Wednesday, November 11, 2026
Menu

ನ್ಯಾಕ್ ಕಚೇರಿಯಲ್ಲಿ ರಾಜ್ಯೋತ್ಸವ ಸ್ಥಗಿತ ಹಾಗೂ ಕನ್ನಡಿಗರ ವಜಾ: ಕರವೇ ಪ್ರತಿಭಟನೆಗೆ ನಿರ್ದೇಶಕರ ಕ್ಷಮೆ

ಉದಯಕಾಲ ನ್ಯೂಸ್, ಬೆಂಗಳೂರು: ಪ್ರತಿಷ್ಠಿತ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯಲ್ಲಿ (NAAC) ಕನ್ನಡಿಗರಿಗೆ ಮತ್ತು ಸ್ಥಳೀಯ ಭಾಷೆಗೆ ಅಪಮಾನ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕಳೆದ ಎರಡು ವರ್ಷಗಳಿಂದ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಸ್ಥಗಿತಗೊಳಿಸಿರುವುದು ಹಾಗೂ ಸ್ಥಳೀಯ ಗುತ್ತಿಗೆ ಆಧಾರಿತ 15ಕ್ಕೂ ಹೆಚ್ಚು ಕನ್ನಡಿಗರನ್ನು ಏಕಾಏಕಿ ಕೆಲಸದಿಂದ ವಜಾಗೊಳಿಸಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ವತಿಯಿಂದ ಸೋಮವಾರ ನಾಗರಭಾವಿಯಲ್ಲಿರುವ ನ್ಯಾಕ್ ಕಚೇರಿ ಮುಂದೆ ಭಾರಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯ ತೀವ್ರತೆ ಹೆಚ್ಚುತ್ತಿದ್ದಂತೆ ಎಚ್ಚೆತ್ತ ಸಂಸ್ಥೆಯ ನಿರ್ದೇಶಕರು ಕರವೇ ಮುಖಂಡರಲ್ಲಿ ಕ್ಷಮೆಯಾಚಿಸಿದರು.

ಕನ್ನಡಿಗ ಸಿಬ್ಬಂದಿಗೆ ಕಿರುಕುಳ ಹಾಗೂ ಏಕಾಏಕಿ ವಜಾ

ಕೇಂದ್ರ ನ್ಯಾಕ್ ಕಚೇರಿಯಲ್ಲಿ ಕಳೆದ ಎರಡು ದಶಕಗಳಿಂದಲೂ ನಿರಂತರವಾಗಿ ಕನ್ನಡ ರಾಜ್ಯೋತ್ಸವ ಆಚರಿಸಿಕೊಂಡು ಬರಲಾಗುತ್ತಿತ್ತು. ಆದರೆ, ಪ್ರೊ. ಗಣೇಶನ್ ಕನ್ನಬೀರನ್ ಅವರು ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಈ ಸಾಂಸ್ಕೃತಿಕ ಪರಂಪರೆಯನ್ನು ಹಠಾತ್ತನೆ ನಿಲ್ಲಿಸಲಾಗಿದೆ ಎಂದು ನೌಕರರು ಆರೋಪಿಸಿದ್ದರು. ಇದರೊಂದಿಗೆ ಕನ್ನಡ ರಾಜ್ಯೋತ್ಸವ ಆಚರಣೆ ನಿಲ್ಲಿಸುವ ನಿರ್ಧಾರವನ್ನು ಪ್ರಶ್ನಿಸಿದ್ದಕ್ಕೆ, ಸ್ಥಳೀಯ ಗುತ್ತಿಗೆ ನೌಕರರಾದ 15ಕ್ಕೂ ಅಧಿಕ ಮಂದಿಯನ್ನು ವಿವಿಧ ಕಾರಣಗಳನ್ನು ನೀಡಿ ರಾತ್ರೋರಾತ್ರಿ ಕೆಲಸದಿಂದ ವಜಾಗೊಳಿಸಲಾಗಿದೆ ಎಂಬ ಗಂಭೀರ ದೂರು ಕೇಳಿಬಂದಿತ್ತು.

ಕಚೇರಿಯಲ್ಲಿ ಕನ್ನಡ ಮಾತನಾಡುವ ಅಧಿಕಾರಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಹಾಗೂ ಸ್ಥಳೀಯ ಭದ್ರತಾ ಸಂಸ್ಥೆಯನ್ನು ತೆಗೆದುಹಾಕಿ ಹೊರರಾಜ್ಯದ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ ಎಂಬ ವಿಚಾರವು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಕುರಿತು ನೌಕರರೊಬ್ಬರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕನ್ನಡಪರ ಸಂಘಟನೆಗಳ ಗಮನಕ್ಕೆ ತಂದಿದ್ದರು. ಕೂಡಲೆ ವಿಷಯ ಅರಿತ ಶಿವರಾಮೇಗೌಡ ಕರವೇ ಬಣ ನ್ಯಾಕ್ ಕಚೇರಿಗೆ ನುಗ್ಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತು. ರಾಜ್ಯ ಸರ್ಕಾರದ ಜಾಗದಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ಈ ಸ್ವಾಯತ್ತ ಸಂಸ್ಥೆಯು ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಗೆ ಅಗೌರವ ತೋರುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿತು.

ಇದೇ 15ರಂದು ರಾಜ್ಯೋತ್ಸವ ಆಚರಣೆಗೆ ಒಪ್ಪಿಗೆ: ವಜಾ ನೌಕರರ ಮರುನೇಮಕಕ್ಕೆ ಗಡುವು

ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ, ಹೊರರಾಜ್ಯದಲ್ಲಿದ್ದ ನ್ಯಾಕ್ ನಿರ್ದೇಶಕ ಪ್ರೊ. ಗಣೇಶನ್ ಕನ್ನಬೀರನ್ ಅವರು ಕರವೇ ಮುಖಂಡರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿ, ನಡೆದ ಘಟನೆಗೆ ಕ್ಷಮೆಯಾಚಿಸಿದ್ದಾರೆ. ಅಲ್ಲದೆ, ಮುಂಬರುವ ನವೆಂಬರ್ 15ರಂದು ಮಂಡಳಿಯ ಆವರಣದಲ್ಲಿ ವಿಜೃಂಭಣೆಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು ಹಾಗೂ ತಾವೇ ಖುದ್ದಾಗಿ ಭಾಗವಹಿಸುವುದಾಗಿ ಭರವಸೆ ನೀಡಿದ್ದಾರೆ.

ಆದರೆ ಪ್ರತಿಭಟನಾಕಾರರು ಕೇವಲ ಉತ್ಸವ ಆಚರಣೆಗೆ ಒಪ್ಪದೆ, ಅನ್ಯಾಯವಾಗಿ ಕೆಲಸದಿಂದ ಕಿತ್ತು ಹಾಕಿರುವ ಎಲ್ಲಾ ಸ್ಥಳೀಯ ಕನ್ನಡಿಗ ಗುತ್ತಿಗೆ ನೌಕರರನ್ನು ತಕ್ಷಣವೇ ಮರುನೇಮಕ ಮಾಡಿಕೊಳ್ಳಬೇಕು ಎಂದು ಆಡಳಿತ ಮಂಡಳಿಗೆ ಕಟ್ಟುನಿಟ್ಟಿನ ಗಡುವು ವಿಧಿಸಿದ್ದಾರೆ. ನ್ಯಾಯ ಸಿಗದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಕರವೇ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

#NAAC #KannadaRajyotsava #Karave #BangaloreNews #Udayakala #LocalEmployment #KannadigarigeNyaya #KarnatakaNews

Related Posts

Leave a Reply

Your email address will not be published. Required fields are marked *