ಉದಯಕಾಲ ನ್ಯೂಸ್, ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷದ ನಾಯಕರ ಹಾಗೂ ತಮ್ಮ ಫೋನ್ಗಳನ್ನು ಕದ್ದಾಲಿಕೆ ಮಾಡುತ್ತಿದ್ದಾರೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆರೋಪವನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಫೋನ್ ಕದ್ದಾಲಿಕೆ ಚಾಳಿ ಹೊಸದೇನಲ್ಲ ಎಂದಿದ್ದು, ಗುಜರಾತ್ ಮುಖ್ಯಮಂತ್ರಿಯಾಗಿದ್ದ ಕಾಲದಿಂದಲೂ ಇದೇ ಚಾಳಿ ಮುಂದುವರೆಸಿದಿದ್ದು, ಕದ್ದಾಲಿಕೆ,ಕೋಮು ಗಲಭೆಗಳೇ ಅವರ ಅಸ್ತ್ರ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಗುಜರಾತ್ನ ‘ಸ್ನೂಪ್ ಗೇಟ್’ ಹಗರಣ ಸ್ಮರಿಸಿದ ಹರಿಪ್ರಸಾದ್
ಮಾತನಾಡುತ್ತಾ ಹೋದ ಬಿ.ಕೆ. ಹರಿಪ್ರಸಾದ್, ಮಹಾಮಾನವ ಎಂದು ಮೋದಿ ಅವರನ್ನು ವ್ಯಂಗ್ಯವಾಡಿ, ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮಹಿಳೆಯರ ಮೇಲೆ ಕಣ್ಣಿಡಲು ಹಾಗೂ ಫೋನ್ ಕದ್ದಾಲಿಕೆ ನಡೆಸಲು ಎಸ್ಟಿಎಫ್ ರಚಿಸಿದ್ದು ಜಗಜ್ಜಾಹೀರಾಗಿದೆ. ಇದು ಅಂದು ‘ಸ್ನೂಪ್ ಗೇಟ್’ ಎಂದೇ ಕುಖ್ಯಾತಿ ಪಡೆದಿತ್ತು ಎಂದು ಆರೋಪಿಸಿದರು. ವಿರೋಧ ಪಕ್ಷದವರನ್ನು ‘ಅರ್ಬನ್ ನಕ್ಸಲ್ಸ್’ ಹಾಗೂ ದೇಶವಿರೋಧಿಗಳು ಎಂದು ಗಂಭೀರ ಆರೋಪ ಮಾಡಿರುವ ಪ್ರಧಾನಿ ಮೋದಿ ಅವರಿಗೆ, ರಾಹುಲ್ ಗಾಂಧಿ ಅವರು ಬಹಿರಂಗ ಚರ್ಚೆಗೆ ಬಹಿರಂಗ ಆಹ್ವಾನ ನೀಡಿದ್ದಾರೆ. ಒಂದು ವೇಳೆ ಮೋದಿ ಅವರಿಗೆ ಧೈರ್ಯವಿದ್ದರೆ ಈ ಚರ್ಚೆಗೆ ಬರಲಿ, ಅಂದೇ ಅವರ ರಾಜಕೀಯ ಜೀವನ ಕೊನೆಗೊಳ್ಳಲಿದೆ ಎಂದು ಸವಾಲು ಹಾಕಿದರು. ಕದ್ದಾಲಿಕೆಗಳ ಮೂಲಕ ಕಾಂಗ್ರೆಸ್ ನಾಯಕರನ್ನು ಬೆದರಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.

ವಿದೇಶಿ ಶಕ್ತಿಗಳ ಕೈಗೊಂಬೆ ಯಾರು ಎಂಬುದು ಬಹಿರಂಗ ಚರ್ಚೆಯಿಂದ ಸಾಬೀತು
ದೇಶದ್ರೋಹಿಗಳು ಯಾರು? ವಿದೇಶಿ ಶಕ್ತಿಗಳ ಕೈಗೊಂಬೆಯಾಗಿ ಆಡುತ್ತಿರುವುದು ಯಾರು? ಎಂಬ ಬಗ್ಗೆ ಸತ್ಯ ಹೊರಬರಬೇಕಾದರೆ ಮುಖಾಮುಖಿ ಬಹಿರಂಗ ಚರ್ಚೆ ನಡೆಯಬೇಕು ಎಂದು ಹರಿಪ್ರಸಾದ್ ಆಗ್ರಹಿಸಿದರು. ಪ್ರಧಾನಿ ಮೋದಿ ಅವರಿಗೆ 56 ಇಂಚಿನ ಎದೆಗಾರಿಕೆ ಇದ್ದರೆ ಈ ಚರ್ಚೆಗೆ ಬರಲಿ ಎಂದ ಅವರು, ತಮ್ಮ ಸ್ವಂತ ಅನುಭವವನ್ನೂ ಹಂಚಿಕೊಂಡರು. ಕರ್ನಾಟಕದಲ್ಲಿ ಹಿಂದೆ ರಾಮಕೃಷ್ಣ ಹೆಗಡೆ ಅವರ ಕಾಲದಲ್ಲೂ ಫೋನ್ ಕದ್ದಾಲಿಕೆ ಆರೋಪ ಕೇಳಿಬಂದಾಗ ನೈತಿಕ ಹೊಣೆ ಹೊತ್ತು ಹೆಗಡೆ ರಾಜೀನಾಮೆ ನೀಡಿದ್ದರು. ಆ ಸಂದರ್ಭದಲ್ಲಿ ತನ್ನ ಫೋನ್ ಕೂಡ ಟ್ಯಾಪ್ ಆಗಿತ್ತು ಎಂದು ಹರಿಪ್ರಸಾದ್ ನೆನಪಿಸಿಕೊಂಡರು. ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ ಇರಬೇಕು, ಆದರೆ ಪ್ರಧಾನಿ ಮೋದಿ ಅವರಿಗೆ ಆ ಧೈರ್ಯವಿಲ್ಲದ ಕಾರಣ ಇಂತಹ ಕದ್ದಾಲಿಕೆಗಳ ಮೊರೆ ಹೋಗುತ್ತಿದ್ದಾರೆ ಎಂದು ತೀವ್ರವಾಗಿ ಟೀಕಿಸಿದರು.
#BKHariprasad #RahulGandhi #PhoneTapping #NarendraModi #KPCC #Udayakala #IndianPolitics #Snoopgate


