Saturday, October 17, 2026
Menu

ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಆರೋಗ್ಯದಲ್ಲಿ ಏರುಪೇರು; ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲು

ಉದಯಕಾಲ ನ್ಯೂಸ್, ನವದೆಹಲಿ: ಭಾರತೀಯ ಜನತಾ ಪಕ್ಷದ (BJP) ದಿಗ್ಗಜ ನಾಯಕ, ದೇಶದ ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ (L.K. Advani) ಅವರ ಆರೋಗ್ಯದಲ್ಲಿ ಹಠಾತ್ ಏರುಪೇರು ಉಂಟಾಗಿದ್ದು, ಅವರನ್ನು ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.

98 ವರ್ಷ ವಯಸ್ಸಿನ ಎಲ್.ಕೆ. ಅಡ್ವಾಣಿ ಅವರಿಗೆ ಎದೆ ಸೋಂಕು (Chest Infection) ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಶುಕ್ರವಾರ ಸಂಜೆ ಸುಮಾರು 7.30ರ ಸುಮಾರಿಗೆ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಗೆ ಕರೆತರಲಾಗಿದೆ. ಸದ್ಯ ಅವರನ್ನು ಆಸ್ಪತ್ರೆಯ ವೈದ್ಯಕೀಯ ಹಾಗೂ ಪಲ್ಮನರಿ ವಿಭಾಗದ ತಜ್ಞ ವೈದ್ಯರ ವಿಶೇಷ ನಿಗಾದಲ್ಲಿ ಇರಿಸಲಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ಮತ್ತು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಕೆಲ ದಿನಗಳಷ್ಟೇ ಭೇಟಿಯಾಗಿದ್ದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗಷ್ಟೇ (ಅಕ್ಟೋಬರ್ 7 ರಂದು) ದೆಹಲಿಯಲ್ಲಿರುವ ಅಡ್ವಾಣಿ ಅವರ ನಿವಾಸಕ್ಕೆ ಖುದ್ದು ಭೇಟಿ ನೀಡಿ ಆಶೀರ್ವಾದ ಪಡೆದಿದ್ದರು. ಗುಜರಾತ್ ಮುಖ್ಯಮಂತ್ರಿಯಾಗಿ ಮತ್ತು ಸರ್ಕಾರದ ಮುಖ್ಯಸ್ಥರಾಗಿ ನರೇಂದ್ರ ಮೋದಿ ಅವರು 25 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿತ್ತು. ಈ ವೇಳೆ ಅಡ್ವಾಣಿ ಅವರ ದಶಕಗಳ ಸಾರ್ವಜನಿಕ ಸೇವೆ ಹಾಗೂ ರಾಷ್ಟ್ರದ ಪ್ರಗತಿಗೆ ಅವರು ನೀಡಿದ ಅಭೂತಪೂರ್ವ ಕೊಡುಗೆಯನ್ನು ಪ್ರಧಾನಿ ಸ್ಮರಿಸಿದ್ದರು.

ಭಾರತೀಯ ರಾಜಕೀಯದ ಭೀಷ್ಮ ಅಡ್ವಾಣಿ ಅವರ ಹೆಜ್ಜೆಗುರುತುಗಳು

1927ರ ನವೆಂಬರ್ 8ರಂದು ಪ್ರಸ್ತುತ ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದ ಅಡ್ವಾಣಿ ಅವರು, 1942ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (RSS) ಸೇರ್ಪಡೆಗೊಂಡು ಸಾರ್ವಜನಿಕ ಜೀವನ ಆರಂಭಿಸಿದರು. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ 1998 ರಿಂದ 2004ರ ವರೆಗೆ ಕೇಂದ್ರ ಗೃಹ ಸಚಿವರಾಗಿ ಹಾಗೂ 2002 ರಿಂದ 2004ರ ವರೆಗೆ ದೇಶದ ಉಪ ಪ್ರಧಾನಿಯಾಗಿ ಅಡ್ವಾಣಿ ಸೇವೆ ಸಲ್ಲಿಸಿದ್ದಾರೆ. ಬಿಜೆಪಿ ಪಕ್ಷವು 1980ರಲ್ಲಿ ಸ್ಥಾಪನೆಯಾದ ಬಳಿಕ ಅತಿ ಹೆಚ್ಚು ಕಾಲ (ಮೂರು ಅವಧಿಗಳಲ್ಲಿ) ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಗೆ ಇವರದ್ದು. ರಾಮಮಂದಿರ ಆಂದೋಲನದ ಮುಂಚೂಣಿಯಲ್ಲಿ ನಿಂತು ದೇಶಾದ್ಯಂತ ರಥಯಾತ್ರೆ ಕೈಗೊಳ್ಳುವ ಮೂಲಕ ಬಿಜೆಪಿಯನ್ನು ರಾಷ್ಟ್ರಮಟ್ಟದಲ್ಲಿ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ದೇಶಕ್ಕೆ ಅವರು ಸಲ್ಲಿಸಿದ ಅನನ್ಯ ಸೇವೆಯನ್ನು ಗುರುತಿಸಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2024ರ ಮಾರ್ಚ್‌ನಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ʻಭಾರತ ರತ್ನʼ ನೀಡಿ ಗೌರವಿಸಿದ್ದರು.

ಪ್ರಾಥಮಿಕ ಹಂತದಲ್ಲಿ ವೈದ್ಯರು ಅಡ್ವಾಣಿ ಅವರ ಆರೋಗ್ಯದ ಮೇಲೆ ನಿರಂತರ ತಪಾಸಣೆ ನಡೆಸುತ್ತಿದ್ದು, ದೇಶದಾದ್ಯಂತ ಇರುವ ಲಕ್ಷಾಂತರ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹಿರಿಯ ನಾಯಕ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

#LKAdvani #DelhiApolloHospital #BJPVeteran #IndianPolitics #BharatRatnaAdvani #UdayakalaNews #BreakingNewsKannada #NarendraModi #HealthUpdate

Related Posts

Leave a Reply

Your email address will not be published. Required fields are marked *