Saturday, October 31, 2026
Menu

ಕೆರೆ ಉಳಿವಿಗೆ 15 ವರ್ಷಗಳಿಂದ ಹೋರಾಟ, ಸಿಗದ ನ್ಯಾಯ: ಗ್ರಾಮಸ್ಥರ ಸತ್ಯಾಗ್ರಹ

ಉದಯಕಾಲ ನ್ಯೂಸ್, ದಾವಣಗೆರೆ: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಕುದುರೆ ಗ್ರಾಮದಲ್ಲಿ ಐತಿಹಾಸಿಕ ಕೆರೆಯನ್ನು ಬಲಾಢ್ಯರ ಕಬಳಿಕೆಯಿಂದ ಮುಕ್ತಗೊಳಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಅನಿರ್ದಿಷ್ಟಾವಧಿ ಸತ್ಯಾಗ್ರಹ ಆರಂಭಿಸಿದ್ದಾರೆ. ಬರೋಬ್ಬರಿ 15 ವರ್ಷಗಳಿಂದ ನಿರಂತರವಾಗಿ ಕಾನೂನು ಹೋರಾಟ ನಡೆಸಿದರೂ ಜಿಲ್ಲಾಡಳಿತದಿಂದ ನ್ಯಾಯ ಸಿಗದ ಹಿನ್ನೆಲೆಯಲ್ಲಿ, ಬೇಸತ್ತ ರೈತರು ಹಾಗೂ ಗ್ರಾಮಸ್ಥರು ಈಗ ನೇರವಾಗಿ ಬೀದಿಗಿಳಿದು ಜಿಲ್ಲಾಡಳಿತಕ್ಕೆ ಬಿಸಿ ಮುಟ್ಟಿಸಿದ್ದಾರೆ.

ಗ್ರಾಮದ ಸರ್ವೆ ನಂಬರ್ 56ರಲ್ಲಿ ಒಟ್ಟು 62.27 ಎಕರೆ ವಿಶಾಲ ಪ್ರದೇಶದಲ್ಲಿ ಹಬ್ಬಿರುವ ಈ ಐತಿಹಾಸಿಕ ಕೆರೆಯು ದಶಕಗಳಿಂದಲೂ ರೈತರ ಜಮೀನುಗಳಿಗೆ ಜೀವಸೆಲೆಯಾಗಿದೆ. ಆದರೆ, 1977-78ರಲ್ಲೇ ಕೆರೆ ಅಭಿವೃದ್ಧಿಗಾಗಿ ಭೂಸ್ವಾಧೀನಗೊಂಡು ಪರಿಹಾರ ನೀಡಲಾಗಿದ್ದರೂ, ಸ್ಥಳೀಯವಾಗಿ ಸುಮಾರು 20 ರಿಂದ 30 ಎಕರೆಗೂ ಅಧಿಕ ಕೆರೆ ಪ್ರದೇಶವನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕೆರೆ ಜಾಗ ಒತ್ತುವರಿಯಾಗಿರುವುದರಿಂದ ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಹಾಗೂ ಅಂತರ್ಜಲ ಕುಸಿತಗೊಂಡಿದೆ ಎಂದು ಗ್ರಾಮಸ್ಥರು ಕಣ್ಣೀರಿಟ್ಟಿದ್ದಾರೆ.

15 ವರ್ಷಗಳ ಸುದೀರ್ಘ ಹೋರಾಟ

ಅಧಿಕಾರಿಗಳು ಸ್ಥಳಕ್ಕೆ ಬಂದು ಕೇವಲ ಪರಿಶೀಲನೆ ನಡೆಸಿ ಹೋಗುತ್ತಾರೆಯೇ ಹೊರತು, ಒತ್ತುವರಿ ತೆರವಿಗೆ ಯಾವುದೇ ಶಾಶ್ವತ ಕ್ರಮ ಕೈಗೊಂಡಿಲ್ಲ ಎಂದು ಹೋರಾಟಗಾರ ರೈತ ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒತ್ತುವರಿ ಸಂಪೂರ್ಣ ತೆರವಾಗುವವರೆಗೆ ಉಪವಾಸ ಸತ್ಯಾಗ್ರಹ ಮುಂದುವರಿಯಲಿದೆ ಎಂದು ಎಚ್ಚರಿಸಿದ್ದಾರೆ.

ಜಾನುವಾರು ಹಾಗೂ ರೈತರ ಸಂಕಷ್ಟ

ಕೆರೆಯ ಅಸ್ತಿತ್ವವೇ ಅಳಿದು ಹೋಗುವ ಹಂತಕ್ಕೆ ತಲುಪಿದ್ದರಿಂದ, ಅಂತರ್ಜಲ ಮಟ್ಟ ಕುಸಿದು ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದೆ. ಕೆರೆಗೆ ತೆರಳುವ ದಾರಿಯನ್ನೂ ಒತ್ತುವರಿ ಮಾಡಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಡಾ. ಜಿ.ಎಂ. ಗಂಗಾಧರಸ್ವಾಮಿ,ರೈತರ ಮನವಿಯನ್ನು ಪರಿಶೀಲಿಸಿ ಕ್ರಮಕೈಗೊಳ್ಳಲು ತಹಶೀಲ್ದಾರ್‌ಗೆ ಸೂಚಿಸಲಾಗಿದೆ. ಚುನಾವಣಾ ಕಾರ್ಯಗಳು ಹಾಗೂ ಇಲಾಖೆಯ ಕೆಲಸಗಳ ಒತ್ತಡದಿಂದ ವಿಳಂಬವಾಗಿದ್ದು, ತಕ್ಷಣವೇ ಪರಿಶೀಲಿಸಿ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

#DavangereNews #Nalkudure #LakeEncroachment #FarmersProtest #Channagiri #DistrictAdministration #UdayakalaNews #KarnatakaNews

Related Posts

Leave a Reply

Your email address will not be published. Required fields are marked *