ಪಾನ್ ಮಸಾಲಾ ಉತ್ಪನ್ನಗಳ ಮೇಲೆ ಕರ್ನಾಟಕ ಸರ್ಕಾರವು ಒಂದು ವರ್ಷ ನಿಷೇಧ ಹೇರಿದೆ. ಆಹಾರ ಸುರಕ್ಷತೆ ಮತ್ತು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಈ ಆದೇಶ ಪ್ರಕಟಿಸಿದೆ.
ರಾಜ್ಯಾದ್ಯಂತ ಗುಟ್ಕಾ ಹಾಗೂ ತಂಬಾಕು ಅಥವಾ ನಿಕೋಟಿನ್ ಒಳಗೊಂಡ ಪಾನ್ ಮಸಾಲಾ ಉತ್ಪನ್ನಗಳ ತಯಾರಿಕೆ, ದಾಸ್ತಾನು, ವಿತರಣೆ, ಸಾಗಣೆ ಮತ್ತು ಮಾರಾಟವನ್ನು ಆಹಾರ ಸುರಕ್ಷತಾ ಆಯುಕ್ತರು ನಿಷೇಧಿಸಿದ್ದಾರೆ.
ಪಾನ್ ಮಸಾಲಾದೊಂದಿಗೆ ಮಿಶ್ರಣ ಮಾಡಲು ಅನುಕೂಲವಾಗುವಂತೆ ಪ್ರತ್ಯೇಕವಾಗಿ ಪ್ಯಾಕ್ ಮಾಡಿ ಮಾರಾಟ ಮಾಡುವ ತಂಬಾಕು ಉತ್ಪನ್ನಗಳಿಗೂ ಈ ನಿಷೇಧ ಅನ್ವಯವಾಗಲಿದೆ. ಆದೇಶ ಉಲ್ಲಂಘಿಸುವ ತಯಾರಕರು, ವಿತರಕರು, ಚಿಲ್ಲರೆ ವ್ಯಾಪಾರಿಗಳು ಸೇರಿದಂತೆ ಸಂಬಂಧಪಟ್ಟವರ ವಿರುದ್ಧ ತಪಾಸಣೆ ನಡೆಸಿ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ.


