ಹೊಸ ವರ್ಷಾಚರಣೆ ದಿನ ಬೆಂಗಳೂರು ನಗರದಲ್ಲಿ ಯಾವುದೇ ರೀತಿಯಾದ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಮಾದಕ ಜಾಲದ ಮೇಲೂ ಕೂಡ ಕಣ್ಣಿಡಲಾಗಿದೆ. ಈಗಾಗಲೇ ಮೂವರು ವಿದೇಶಿ ಡ್ರಗ್ ಪೆಡ್ಲರ್ ಸೇರಿದಂತೆ 70 ಜನರನ್ನು ಬಂಧಿಸಲಾಗಿದೆ. ಎರಡೂವರೆ ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ಸೇರಿದಂತೆ, ವಿವಿಧ ಮಾದಕ ವಸ್ತು ಜಪ್ತಿ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ (B Dayananda) ತಿಳಿಸಿದ್ದಾರೆ.
ಕಮಿಷನರ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೆಸ್ಟೋರೆಂಟ್, ಹೋಟೆಲ್ ಮತ್ತು ಪಬ್ಗಳನ್ನು ಹೊಸ ವರ್ಷಾಚರಣೆ ದಿನ (ಡಿಸೆಂಬರ್.31) ರಂದು ರಾತ್ರಿ 1 ಗಂಟೆಯ ಒಳಗಾಗಿ ಬಂದ್ ಮಾಡಬೇಕೆಂದು ಸೂಚನೆ ನೀಡಲಾಗಿದೆ.
ನಶೆಯಲ್ಲಿ ಮೇಲ್ಸೇತುವೆಗಳ ಮೇಲೆ ರಂಪಾಟ ಮಾಡುವ, ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಇರುತ್ತದೆ. ಹೀಗಾಗಿ, ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಮೇಲ್ಸೇತುವೆ ಸೇರಿದಂತೆ ನಗರದ ಎಲ್ಲ ಮೇಲ್ಸೇತುವೆಗಳನ್ನು ಬಂದ್ ಮಾಡಲಾಗುತ್ತದೆ ಎಂದರು.