ಬೆಂಗಳೂರು ನಗರದ ವಾಹನ ದಟ್ಟಣೆ ತಗ್ಗಿಸುವ ಉಪ ನಗರ ವರ್ತುಲ ರಸ್ತೆ ಯೋಜನೆ (ಎಸ್ಟಿಆರ್ಆರ್) ಬಗ್ಗೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರದ ಭೂಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರೊಂದಿಗೆ ಮಾತುಕತೆ ನಡೆಸಿದರು.
ನವದೆಹಲಿಯಲ್ಲಿ ಗಡ್ಕರಿ ಅವರನ್ನು ಭೇಟಿಯಾದ ಕುಮಾರಸ್ವಾಮಿ, ನೆನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಸಚಿವರಲ್ಲಿ ಮನವಿ ಮಾಡಿದರು. ಕುಮಾರಸ್ವಾಮಿ ಅವರ ಮನವಿಗೆ ಸ್ಪಂದಿಸಿದ ಗಡ್ಕರಿ, ಆದಷ್ಟು ಬೇಗ ಯೋಜನೆಯ ಪ್ರಸ್ತಾವನೆಯನ್ನು ‘ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೌಲ್ಯಮಾಪನ ಸಮಿತಿ’ ಮುಂದೆ ಮಂಡಿಸಿ ತ್ವರಿತವಾಗಿ ಅನುಷ್ಠಾನಗೊಳಿಸುವುಕ್ಕೆ ಸಹಕರಿಸುವುದಾಗಿ ಭರವಸೆ ನೀಡಿದರು.
ಉಪನಗರ ವರ್ತುಲ ರಸ್ತೆ ಯೋಜನೆ 2013ರಲ್ಲಿಯೇ ಚಾಲನೆ ಪಡೆದಿತ್ತು. ನಾಲ್ಕರಿಂದ ಆರು ಪಥಗಳ ಈ ಯೋಜನೆಯು ದಾಬಸ್ಪೇಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಸೂಲಿಬೆಲೆ, ಹೊಸಕೋಟೆ, ಆನೇಕಲ್, ಕನಕಪುರ, ರಾಮನಗರ ಮತ್ತು ಮಾಗಡಿ ಸೇರಿದಂತೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಉಪನಗರ ಪ್ರದೇಶಗಳನ್ನು ಸಂಪರ್ಕಿಸುತ್ತದೆ.
ಈ ಉಪನಗರ ವರ್ತುಲ ರಸ್ತೆಯನ್ನು ಬೆಂಗಳೂರು – ಚೆನ್ನೈ ಎಕ್ಸ್ ಪ್ರೆಸ್ ಹೆದ್ದಾರಿಗೆ ಸಂಪರ್ಕಗೊಳಿಸಲಾಗುವು ದು. ತಮಿಳುನಾಡಿನ ಹೊಸೂರನ್ನೂ ಸಂಪರ್ಕಿಸುತ್ತದೆ. ಬೃಹತ್ ವಾಹನ ಬೆಂಗಳೂರು ನಗರದೊಳಕ್ಕೆ ಪ್ರವೇಶ ಮಾಡದಂತೆ ತಡೆಯುವುದೇ ಯೋಜನೆಯ ಉದ್ದೇಶ ವಾಗಿದೆ. ಬೆಂಗಳೂರು ನಗರದ ಮೇಲೆ ಸಂಚಾರದ ಒತ್ತಡ ಕಡಿಮೆ ಆಗಲಿದೆ.
ಎಂಟು ವರ್ಷಗಳಿಂದ ಬಾಕಿ ಇದ್ದ ಭೂಸ್ವಾಧೀನ ಪರಿಹಾರದ ಹಣವನ್ನು ಕೂಡಲೇ ರೈತರಿಗೆ ಪಾವತಿ ಮಾಡಲು ಸಚಿವ ಗಡ್ಕರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ರಾಮನಗರ ಸೇರಿ ವಿವಿಧ ಜಿಲ್ಲೆಗಳಲ್ಲಿ ಭೂಮಿ ಕಳೆದುಕೊಂಡಿರುವ ರೈತರಿಗೆ ಅನುಕೂಲವಾಗಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಈ ಯೋಜನೆಯು ರಾಜ್ಯದಲ್ಲಿ ಸುಮಾರು 135 ಕಿ.ಮೀ. ದೂರ ಹಾದು ಹೋಗಲಿದ್ದು, ₹4,750 ಕೋಟಿ ವೆಚ್ಚದಲ್ಲಿ ಕಾರ್ಯಗತ ಆಗುತ್ತಿದೆ. 4 ರಿಂದ 6 ಪಥ ಹೊಂದಿರುವ ಸಂಪೂರ್ಣ ನಿಯಂತ್ರಿತ ಪ್ರವೇಶ ವ್ಯವಸ್ಥೆಯನ್ನು ಹೊಂದಿರುವ ಈ ಹೆದ್ದಾರಿಯು ಅಡೆತಡೆಗಳಿಲ್ಲದೆ ಸಂಚಾರ ಸೌಲಭ್ಯ ಕಲ್ಪಿಸಲಿದೆ ಎಂದು ಸಚಿವರು ತಿಳಿಸಿದರು.