ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬೆಂಗಳೂರು ಸೆಂಟ್ರಲ್ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇರುವ ಸೆಲ್‌ನಲ್ಲಿ ಸಿಸಬಿ ದಾಳಿ ವೇಳೆ ಮೊಬೈಲ್ ಮತ್ತು ಪೆನ್‌ಡ್ರೈವ್ ಪತ್ತೆಯಾಗಿದ್ದು, ಪ್ರಜ್ವಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಇನ್ನೊಬ್ಬ ವಿಚಾರಣಾಧೀನ ಕೈದಿ ಬಳಿಯೂ ಮೊಬೈಲ್ ಫೋನ್ ಹಾಗೂ ಪೆನ್ ಡ್ರೈವ್ ಪತ್ತೆಯಾಗಿದೆ. ಸಿಸಿಬಿ ಪೊಲೀಸರು ಕೈದಿಗಳಿಂದ ಮೊಬೈಲ್ ಫೋನ್, ಚಾರ್ಜರ್, ಪೆನ್ ಡ್ರೈವ್ ಮತ್ತು ನೋಟ್‌ಬುಕ್ ವಶಪಡಿಸಿಕೊಂಡಿದ್ದಾರೆ.
ಮನೆ ಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಪ್ರಜ್ವಲ್ ರೇವಣ್ಣ ಹಾಗೂ ವಿಚಾರಣಾಧೀನ ಕೈದಿ ಪ್ರತಾಪ್ ರೈ ವಿರುದ್ಧ ಸಿಸಿಬಿ ಪೊಲೀಸರು ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ ನೋಟ್‌ಬುಕ್ ತನಗೆ ಸೇರಿದ್ದು ಎಂದು ಪ್ರಜ್ವಲ್ ಅಧಿಕಾರಿಗಳಿಗೆ ಹೇಳಿದ್ದಾನೆ. ಪ್ರತಾಪ್ ರೈ ಮೊಬೈಲ್ ಫೋನ್, ಚಾರ್ಜರ್ ಮತ್ತು ಪೆನ್ ಡ್ರೈವ್ ತನ್ನದು ಎಂದು ಹೇಳಿಕೊಂಡಿದ್ದಾನೆ. ಸಂಬಂಧಿಕರು ಮತ್ತು ವಕೀಲರನ್ನು ಸಂಪರ್ಕಿಸಲು ಈ ಫೋನ್ ಬಳಸುತ್ತಿರುವುದಾಗಿ ತಿಳಿಸಿದ್ದಾನೆ.
ಪ್ರಜ್ವಲ್ ರೇವಣ್ಣ ಸಂಬಂಧಿಕರು ಮತ್ತು ವಕೀಲರನ್ನು ಸಂಪರ್ಕಿಸಲು ಪ್ರತಾಪ್ ರೈ ಅವರಿಂದ ಫೋನ್ ಪಡೆದು ಬಳಸಿರುವುದಾ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಬಿಯ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋಸ್ ಇನ್ಸ್‌ಪೆಕ್ಟರ್ ಎಂ.ಎಲ್. ಸುಬ್ರಹ್ಮಣ್ಯ ಸ್ವಾಮಿ ನೀಡಿದ ದೂನಂತೆ ಅಧಿಕಾರಿಗಳು ಹೆಚ್ಚಿನ ಭದ್ರತೆಯ ಬ್ಯಾರಕ್‌ನಲ್ಲಿ ಶೋಧ ನಡೆಸಿದಾಗ ಪ್ರಜ್ವಲ್ ಸೆಲ್‌ನಲ್ಲಿ ರೆಡ್‌ಮಿ 5G ಮೊಬೈಲ್ ಫೋನ್, ಚಾರ್ಜರ್, ನೋಟ್‌ಬುಕ್ ಮತ್ತು ಪೆನ್‌ಡ್ರೈವ್ ಪತ್ತೆ ಮಾಡಿದ್ದಾರೆ.
ಇಬ್ಬರು ಕೈದಿಗಳು ನಿಷೇಧಿತ ವಸ್ತುಗಳನ್ನು ಅಪರಿಚಿತ ವ್ಯಕ್ತಿಯಿಂದ ಪಡೆದುಕೊಂಡು ಜೈಲಿನೊಳಗೆ ಅನುಮತಿಯಿಲ್ಲದೆ ಬಳಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಅನಿರೀಕ್ಷಿತ ದಾಳಿ ನಡೆಸಿರುವಂತೆ ರಾಜ್ಯದ ಇತರ ಕಾರಾಗೃಹಗಳಲ್ಲೂ ತಪಾಸಣೆ ನಡೆಸಲಾಗುವುದು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಅನುಮತಿ ಪಡೆದ ಬಳಿಕ 100 ಮಂದಿ ಕೇಂದ್ರ ಅಪರಾಧ ವಿಭಾಗದ ಸಿಬ್ಬಂದಿಯನ್ನು ದಾಳಿಗೆ ನಿಯೋಜಿಸಲಾಗಿತ್ತು, ಕಾರಾಗೃಹದೊಳಗಿನ ನಿಯಮ ಉಲ್ಲಂಘನೆಗಳಿಗೆ ಸಹಕರಿಸಿದ ಶಂಕಿತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.


