Wednesday, September 09, 2026
Menu

ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ಸ್ಪಂದಿಸಿ: ಸಿಎಂ ಡಿಕೆ ಶಿವಕುಮಾರ್

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸಬೇಕು ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ನಡೆದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.

ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಸೂಚಿಸಿದರು. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ರೇಷ್ಮೆ ಕೃಷಿ ಯೋಜನೆಯಡಿ ನೀಡಲಾಗುತ್ತಿರುವ ಸಹಾಯಧನ, ಸಾಲ ಸೌಲಭ್ಯದ ಕುರಿತಂತೆ ಚರ್ಚಿಸಿದ ಮುಖ್ಯಮಂತ್ರಿಗಳು, ರೇಷ್ಮೆ ಕೃಷಿಕರೊಂದಿಗೆ ಸಮಾಲೋಚಿಸಿ ಯೋಜನೆ ಪುನಃ ರೂಪಿಸುವಂತೆ ಸೂಚಿಸಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಬರುವ ಎಲ್ಲ ನಿಗಮ ಮಂಡಳಿಗಳ ಅಧ್ಯಕ್ಷರು ರಾಜ್ಯಾದ್ಯಂತ ಪ್ರವಾಸ ಮಾಡಿ, ಸಮುದಾಯಗಳ ಸಮಸ್ಯೆಗಳನ್ನು ಆಲಿಸಬೇಕು. ಆಯವ್ಯಯದಲ್ಲಿ ಘೋಷಿಸಲಾದ ಮೌಲಾನಾ ಆಜಾದ್ ಶಾಲೆಗಳನ್ನು ಕೆಪಿಎಸ್ ಮಾದರಿಯಲ್ಲಿ ಉನ್ನತೀಕರಣ, ಮಹಿಳಾ ಕಾಲೇಜು ಪ್ರಾರಂಭ ಮತ್ತಿತರ ಯೋಜನೆಗಳನ್ನು ತ್ವರಿತವಾಗಿ ಪ್ರಾರಂಭಿಸಲು ಸೂಚನೆ ನೀಡಿದರು.

ರಾಜ್ಯಸಭಾ ಸದಸ್ಯ ಮನ್ಸೂರ್ ಖಾನ್ ಅಧ್ಯಕ್ಷತೆಯಲ್ಲಿ ಅಲ್ಪಸಂಖ್ಯಾತರ ಶಿಕ್ಷಣ ಕುರಿತಂತೆ ಸಮಿತಿ ರಚಿಸಲಾಗಿದೆ. ಅಂತೆಯೇ ಹಾಸ್ಟೆಲ್ ಗಳಲ್ಲಿ ನೀಡುವ ಭೋಜನ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಶಾಸಕ ಯಾಸಿರ್ ಪಠಾಣ್ ಅಧ್ಯಕ್ಷತೆಯ ಸಮಿತಿ ಹಾಗೂ ದಕ್ಷಿಣ ಭಾಗದಲ್ಲಿ ಶಾಸಕಿ ಬಿಲ್ಕಿಸ್ ಬಾನು ಅಧ್ಯಕ್ಷತೆಯ ಸಮಿತಿ ಪ್ರವಾಸ ಮಾಡಿ ವರದಿ ಸಲ್ಲಿಸಿದೆ. ಇದರ ಆಧಾರದಲ್ಲಿ ಕ್ರಮ ವಹಿಸಲಾಗುವುದು ಎಂದು ಮಾಹಿತಿ ನೀಡಿದರು.

ಆಯ್ದ ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳೇ ನಡೆಸುವ ಮೆಸ್ ಅನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ‌‌, ಇಲಾಖೆಯು ರೂಪಿಸಿರುವ ಉತ್ತಮ ಯೋಜನೆಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸುವಂತೆ ಸೂಚಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಪ್ ಸಚಿವ ಯು.ಟಿ. ಖಾದರ್, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್, ಬಿಡಿಎ ಅಧ್ಯಕ್ಷ ಎನ್ ಎ ಹ್ಯಾರಿಸ್, ಮಾಜಿ ಸಚಿವ ರಹೀಂ ಖಾನ್, ವಕ್ಫ್ ಮಂಡಳಿ ಅಧ್ಯಕ್ಷ ಅಲಿ ಬಾಬಾ ಹುಸೇನಿ, ಅಲ್ಪಸಂಖ್ಯಾತರ ಆಯೋಗ ಅಧ್ಯಕ್ಷ ಯು. ನಿಸಾರ್ ಅಹ್ಮದ್, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಲ್ತಾಫ್ ಖಾನ್, ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರೊ. ಜಾಫೆಟ್, ಹಜ್ ಸಮಿತಿ ಅಧ್ಯಕ್ಷ ಟಿಪ್ಪು, ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮನೋಜ್ ಜೈನ್ ಸಭೆಯಲ್ಲಿ ಭಾಗವಹಿಸಿದ್ದರು.

Related Posts

Leave a Reply

Your email address will not be published. Required fields are marked *