ಸ್ನೇಹಿತನ ಮನೆಯಲ್ಲೇ ಚಿನ್ನಾಬರಣ ಮತ್ತು ಹಣ ದರೋಡೆ ಮಾಡಿಸಿದ್ದ ಮೇಸ್ತ್ರಿಯೊಬ್ಬನನ್ನು ಚಿಕ್ಕಜಾಲದ ಹುಣಸಮಾರನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಗುರುಪ್ರಸಾದ್ ಬಂಧಿತ ಆರೋಪಿ.
ತನ್ನ ಬಳಿ ಕೆಲಸ ಮಾಡಿಕೊಂಡಿದ್ದ ಇಬ್ಬರಿಗೆ ಸ್ನೇಹಿತ ಸುದರ್ಶನ್ ಎಂಬಾತನ ಮನೆ ಕಳವು ಮಾಡಲು ತರಬೇತಿ ನೀಡಿದ್ದ. ಏಪ್ರಿಲ್ 18ರಂದು ಮನೆಗೆ ನುಗ್ಗಿದ್ದ ದರೋಡೆಕೋರರು ಚಾಕು ತೋರಿಸಿ ಹಣ ಮತ್ತು ಬಂಗಾರ ದೋಚಿ ಪರಾರಿಯಾಗಿದ್ದರು.
ಆರೋಪಿ ಗುರುಪ್ರಸಾದ್ ಮತ್ತು ಸುದರ್ಶನ್ ಸ್ನೇಹಿತರು. ಸುದರ್ಶನ್ ಮತ್ತು ತಂದೆ ಕೃಷ್ಣಚಾರಿ ಮನೆ ಕಟ್ಟಿಸಲು ನಿರ್ಧರಿಸಿದ್ದು, ಕೆಲಸವನ್ನು ಗುರುಪ್ರಸಾದ್ಗೆ ವಹಿಸಿದ್ದರು. ಸ್ನೇಹಿತ ಎಂದು ಗುರುಪ್ರಸಾದ್ ಕಡಿಮೆ ಹಣಕ್ಕೆ ಒಪ್ಪಿಕೊಂಡು ಕೆಲಸ ಮಾಡಿಸುತ್ತಿದ್ದ. ಪ್ರತಿದಿನ ಕೆಲಸದ ಸ್ಥಳಕ್ಕೆ ಬರುತ್ತಿದ್ದ ತಂದೆ, ಮಗ ಕಿರಿಕಿರಿ ಮಾಡುತ್ತಿದ್ದರು, ಇದು ಸರಿ ಇಲ್ಲ, ಇದು ಸರಿಯಾಗಿ ಕಟ್ಟಿಲ್ಲ ಎಂದು ಪದೇ ಪದೆ ಕ್ಯಾತೆ ತೆಗೆಯುತ್ತಿದ್ದರು. ಪೂರ್ತಿ ಹಣ ಕೊಡುವುದಿಲ್ಲ ಎಂದು ಕಿರಿಕ್ ಮಾಡುತ್ತಿದ್ದರು. ಇದರಿಂದ ಗುರುಪ್ರಸಾದ್ ಮಾನಸಿಕವಾಗಿ ನೊಂದಿದ್ದ ಎನ್ನಲಾಗಿದೆ.
ತನ್ನ ಬಳಿ ಕೆಲಸ ಮಾಡ್ತಿದ್ದ ಅರ್ಬಾಜ್ ಮತ್ತೆ ಜಿಬ್ರಾನ್ಗೆ ಗುರುಪ್ರಸಾದ್ ಕಳವು ತರಬೇತಿ ನೀಡಿ ಸುದರ್ಶನ್ ಮನೆಗೆ ಕಳುಹಿಸಿ ದರೋಡೆ ಮಾಡಿಸಿದ್ದ. 79 ಗ್ರಾಂ ಚಿನ್ನ, 64 ಗ್ರಾಂ ಬೆಳ್ಳಿ, 12 ಲಕ್ಷ ನಗದು ದೋಚಿ ಆರೋಪಿಗಳು ತಲೆ ಮರೆಸಿಕೊಂಡಿದ್ದರು.
ಎರಡು ತಿಂಗಳ ಬಳಿಕ ಪೊಲೀಸರು ಆರೋಪಿಗಳಾದ ಗುರುಪ್ರಸಾದ್, ಅರ್ಬಾಜ್ ಮತ್ತು ಜಿಬ್ರಾನ್ನನ್ನು ಬಂಧಿಸಿ ದರೋಡೆ ಮಾಡಿದ ಚಿನ್ನ, ಹಣ ವಶಪಡಿಸಿಕೊಂಡಿದ್ದಾರೆ. ದ್ವಿಚಕ್ರ ವಾಹನ ಮತ್ತು ಕಾರು, ಮೊಬೈಲ್ಗಳನ್ನು ಜಪ್ತಿ ಮಾಡಿದ್ದಾರೆ.
ಚಾಕು ತೋರಿಸಿ ಕಪಾಟಿನ ಕೀ ಕೇಳಿದ್ದ ಆರೋಪಿಗಳು, 12 ಲಕ್ಷ ಹಣ ಬ್ಯಾಗ್ನಲ್ಲಿ ತುಂಬಿಕೊಂಡಿದ್ದರು. ಸಂತ್ರಸ್ತ ಕೃಷ್ಣಾಚಾರಿ, ಎಲ್ಲಾ ದುಡ್ಡು ನೀವೇ ತೆಗೆದುಕೊಂಡು ಹೋಗುತ್ತಿದ್ದೀರಿ. ನಮ್ಮ ಜೀವನಕ್ಕೆ ಏನು ಮಾಡೋದು ಎಂದು ಕೇಳಿದ್ದಕ್ಕೆ ಆರೋಪಿಗಳು ಬ್ಯಾಗಲ್ಲಿ ತುಂಬಿಸಿದ್ದ ಹಣದಿಂದ 50 ಸಾವಿರ ರೂ. ನೀಡಿದ್ದರು. ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದರು ಎಂಬುದು ಗೊತ್ತಾಗಿದೆ.


