ಉದಯಕಾಲ ನ್ಯೂಸ್, ಬೆಂಗಳೂರು: ಸಮಾಜದ ಹರಿಕಾರ, ಗುರು ಬಸವಣ್ಣನವರ ಚಾರಿತ್ರ್ಯಕ್ಕೆ ಮಸಿ ಬಳಿಯುವ ರೀತಿಯಲ್ಲಿ ಪುಸ್ತಕ ಪ್ರಕಟಿಸಿ, ವಿಡಿಯೋಗಳ ಮೂಲಕ ಅವಹೇಳನಕಾರಿ ಹೇಳಿಕೆಗಳನ್ನು ನೀಡಲಾಗಿದೆ ಎಂದು ಆರೋಪಿಸಿರುವ ಅಮೆರಿಕ ಮೂಲದ ಲೇಖಕ ರವಿ ಹಂಜ್ ವಿರುದ್ಧ ಲಿಂಗಾಯತ ಸಮುದಾಯದ ಪ್ರಮುಖರು ಹಾಗೂ ಬಸವಪರ ಚಿಂತಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕಠಿಣ ಕಾನೂನು ಕ್ರಮ ಹಾಗೂ ಪೊಲೀಸ್ ದೂರು ದಾಖಲಿಸುವುದಾಗಿ ನಾಯಕರು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ಬಸವೇಶ್ವರ ವೃತ್ತದಲ್ಲಿರುವ ಬಸವ ಸಮಿತಿಯಲ್ಲಿ ಸಚಿವರಾದ ಎಂ.ಬಿ. ಪಾಟೀಲ್, ಡಾ. ಶರಣಪ್ರಕಾಶ ಪಾಟೀಲ್, ಶಾಸಕ ಬಿ.ಆರ್. ಪಾಟೀಲ್, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಡಾ. ನೀರಜ್ ಪಾಟೀಲ್ ಸೇರಿದಂತೆ ಹಲವು ಪ್ರಮುಖರು ಜಂಟಿ ಸುದ್ದಿಗೋಷ್ಠಿ ನಡೆಸಿ ಬರಹ ಮತ್ತು ವಿಡಿಯೋಗಳನ್ನು ಕಟುವಾಗಿ ಖಂಡಿಸಿದರು. ಬಸವಣ್ಣನವರ ವ್ಯಕ್ತಿತ್ವ ಹಾಗೂ ವಚನ ಪರಂಪರೆಯ ಮೇಲೆ ನಡೆಯುತ್ತಿರುವ ಇಂತಹ ದಾಳಿಗಳನ್ನು ಇನ್ನು ಮುಂದೆ ಸಹಿಸುವುದಿಲ್ಲ ಎಂದು ಮುಖಂಡರು ಒಕ್ಕೊರಲಿನಿಂದ ಆಗ್ರಹಿಸಿದರು.
ಬಸವಣ್ಣನನ್ನು ಕ್ರಿಮಿನಲ್ ರೀತಿ ಬಿಂಬಿಸಿರುವುದು ಅಕ್ಷಮ್ಯ: ಎಂ.ಬಿ. ಪಾಟೀಲ್ ಆಕ್ರೋಶ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್ ಅವರು ರವಿ ಹಂಜ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಜಗತ್ತಿಗೆ ಸಮಾನತೆಯ ಸಂದೇಶ ಮತ್ತು ಅನುಭವ ಮಂಟಪವನ್ನು ಕೊಟ್ಟ ಕ್ರಾಂತಿಪುರುಷ ಬಸವಣ್ಣನವರು. ಮಹಿಳಾ ಸಬಲೀಕರಣ ಮತ್ತು ಮೂಢನಂಬಿಕೆ ನಿವಾರಣೆಗೆ ಹೋರಾಡಿದ ಮಹಾನ್ ಚೇತನ. ಆದರೆ, ಅಮೆರಿಕ ವಾಸಿಯಾಗಿರುವ ರವಿ ಹಂಜ್ ಎಂಬುವವರು ಬಸವಣ್ಣನವರನ್ನು ಕೊಲೆಗಡುಕ, ದರೋಡೆಕೋರ, ಲೂಟಿಕೋರ ಎಂಬಂತೆ ಕ್ರಿಮಿನಲ್ ರೀತಿ ಬಿಂಬಿಸಿ ಲೇಖನ ಮತ್ತು ಪುಸ್ತಕ ಬರೆದಿದ್ದಾರೆ. ಇವರ ಬಾಯಲ್ಲಿ ಇಂತಹ ಪದಗಳು ಹೇಗೆ ಬರುತ್ತವೆ? ಇದನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರವಿ ಹಂಜ್ ಕೈಯಿಂದ ಯಾರು ಇದನ್ನೆಲ್ಲಾ ಬರೆಸುತ್ತಿದ್ದಾರೆ ಎಂಬುದನ್ನು ನಾವು ಪತ್ತೆ ಹಚ್ಚುತ್ತೇವೆ. ರೆಫರೆನ್ಸ್ ಇದೆ ಎಂದು ಹೇಳಿ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ನಮ್ಮಲ್ಲೂ ಸ್ವಾಮೀಜಿಗಳು, ಚಿಂತಕರು, ಇತಿಹಾಸಕಾರರು ಇದ್ದಾರೆ; ಇದೆಲ್ಲವನ್ನೂ ಪರಿಶೀಲಿಸುತ್ತೇವೆ. ಮಹಾರಾಷ್ಟ್ರಕ್ಕೆ ಹೋಗಿ ಶಿವಾಜಿ ಮಹಾರಾಜರ ಬಗ್ಗೆ ಹೀಗೆ ಮಾತನಾಡಿ ನೋಡೋಣ, ಅಟ್ಟಾಡಿಸಿಕೊಂಡು ಹೋಗುತ್ತಿದ್ದರು ಎಂದು ಎಂ.ಬಿ. ಪಾಟೀಲ್ ಕಿಡಿಕಾರಿದರು. ಜತೆಗೆ, ಬಸವಣ್ಣನವರನ್ನು ಅಪಮಾನಿಸುವ ಯೂಟ್ಯೂಬ್ ಸಂದರ್ಶನದಲ್ಲಿ ಶಂಕರ್ ಬಿದರಿ ಹಾಗೂ ಮನು ಬಳಿಗಾರ್ ಅಂತಹವರು ಭಾಗವಹಿಸಿ ಚಪ್ಪಾಳೆ ಹೊಡೆಯುತ್ತಾರೆ ಎಂದು ಅವರು ತೀವ್ರ ಅಸಮಾಧಾನ ಹೊರಹಾಕಿದರು.
ನಾವು ಸೌಮ್ಯ ಸ್ವಭಾವದವರು, ಕಚ್ಚಾಡುವವರಲ್ಲ. ಆದರೆ ಇನ್ನು ಮುಂದೆ ಬಸವ ಧರ್ಮ ಮತ್ತು ವಚನಗಳ ಮೇಲೆ ಇಂತಹ ದಾಳಿ ನಡೆದರೆ ತಾಳಿಕೊಳ್ಳುವುದಿಲ್ಲ. ಉರಿಗೌಡ-ನಂಜೇಗೌಡ ವಿಚಾರ ಬಂದಾಗ ನಿರ್ಮಲಾನಂದನಾಥ ಸ್ವಾಮೀಜಿ ಎಚ್ಚರಿಕೆ ನೀಡಿದ ಬಳಿಕ ಎಲ್ಲರೂ ಸುಮ್ಮನಾದರು. ಈ ವಿಚಾರವಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಂ.ಬಿ. ಪಾಟೀಲ್ ಸ್ಪಷ್ಟಪಡಿಸಿದರು.
ಕಾಣದ ಕೈವಾಡ ಬಯಲಾಗಬೇಕು, ಪೊಲೀಸ್ ದೂರಿಗೆ ಸಿದ್ಧತೆ
ಇದೇ ವೇಳೆ ಮಾತನಾಡಿದ ಬಸವ ಅನುಯಾಯಿ ಡಾ. ನೀರಜ್ ಪಾಟೀಲ್, ಲಂಡನ್ನ ಬ್ರಿಟಿಷ್ ಪಾರ್ಲಿಮೆಂಟ್ ಆವರಣದಲ್ಲಿ ಬಸವಣ್ಣನವರ ಪ್ರತಿಮೆ ಸ್ಥಾಪಿಸುವಾಗ ನಮಗೆ ಯಾವುದೇ ವಿರೋಧವಾಗಲಿಲ್ಲ. ಏಕೆಂದರೆ ಜಗತ್ತಿಗೆ ಬಸವಣ್ಣನವರ ಇತಿಹಾಸ ಮತ್ತು ವ್ಯಕ್ತಿತ್ವ ಏನೆಂದು ಗೊತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಒಬ್ಬ ಮಹಾಪುರುಷನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಅಧಿಕಾರ ಯಾರಿಗೂ ಇಲ್ಲ. ಈ ಲೇಖನ ಮತ್ತು ವಿಡಿಯೋ ಅಪರಾಧದ ಭಾಗವಾಗಿದ್ದು, ಈ ಬಗ್ಗೆ ನಾವು ಪೊಲೀಸ್ ದೂರು ನೀಡುತ್ತೇವೆ. ಇದರ ಹಿಂದಿರುವ ಎಲ್ಲರಿಗೂ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಶಾಸಕ ಬಿ.ಆರ್. ಪಾಟೀಲ್ ಮಾತನಾಡಿ, ಬಸವಣ್ಣನವರ ವಿಚಾರಧಾರೆಯ ಬೆಳಕು ಜಗತ್ತಿನಾದ್ಯಂತ ಪಸರಿಸುತ್ತಿದೆ. ಇದನ್ನು ತಡೆದುಕೊಳ್ಳುವ ಶಕ್ತಿ ವಿಕೃತ ಮನಸ್ಸುಗಳಿಗೆ ಇಲ್ಲ. ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅವರ ನೇತೃತ್ವದಲ್ಲಿ ನಾವು ಪೊಲೀಸ್ ದೂರು ದಾಖಲಿಸುತ್ತೇವೆ. ಇದರ ಹಿಂದಿನ ಕಾಣದ ಕೈವಾಡ ಬಯಲಾಗಬೇಕು. ಈಗ ಕ್ಷಮೆ ಕೇಳುವುದೆಲ್ಲಾ ಬರೀ ನಾಟಕ. ಇದನ್ನು ನಾವು ಸಹಿಸುವುದಿಲ್ಲ, ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು. ಒಟ್ಟಾರೆ, ಈ ವಿವಾದವು ರಾಜ್ಯದಲ್ಲಿ ಬಸವ ಅನುಯಾಯಿಗಳು ಹಾಗೂ ಲಿಂಗಾಯತ ಮುಖಂಡರ ತೀವ್ರ ವಿರೋಧಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ತೀವ್ರಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ.
#MBPatil #RaviHanj #Basavanna #LingayatLeaders #BasavaSamiti #BRPatil #NeerajPatil #KarnatakaNews #BengaluruNews #Udayakala


