ಬಿಬಿಎಂಪಿ ಕಸ ಸಾಗಣೆ ಲಾರಿ ಹರಿದು ಅಕ್ಕ-ತಂಗಿ ಇಬ್ಬರು ಮೃತಪಟ್ಟಿರುವ ಘಟನೆ ಥಣಿಸಂದ್ರ ಮುಖ್ಯ ರಸ್ತೆಯ ಸಾರಾಯಿಪಾಳ್ಯ ಬಳಿ ನಡೆದಿದೆ. ಗೋವಿಂದಪುರದ ನಾಜಿಯಾ ಸುಲ್ತಾನ (30), ನಾಜಿಯಾ ಇರ್ಫಾನ (32) ಮೃತರು. ಅಪಘಾತ ನಡೆಸಿದ ಲಾರಿ ಚಾಲಕ ಗಡಿಲಿಂಗನನ್ನು ಪೊಲೀಸರು ಬಂಧಿಸಿದ್ದಾರೆ.
ಥಣಿಸಂದ್ರ ಮುಖ್ಯರಸ್ತೆಯ ಸಾರಾಯಿಪಾಳ್ಯದ ಬಳಿ ಮಧ್ಯಾಹ್ನ ಬಿಬಿಎಂಪಿ ಕಸದ ಲಾರಿ ತೆರಳುತ್ತಿದ್ದಾಗ ಸ್ಕೂಟರ್ ನಲ್ಲಿ ಬರುತ್ತಿದ್ದ ಸಹೋದರಿಯರು ಕಸದ ಲಾರಿಯನ್ನು ಎಡಗಡೆಯಿಂದ ಓವರ್ ಟೇಕ್ ಮಾಡಲು ಮುಂದಾಗಿದ್ದಾರೆ, ಇದೇ ವೇಳೆ ಎದುರಿಗೆ ಬೈಕ್ ಬಂದಿದೆ. ಬೈಕ್ನಿಂದ ತಪ್ಪಿಸಿಕೊಳ್ಳುವ ಬರದಲ್ಲಿ ಗಾಡಿಯನ್ನು ಬಲಕ್ಕೆ ತಿರುಗಿದ್ದಾರೆ. ಪಕ್ಕದಲ್ಲಿದ್ದ ಲಾರಿಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದು ಲಾರಿ ಕೆಳಗೆ ಸಿಕ್ಕಿ ಮೃತಪಟ್ಟಿದ್ದಾರೆ.
ಮೃತ ನಾಜಿಯಾ ಸುಲ್ತಾನಾಗೆ ನಾಲ್ವರು ಹೆಣ್ಣು ಮಕ್ಕಳಿದ್ದಾರೆ. ನಮಗೆ ಮೂವರು ಹೆಣ್ಣು ಹಾಗೂ ಓರ್ವ ಗಂಡು ಮಗನಿದ್ದಾನೆ. ನನ್ನ ಹಿರಿಯ ಮಗನ ಜನ್ಮದಿನಕ್ಕೆ ಶಾಪಿಂಗ್ ಮಾಡಲು ಬಂದಿದ್ದ ಅಕ್ಕ – ತಂಗಿಯರು ನಂತರ ಆಸ್ಪತ್ರೆಗೆ ಹೋಗಿ ಬರಲು ಹೊರಟಿದ್ದರು. ಮನೆಯಿಂದ ಬಂದ ಅರ್ಧಗಂಟೆಯೊಳಗೆ ಈ ರೀತಿ ಆಗಿದೆ. ಚಾಲಕ ಮದ್ಯಪಾನ ಮಾಡಿ ಲಾರಿ ಚಲಾಯಿಸಿದ್ದರಿಂದ ಅಪಘಾತವಾಗಿದೆ ಎಂದು ಮೃತ ನಾಜಿಯಾ ಇರ್ಫಾನ್ ಪತಿ ಇಮ್ರಾನ್ ಸೈಯ್ಯದ್ ತಿಳಿಸಿದ್ದಾರೆ.
ಅಪಘಾತ ನಡೆದ ಸ್ಥಳಕ್ಕೆ ಹೆಣ್ಣೂರು ಸಂಚಾರ ಠಾಣೆ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿ ಲಾರಿ ಚಾಲಕನನ್ನು ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.