Thursday, November 19, 2026
Menu

ಸಿವಿಲ್ ಪ್ರಕರಣಗಳಲ್ಲಿ ಪೊಲೀಸರ ಹಸ್ತಕ್ಷೇಪ : ಹೈಕೋರ್ಟ್ ತೀವ್ರ ಅಸಮಾಧಾನ

ಉದಯಕಾಲ ನ್ಯೂಸ್, ಬೆಂಗಳೂರು: ಸಿವಿಲ್ ಸ್ವರೂಪದ ವ್ಯಾಜ್ಯಗಳಲ್ಲಿ ಪೊಲೀಸರು ಹಸ್ತಕ್ಷೇಪ ಮಾಡಬಾರದು ಎಂದು ಹೈಕೋರ್ಟ್ ಹಲವು ಬಾರಿ ಸ್ಪಷ್ಟ ನಿರ್ದೇಶನಗಳನ್ನು ನೀಡಿದ್ದರೂ ಸಹ, ಪೊಲೀಸರ ಮಧ್ಯಪ್ರವೇಶ ಮುಂದುವರಿದಿರುವುದಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರು (DGP) ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಪದೇ ಪದೇ ಸೂಚನೆ ನೀಡಿದ್ದರೂ ಇಂತಹ ಪ್ರಕರಣಗಳು ನಿತ್ಯ ನ್ಯಾಯಾಲಯದ ಮುಂದೆ ಬರುತ್ತಿವೆ ಎಂದು ನ್ಯಾಯಪೀಠ ಕಟುವಾಗಿ ನುಡಿದಿದೆ.

ಬಹುಮಹಡಿ ವಸತಿ ಅಪಾರ್ಟ್‌ಮೆಂಟ್ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಖಾಸಗಿ ಕಂಪನಿಯೊಂದಕ್ಕೆ ಕೇಂದ್ರ ಅಪರಾಧ ವಿಭಾಗದ (CCB) ಪೊಲೀಸರು ನೀಡಿದ್ದ ನೋಟಿಸ್‌ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ. ನೋಟಿಸ್ ರದ್ದು ಕೋರಿ ಮೆರ್ಸಸ್ ಎಚ್‌ವಿ ವೆಂಚರ್ಸ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ಜಂಟಿ ವ್ಯವಸ್ಥಾಪಕ ನಿರ್ದೇಶಕ ಶಿವರಾಮ್ ಕುಮಾರ್ ಮಳಕಾಳ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ಪೀಠ ನಡೆಸಿತು.

ಪೊಲೀಸರಿಗೆ ಖಾಕಿ ಕೆಲಸ ಬಿಟ್ಟು ಬೇರೆ ಕೆಲಸವೇಕೆ?

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಇದೊಂದು ಸಂಪೂರ್ಣವಾಗಿ ಸಿವಿಲ್ ಸ್ವರೂಪದ ಒಪ್ಪಂದ ಹಾಗೂ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದ ವ್ಯಾಜ್ಯವಾಗಿದ್ದರೂ, ಸಿಸಿಬಿ ಪೊಲೀಸರು ಅರ್ಜಿದಾರರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರು, ಪೊಲೀಸರು ಏನೆಲ್ಲಾ ಮಾಡುವುದಿಲ್ಲ? ಗುತ್ತಿಗೆದಾರರ ಕೆಲಸ ಮಾಡುತ್ತಾರೆ, ದುರಸ್ತಿ ಕೆಲಸವನ್ನೂ ಮಾಡುತ್ತಾರೆ. ಪೊಲೀಸರು ತಮಗೆ ವಹಿಸಿರುವ ಕೆಲಸಗಳನ್ನು ಬಿಟ್ಟು ಬೇರೆಲ್ಲಾ ಕೆಲಸಗಳನ್ನು ಮಾಡುತ್ತಾರೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.

ಸಿವಿಲ್ ವಿವಾದಗಳಲ್ಲಿ ಪೊಲೀಸರು ಹಸ್ತಕ್ಷೇಪ ಮಾಡಬಾರದು ಎಂಬುದಾಗಿ ಹೈಕೋರ್ಟ್ ಈ ಹಿಂದೆ ಹಲವು ಆದೇಶಗಳನ್ನು ಹೊರಡಿಸಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ನಗರ ಪೊಲೀಸ್ ಆಯುಕ್ತರಿಗೆ ಪದೇ ಪದೇ ನಿರ್ದೇಶನ ನೀಡಲಾಗಿದ್ದರೂ ಸಿವಿಲ್ ಪ್ರಕರಣಗಳಲ್ಲಿ ಪೊಲೀಸರು ಮಧ್ಯಪ್ರವೇಶಿಸುವುದನ್ನು ನಿಲ್ಲಿಸಿಲ್ಲ ಎಂದು ನ್ಯಾಯಪೀಠ ಅಸಮಾಧಾನ ಹೊರಹಾಕಿತು. ಇಂತಹ ಹಲವು ಪ್ರಕರಣಗಳು ಪ್ರತಿನಿತ್ಯ ಹೈಕೋರ್ಟ್ ಮುಂದೆ ವಿಚಾರಣೆಗೆ ಬರುತ್ತಿರುವುದು ಕಾನೂನುಬಾಹಿರ ಮಧ್ಯಪ್ರವೇಶದ ಗಂಭೀರತೆಯನ್ನು ತೋರಿಸುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿತು.

ಮುಂದುವರಿದು, ಸಿಸಿಬಿ ಪೊಲೀಸರು ಅರ್ಜಿದಾರರಿಗೆ ನೀಡಿರುವ ನೋಟಿಸ್‌ಗೆ ಮುಂದಿನ ವಿಚಾರಣೆಯವರೆಗೆ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಮಾಡಲಾಯಿತು. ಜತೆಗೆ, ಪ್ರತಿವಾದಿಗಳಾದ ರಾಜ್ಯ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಸಿಸಿಬಿ ವಿಶೇಷ ವಿಚಾರಣಾ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು, ಪೊಲೀಸ್ ಇನ್‌ಸ್ಪೆಕ್ಟರ್ ಹಾಗೂ ಪ್ರಕರಣದಲ್ಲಿ ದೂರುದಾರರಾಗಿರುವ ಮೆರ್ಸಸ್ ಟೆಕ್ನೋಕಾನ್ ಕನ್ಸ್ಟ್ರಕ್ಷನ್ಸ್ ಆ್ಯಂಡ್ ಇನ್‌ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ನೋಟಿಸ್ ಜಾರಿಗೊಳಿಸಿ ಅರ್ಜಿ ವಿಚಾರಣೆಯನ್ನು ನ್ಯಾಯಪೀಠ ಮುಂದೂಡಿತು.

2021ರ ನಿರ್ಮಾಣ ಒಪ್ಪಂದ ಮತ್ತು ಸಿಸಿಬಿ ನೋಟಿಸ್ ಹಿನ್ನೆಲೆ

ಇದಕ್ಕೂ ಮುನ್ನ ನಡೆದ ವಿಚಾರಣೆಯ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರು ಪ್ರಕರಣದ ಹಿನ್ನೆಲೆಯನ್ನು ನ್ಯಾಯಾಲಯಕ್ಕೆ ವಿವರಿಸಿದರು. ದೂರುದಾರ ಕಂಪನಿಯಾದ ಮೆರ್ಸಸ್ ಟೆಕ್ನೋಕಾನ್ ಕನ್ಸ್ಟ್ರಕ್ಷನ್ಸ್ ಆ್ಯಂಡ್ ಇನ್‌ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಬಹುಮಹಡಿ ವಸತಿ ಅಪಾರ್ಟ್‌ಮೆಂಟ್ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ 2021ರ ಮಾರ್ಚ್ 1ರಂದು ಅರ್ಜಿದಾರ ಕಂಪನಿಯಾದ ಮೆರ್ಸಸ್ ಎಚ್‌ವಿ ವೆಂಚರ್ಸ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಒಪ್ಪಂದದ ಪತ್ರ ನೀಡಿತ್ತು. ಆ ಒಪ್ಪಂದದ ಪ್ರಕಾರ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಒಪ್ಪಂದದ ನಿಯಮಗಳನ್ವಯ ಅರ್ಜಿದಾರರು ನಿರ್ವಹಿಸಿದ ಕಾಮಗಾರಿಗಳಲ್ಲಿ ಯಾವುದೇ ಲೋಪದೋಷಗಳು ಕಂಡುಬಂದಿಲ್ಲ ಮತ್ತು ಲೋಪದೋಷಗಳ ಆರೋಪ ಸಂಬಂಧ ದೂರುದಾರ ಕಂಪನಿಯೂ ಯಾವುದೇ ಕಾನೂನುಬದ್ಧ ಕ್ರಮ ಕೈಗೊಂಡಿಲ್ಲ ಎಂದು ವಕೀಲರು ವಾದಿಸಿದರು. ಇದರ ಬದಲಿಗೆ, ಕೇವಲ ಸಿವಿಲ್ ಸ್ವರೂಪದ ವ್ಯವಹಾರಿಕ ವಿಷಯವನ್ನು ಇತ್ಯರ್ಥಪಡಿಸಿಕೊಳ್ಳಲು ದೂರುದಾರರು ನಗರ ಪೊಲೀಸ್ ಆಯುಕ್ತರು ಹಾಗೂ ಸಿಸಿಬಿ ಪೊಲೀಸರ ಮೊರೆ ಹೋಗಿದ್ದಾರೆ ಎಂದು ಆರೋಪಿಸಿದರು.

ದೂರುದಾರರ ದೂರನ್ನು ಆಧರಿಸಿ ಸಿಸಿಬಿ ಪೊಲೀಸರು 2026ರ ಅಕ್ಟೋಬರ್ 1ರಂದು ಅರ್ಜಿದಾರರಿಗೆ ನೋಟಿಸ್ ನೀಡಿದ್ದರು. ಅದಕ್ಕೆ ಅರ್ಜಿದಾರರು ಪ್ರತ್ಯುತ್ತರ ಸಲ್ಲಿಸಿ, ತಾವು ಮತ್ತು ದೂರುದಾರರ ನಡುವಿನ ಒಪ್ಪಂದಕ್ಕೆ ಸಂಬಂಧಿಸಿದ ಸಮಗ್ರ ವಿವರಗಳನ್ನು ನೀಡಿದ್ದರು. ಆದರೂ ಸಿಸಿಬಿ ಪೊಲೀಸರು ಮುಂದಿನ ಕ್ರಮ ಜರುಗಿಸಬಹುದು ಎಂಬ ಆತಂಕ ಅರ್ಜಿದಾರರಿಗೆ ಎದುರಾಗಿದ್ದರಿಂದ, ಪೊಲೀಸರ ನೋಟಿಸ್‌ಗೆ ತಡೆಯಾಜ್ಞೆ ನೀಡಬೇಕು ಎಂದು ಹೈಕೋರ್ಟ್ ಮೊರೆ ಹೋಗಿದ್ದರು. ಸದ್ಯ ಮಧ್ಯಂತರ ತಡೆಯಾಜ್ಞೆ ದೊರೆತಿರುವುದರಿಂದ ಅರ್ಜಿದಾರರಿಗೆ ತಾತ್ಕಾಲಿಕ ನೆಮ್ಮದಿ ಸಿಕ್ಕಂತಾಗಿದ್ದು, ಮುಂದಿನ ವಿಚಾರಣೆಯಲ್ಲಿ ಪ್ರತಿವಾದಿಗಳ ಆಕ್ಷೇಪಣೆ ಮತ್ತು ವಿವರಣೆಗಳ ಮೇಲೆ ಗಮನ ನೆಟ್ಟಿದೆ.

#KarnatakaHighCourt #CivilDisputes #PoliceInterference #CCBNotice #BengaluruPolice #JusticeCMpoonacha #LegalNews #BengaluruNews #Udayakala #KarnatakaNews

Related Posts

Leave a Reply

Your email address will not be published. Required fields are marked *