೀಂ ಕೋರ್ಟ್ ಆದೇಶವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕಲ್ಲವೇ ಎಂದು ತಿಳಿಸಿದರು.
ವಿದ್ಯುತ್ ವಿತರಣೆಯನ್ನು ಖಾಸಗಿಯವರಿಗೆ ನೀಡುವ ವಿಚಾರವಾಗಿ ಎಲ್ಲಾ ಎಸ್ಕಾಂಗಳು ತಮ್ಮ ಆಕ್ಷೇಪಣೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ತಿಳಿಸಿದ್ದೇನೆ. ಹಿಂದೆ ಬಿಜೆಪಿ ಸರ್ಕಾರ ಖಾಸಗಿಯವರಿಗೆ ಪರವಾನಿಗೆ ಪಡೆಯಲು ಅವಕಾಶ ನೀಡಿತ್ತು. ಅದರ ಆಧಾರದ ಮೇಲೆ ಟಾಟಾ ಸಂಸ್ಥೆಯವರು ಅರ್ಜಿ ಹಾಕಿದ್ದಾರೆ. ಕೆಇಆರ್ ಸಿ ಅವರು ಈ ಬಗ್ಗೆ ತೀರ್ಮಾನ ಮಾಡಲಿದೆ. ಸರ್ಕಾರದ ತೀರ್ಮಾನವನ್ನು ಎಸ್ಕಾಂಗಳಿಗೆ ತಿಳಿಸಲಾಗಿದೆ. ಖಾಸಗಿಯವರು ಸರ್ಕಾರಕ್ಕೆ ಅರ್ಜಿ ಹಾಕಿಲ್ಲ. ಕೆಇಆರ್ ಸಿಗೆ ಅರ್ಜಿ ಹಾಕಿದ್ದಾರೆ. ಕೆಇಆರ್ ಸಿ ಅವರು ಎಸ್ಕಾಂಗಳಿಗೆ ತಿಳಿಸಿದ್ದು, ಎಸ್ಕಾಂಗಳು ನಮ್ಮ ಬಳಿ ಚರ್ಚೆ ಮಾಡಿರುವ ಹಿನ್ನೆಲೆಯಲ್ಲಿ ಇದಕ್ಕೆ ನಮ್ಮ ಸಹಮತವಿಲ್ಲ ಎಂದು ತಿಳಿಸಿ ಎಂದು ಎಸ್ಕಾಂಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಗ್ರಾಮ್ ಜಿ ಯೋಜನೆ ವಿರುದ್ಧ ನಾವು ಹೋರಾಟ ಮಾಡಿದ್ದು, ನ್ಯಾಯಾಲಯದ ಮೆಟ್ಟಿಲು ಏರಿದ್ದೇವೆ. ಯೋಜನೆಯಲ್ಲಿ 40% ವೆಚ್ಚ ಭರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದು, ನಾವು ಷರತ್ತಿನ ಆಧಾರದ ಮೇಲೆ ಯೋಜನೆ ಜಾರಿ ಮಾಡಬೇಕಾಗಿದೆ. ನಮ್ಮ ರಾಜ್ಯಕ್ಕೆ ಇದರಿಂದ ವಾರ್ಷಿಕ 3,806 ಕೋಟಿ ವೆಚ್ಚ ಬೀಳಲಿದೆ. ಎಲ್ಲೆಲ್ಲಿ ಈ ಕೆಲಸ ಕೈಗೊಳ್ಳಬೇಕು ಎಂದು ಇವತ್ತಿನಿಂದ ಅಧಿಸೂಚನೆ ಹೊರಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪಂಚಾಯಿತಿಗಳಲ್ಲೂ ದಾಖಲೆ ಶುದ್ಧೀಕರಣಕ್ಕೆ ಭೂಗ್ಯಾರಂಟಿ ನೀಡಲಾಗುತ್ತಿದೆ. ಹೀಗಾಗಿ ಎಲ್ಲಾ ರಸ್ತೆಗಳನ್ನು ಸರ್ಕಾರಿ ರಸ್ತೆಗಳಾಗಿ ಘೋಷಿಸಲು ತೀರ್ಮಾನ ಮಾಡಲಾಗಿದೆ. ಇದಕ್ಕಾಗಿ ಕಾನೂನು ಅವಕಾಶ ಮಾಡಿಕೊಡುತ್ತೇವೆ ಎಂದರು.
ಸಾರಿಗೆ ಪ್ರಯಾಣ ದರ ಹೆಚ್ಚಳದ ಬಗ್ಗೆ ಚರ್ಚೆ ಮಾಡಲಾಗಿದೆಯೇ ಎಂದು ಕೇಳಿದಾಗ, ಸಾರಿಗೆ ದರ ವಿಚಾರದಲ್ಲಿ ಅಧಿಕಾರಿಗಳು ದೊಡ್ಡ ಗಾಬರಿ ವ್ಯಕ್ತಪಡಿಸಿದ್ದಾರೆ. ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಾಗಿದ್ದು, ಅವರ ಪ್ರಸ್ತಾವನೆ ಏನಿದೆ ಸಲ್ಲಿಕೆ ಮಾಡಿ ಎಂದು ಹೇಳಿದ್ದೇವೆ. ತಾಂತ್ರಿಕವಾಗಿ ಸಾರಿಗೆಯವರಿಗೆ ಎಷ್ಟು ನಷ್ಟವಾಗುತ್ತಿದೆ ಎಂದು ಪರಿಶೀಲನೆ ಮಾಡಿದ ಬಳಿಕ ತೀರ್ಮಾನ ಮಾಡುತ್ತೇವೆ ಎಂದು ಉತ್ತರಿಸಿದರು.
ವಿದೇಶಿ ಹೂಡಿಕೆ ಸಚಿವಾಲಯ ಬಗ್ಗೆ ಕೇಳಿದಾಗ, ಅದಕ್ಕೆ ಹೊಸರೂಪ ನೀಡಲಾಗುತ್ತಿದೆ. ಪರಮೇಶ್ವರ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಈ ವಿಚಾರವಾಗಿ ಬರುವ ಸಲಹೆಗಳನ್ನು ಸಂಗ್ರಹಿಸಿ ಈ ಸಮಿತಿ ಮುಂದಿನ ಸಚಿವ ಸಂಪುಟದಲ್ಲಿ ವರದಿ ನೀಡಲಿದೆ ಎಂದರು.


