Wednesday, November 11, 2026
Menu

ಕಲ್ಯಾಣ ಕರ್ನಾಟಕ ಸಮೃದ್ಧಿಗೆ ‘ಕಲಬುರಗಿ ಬಯೋ-ಇಕಾನಮಿ ಮಿಷನ್ 2026’: ಸಚಿವ ಪ್ರಿಯಾಂಕ್ ಖರ್ಗೆ

ಉದಯಕಾಲ ನ್ಯೂಸ್, ಬೆಂಗಳೂರು/ಕಲಬುರಗಿ: ಸ್ಥಳೀಯ ಜೈವಿಕ ಸಂಪನ್ಮೂಲಗಳನ್ನು ವೈಜ್ಞಾನಿಕವಾಗಿ ಬಳಸಿಕೊಂಡು ಕೃಷಿ ಉತ್ಪಾದನೆ ಹೆಚ್ಚಿಸುವುದು, ರೈತರ ಆದಾಯ ವೃದ್ಧಿಸುವುದು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಉದ್ಯಮ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸದುದ್ದೇಶದಿಂದ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಅಂದಾಜು ರೂ.50 ಕೋಟಿ ವೆಚ್ಚದ ಮೂರು ವರ್ಷಗಳ ‘ಕಲಬುರಗಿ ಬಯೋ-ಇಕಾನಮಿ ಮಿಷನ್ 2026 ರೂಪಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗೃಹ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಬೆಂಗಳೂರು ಬಯೋಇನ್ನೋವೇಷನ್ ಸೆಂಟರ್ (BBC) ವತಿಯಿಂದ ಈ ವಿನೂತನ ಪರಿಕಲ್ಪನೆ ಸಿದ್ಧಪಡಿಸಲಾಗಿದೆ.

ಆರು ಕಾರ್ಯಕ್ಷೇತ್ರಗಳ ಮೂಲಕ ಸಮಗ್ರ ಅಭಿವೃದ್ಧಿ

ಈ ಮಿಷನ್ ಒಟ್ಟು ಆರು ಪ್ರಮುಖ ಕಾರ್ಯಕ್ಷೇತ್ರಗಳನ್ನು ಹೊಂದಿದ್ದು, ಕಲ್ಯಾಣ ಕರ್ನಾಟಕದ ಕೃಷಿ ರಂಗಕ್ಕೆ ಹೊಸ ಜೀವ ತುಂಬುವ ಗುರಿ ಹೊಂದಿದೆ.

ತೊಗರಿ ಬೆಳೆಯಲ್ಲಿ ಬಾಡುವಿಕೆ ರೋಗ ಹಾಗೂ ಮೆಣಸಿನಕಾಯಿ ಬೆಳೆಯ ಆಂಥ್ರಾಕ್ನೋಸ್ ರೋಗ ಮತ್ತು ಥ್ರಿಪ್ಸ್ ಕೀಟಗಳ ನಿಯಂತ್ರಣಕ್ಕೆ ಜೈವಿಕ ಆಧಾರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸಿ ರಾಸಾಯನಿಕಗಳ ಅವಲಂಬನೆ ತಗ್ಗಿಸುವುದು.
ತೊಗರಿಯನ್ನು ಕೇವಲ ಕಚ್ಚಾ ಉತ್ಪನ್ನವಾಗಿ ಮಾರಾಟ ಮಾಡದೆ, ಪ್ರೋಟೀನ್ ಬಾರ್‌ಗಳು, ಪೌಷ್ಟಿಕ ಪಾನೀಯಗಳು ಹಾಗೂ ಸಿದ್ಧ ಆಹಾರ ಉತ್ಪನ್ನಗಳಾಗಿ ಪರಿವರ್ತಿಸಿ ಆಹಾರ ಸಂಸ್ಕರಣಾ ಉದ್ಯಮಗಳಿಗೆ ಉತ್ತೇಜನ ನೀಡುವುದು.

ಕಮಲಾಪುರ ಕೆಂಪು ಬಾಳೆ ಸಂರಕ್ಷಣೆ

ವಿಶಿಷ್ಟ ಕೃಷಿ ಪರಂಪರೆಯ ಈ ತಳಿಯನ್ನು ಅಂಗಾಂಶ ಕೃಷಿ ಮೂಲಕ ತಿಂಗಳಿಗೆ 2 ರಿಂದ 3 ಲಕ್ಷ ಗುಣಮಟ್ಟದ ಸಸಿಗಳನ್ನು ಉತ್ಪಾದಿಸುವ ಸಾಮರ್ಥ್ಯ ಬೆಳೆಸುವುದು.
ಸ್ಥಳೀಯ ಸೂಕ್ಷ್ಮಜೀವಿಗಳ ಸಂಶೋಧನೆಗಾಗಿ ಬಯೋಬ್ಯಾಂಕ್ ಸ್ಥಾಪನೆ ಹಾಗೂ ಕಲಬುರಗಿಯಲ್ಲಿ ಸಂಶೋಧನೆ, ಜೈವಿಕ ಉತ್ಪಾದನೆ ಮತ್ತು ನವೋದ್ಯಮಗಳಿಗೆ ನೆರವಾಗಲು ಸಮಗ್ರ ಜೈವಿಕ ಆರ್ಥಿಕ ಕೈಗಾರಿಕಾ ಪಾರ್ಕ್ ನಿರ್ಮಾಣ.
ರೈತ ಉತ್ಪಾದಕ ಸಂಸ್ಥೆಗಳು ಹಾಗೂ ಯುವ ಉದ್ಯಮಿಗಳಿಗೆ ತರಬೇತಿ ಮತ್ತು ಮಾರುಕಟ್ಟೆ ಸಂಪರ್ಕ ಕಲ್ಪಿಸುವುದು.

ಕಲ್ಯಾಣ ಕರ್ನಾಟಕಕ್ಕೆ ಹೊಸ ಆರ್ಥಿಕ ಆಯಾಮ

ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳನ್ನು ಒಳಗೊಳ್ಳಲಿರುವ ಈ ಯೋಜನೆಯು ಕಲ್ಯಾಣ ಕರ್ನಾಟಕವನ್ನು ಜೈವಿಕ ಆರ್ಥಿಕತೆಯ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ದೂರದೃಷ್ಟಿ ಹೊಂದಿದೆ. ಮೂರು ವರ್ಷಗಳಲ್ಲಿ 40ಕ್ಕೂ ಹೆಚ್ಚು ಸ್ಥಳೀಯ ಜೈವಿಕ ಉತ್ಪನ್ನಗಳ ಸಂಭಾವ್ಯತೆ ಗುರುತಿಸುವುದು, 7,000ಕ್ಕೂ ಅಧಿಕ ಮಣ್ಣಿನ ಮಾದರಿಗಳ ಅಧ್ಯಯನ ಹಾಗೂ ರೈತರು ಮತ್ತು ಮಹಿಳೆಯರಿಗೆ ಸ್ವಾವಲಂಬನೆಯ ಅವಕಾಶ ಕಲ್ಪಿಸುವುದು ಈ ಮಿಷನ್‌ನ ಪ್ರಮುಖ ಗುರಿಯಾಗಿದೆ. ‘ಸ್ಥಳೀಯ ಜೈವಿಕ ವೈವಿಧ್ಯದಿಂದ ರೈತರ ಸಮೃದ್ಧಿಯವರೆಗೆ’ಎಂಬ ಆಶಯದ ಈ ಪ್ರಸ್ತಾವನೆಯು ಸದ್ಯ ಸರ್ಕಾರದ ಅನುಮೋದನೆಗೆ ಒಳಪಟ್ಟಿದ್ದು, ಪ್ರದೇಶದ ಆರ್ಥಿಕತೆಗೆ ಮಹತ್ವದ ತಿರುವು ನೀಡಲಿದೆ.
#PriyankKharge #KalaburagiBioEconomyMission #KalyanaKarnataka #AgriTech #Biotechnology #FarmersProsperity #KarnatakaNews #UdayakalaNews

Related Posts

Leave a Reply

Your email address will not be published. Required fields are marked *