Menu

ಕ್ಯಾಮೆರಾ ಅಳವಡಿಸಿ ಸೇನಾಪಡೆಗಳ ಮಾಹಿತಿಯನ್ನು ಪಾಕ್‌ಗೆ ನೀಡುತ್ತಿದ್ದಾತನ ಬಂಧನ

ದೇಶದ ಸೇನಾ ಪಡೆಗಳ ಕಾರ್ಯಚಟುವಟಿಕೆಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಆರೋಪದಡಿ ಪಠಾಣ್‌ಕೋಟ್ ಪೊಲೀಸರು ಬಲ್ಜಿತ್ ಸಿಂಗ್ ಎಂಬಾತನನ್ನು ಬಂಧಿಸಿದ್ದಾರೆ.

ಚಕ್ ಧಾರಿವಾಲ್ ಗ್ರಾಮದ ನಿವಾಸಿಯಾದ ಬಲ್ಜಿತ್ ಸಿಂಗ್, ರಾಷ್ಟ್ರೀಯ ಹೆದ್ದಾರಿ-44ರ ಪಠಾಣ್‌ಕೋಟ್-ಜಮ್ಮು ರಸ್ತೆಯ ಸೇತುವೆಯ ಬಳಿಯ ಅಂಗಡಿಯಲ್ಲಿ ಇಂಟರ್ನೆಟ್ ಆಧಾರಿತ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದ.

ಈ ಹೆದ್ದಾರಿಯಲ್ಲಿ ಸೇನೆ ಮತ್ತು ಅರೆಸೇನಾಪಡೆಗಳ ಪಡೆಗಳ ಚಲನವಲನಗಳನ್ನು ಲೈವ್ ಆಗಿ ತಿಳಿದುಕೊಂಡು ಮಾಹಿತಿಯನ್ನು ಪಾಕಿಸ್ತಾನ ಮತ್ತು ವಿದೇಶಿ ಏಜೆಂಟ್‌ಗಳಿಗೆ ಕಳುಹಿಸುತ್ತಿದ್ದ. ಈ ಕೆಲಸಕ್ಕಾಗಿ ದುಬೈನಿಂದ ಅಪರಿಚಿತ ವ್ಯಕ್ತಿಯಿಂದ ನಿರ್ದೇಶನಗಳು ಬರುತ್ತಿದ್ದವು ಮತ್ತು 40,000 ರೂ. ನೀಡಲಾಗಿತ್ತು ಎಂಬುದು ತಿಳಿದು ಬಂದಿದೆ. ಪೊಲೀಸರು ಈತನಿಂದ ಕ್ಯಾಮೆರಾ ಮತ್ತು ವೈಫೈ ರೂಟರ್ ವಶಪಡಿಸಿಕೊಂಡಿದ್ದು, ಜಾಲದಲ್ಲಿದ್ದ ಉಳಿದ ಮೂವರು ಆರೋಪಿಗಳಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.

ಪಂಜಾಬ್ ಪೊಲೀಸರು ಜಲಂಧರ್ ಮತ್ತು ಕಪುರ್ತಲಾದಲ್ಲಿ ಇದೇ ರೀತಿಯ ಎರಡು ಬೇಹುಗಾರಿಕೆ ಜಾಲಗಳನ್ನು ಧ್ವಂಸಗೊಳಿಸಿದ್ದರು. ಪಾಕಿಸ್ತಾನದ ಹ್ಯಾಂಡ್ಲರ್‌ಗಳು ಮಿಲಿಟರಿ ನೆಲೆಗಳ ಬಳಿ ಕಣ್ಣಿಡಲು ಅತ್ಯಾಧುನಿಕ ಚೀನಾ ನಿರ್ಮಿತ ಮತ್ತು ಸೌರಶಕ್ತಿ ಚಾಲಿತ ವೈರುಂಗ್‌ ರಹಿತ ಹೈಟೆಕ್ ಕ್ಯಾಮೆರಾ ಬಳಸುತ್ತಿದ್ದರು. 4G ಸಿಮ್ ಕಾರ್ಡ್ ಮತ್ತು ಸೋಲಾರ್ ಪ್ಲೇಟ್ ಸಹಾಯದಿಂದ ಆಫ್-ಗ್ರಿಡ್ ಆಗಿ ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದವು. ಮೊಬೈಲ್ ಆಪ್‌ ಮೂಲಕ ಪಾಕಿಸ್ತಾನದವರು ಭಾರತೀಯ ಸೇನೆಯ ಚಟುವಟಿಕೆಗಳನ್ನು ನೇರ ವೀಕ್ಷಿಸುತ್ತಿದ್ದರು ಎಂದು ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದಾರೆ.

ಜಲಂಧರ್‌ನಲ್ಲಿ ಸುಖ್ವಿಂದರ್ ಸಿಂಗ್ , ಕಪುರ್ತಲಾದ ಸೇನಾ ನೆಲೆ ಬಳಿ ಕ್ಯಾಮೆರಾ ಅಳವಡಿಸಿದ್ದ ಸೋನಾ ಮತ್ತು ಸಂದೀಪ್ ಸಿಂಗ್ ಎಂಬವರನ್ನು ಬಂಧಿಸಲಾಗಿದೆ. ಸಂದೀಪ್ ಸಿಂಗ್ ಮಾದಕವಸ್ತು ಕಳ್ಳಸಾಗಣೆಯಲ್ಲೂ ಭಾಗಿಯಾಗಿದ್ದು, ಪಾಕಿಸ್ತಾನಿ ಡ್ರೋನ್ ಮೂಲಕ ಕಳುಹಿಸಿದ್ದ 1 ಕೆಜಿ ಹೆರಾಯಿನ್ ವಿತರಿಸಲು 50,000 ರೂ. ಪಡೆದಿದ್ದ ಎಂಬ ವಿಷಯ ಬಯಲಾಗಿದೆ.

Related Posts

Leave a Reply

Your email address will not be published. Required fields are marked *