ಉದಯಕಾಲ ನ್ಯೂಸ್, ನವದೆಹಲಿ: ಭಾರತದಲ್ಲಿ ವಾಯುಮಾಲಿನ್ಯದ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ತಾಳುತ್ತಿದ್ದು, ಜಾಗತಿಕ ಮಟ್ಟದಲ್ಲಿ ದೇಶದ ಪರಿಸ್ಥಿತಿಯನ್ನು ವಿಷಮ ಸ್ಥಿತಿಗೆ ಕೊಂಡೊಯ್ದಿದೆ. ವಿಶ್ವದ ಅತ್ಯಂತ ಮಾಲಿನ್ಯಯುಕ್ತ 50 ನಗರಗಳ ಆಘಾತಕಾರಿ ಪಟ್ಟಿಯೊಂದು ಹೊರಬಂದಿದ್ದು, ಅಚ್ಚರಿ ಹಾಗೂ ಆಘಾತಕಾರಿ ವಿಷಯವೆಂದರೆ ಭಾರತದಲ್ಲೇ ಬರೋಬ್ಬರಿ 49 ನಗರಗಳು ಅತಿ ಹೆಚ್ಚು ಮಾಲಿನ್ಯಯುಕ್ತವಾಗಿವೆ. ರಾಜಸ್ಥಾನದ ಶ್ರೀಗಂಗಾನಗರವು ವಿಶ್ವದಲ್ಲೇ ನಂ.1 ಅತ್ಯಂತ ಕಲುಷಿತ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.
ಶ್ರೀಗಂಗಾನಗರಕ್ಕೆ ವಿಶ್ವದಲ್ಲೇ ಮೊದಲ ಸ್ಥಾನ
ಅಂತಾರಾಷ್ಟ್ರೀಯ ವರದಿಗಳ ಪ್ರಕಾರ, ರಾಜಸ್ಥಾನದ ಪ್ರಮುಖ ನಗರವಾದ ಶ್ರೀಗಂಗಾನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ದಾಖಲೆಯ ಮಟ್ಟದಲ್ಲಿ ಬರೋಬ್ಬರಿ 821ಕ್ಕೆ ಏರಿಕೆಯಾಗುವ ಮೂಲಕ ವಿಶ್ವದಲ್ಲೇ ಅತ್ಯಂತ ಹೆಚ್ಚು ಮಾಲಿನ್ಯಯುಕ್ತ ನಗರವಾಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ಪಂಜಾಬ್ನ ಬಟಿಂಡಾ ನಗರವು 629 ಎಕ್ಯೂಐ ಹೊಂದ ಮೂಲಕ ಎರಡನೇ ಸ್ಥಾನದಲ್ಲಿದ್ದರೆ, ಹರಿಯಾಣದ ಸಿರ್ಸಾ ನಗರವು 544 ಎಕ್ಯೂಐನೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿದೆ.
ಅಲ್ಲದೆ, ಹರಿಯಾಣದ ಹಿಸಾರ್ನಲ್ಲಿ ಎಕ್ಯೂಐ 516 ಹಾಗೂ ಪಂಜಾಬ್ನ ಫರೀದ್ಕೋಟ್ನಲ್ಲಿ ಎಕ್ಯೂಐ 506ರಷ್ಟು ದಾಖಲಾಗಿದೆ. ಈ ಪಟ್ಟಿಯಲ್ಲಿ ಜಾಗತಿಕವಾಗಿ ಅತಿ ಹೆಚ್ಚು ಚರ್ಚೆಗೆ ಒಳಗಾಗುವ ರಾಜಧಾನಿ ನವದೆಹಲಿ 24ನೇ ಸ್ಥಾನದಲ್ಲಿದ್ದು, ಅಲ್ಲಿ ಎಕ್ಯೂಐ 393ರಷ್ಟು ಗಂಭೀರ ಮಟ್ಟದಲ್ಲಿದೆ. ನವೆಂಬರ್ 9ರಂದಂತೂ ದೆಹಲಿಯಲ್ಲಿ ಎಕ್ಯೂಐ ಬರೋಬ್ಬರಿ 663ಕ್ಕೆ ಜಿಗಿದಿತ್ತು. ವಿಶೇಷವೆಂದರೆ, ಈ ಟಾಪ್ 50ರ ಪಟ್ಟಿಯಲ್ಲಿ ಭಾರತದ ಹೊರಗಿನಿಂದ ಸ್ಥಾನ ಪಡೆದಿರುವ ಏಕೈಕ ನಗರವೆಂದರೆ ಪಾಕಿಸ್ತಾನದ ಲಾಹೋರ್ (14ನೇ ಸ್ಥಾನ, ಎಕ್ಯೂಐ 430).
ಮಾಲಿನ್ಯ ಹೆಚ್ಚಲು ಕಾರಣ: ಕೃಷಿ ತ್ಯಾಜ್ಯ ಹಾಗೂ ಪಟಾಕಿಗಳ ಪ್ರಭಾವ
ಉತ್ತರ ಭಾರತದ ಪ್ರಮುಖ ರಾಜ್ಯಗಳಾದ ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಹಲವು ನಗರಗಳಲ್ಲಿ ವಾಯುಮಾಲಿನ್ಯ ತೀವ್ರಗೊಳ್ಳಲು ಪ್ರಮುಖ ಕಾರಣಗಳು ಸ್ಪಷ್ಟವಾಗಿವೆ. ಚಳಿಗಾಲದ ಆರಂಭದ ಈ ದಿನಗಳಲ್ಲಿ ಕೃಷಿ ತ್ಯಾಜ್ಯವನ್ನು ಅಧಿಕ ಪ್ರಮಾಣದಲ್ಲಿ ಸುಡುವುದು ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಿಡಿಸಿದ ವಿಷಯುಕ್ತ ಪಟಾಕಿಗಳ ಹೊಗೆ ವಾತಾವರಣದಲ್ಲಿ ದಟ್ಟವಾಗಿ ಆವರಿಸಿದೆ.
ವಿಶೇಷವಾಗಿ ವಾಯುಭಾರ ಕುಸಿತ ಮತ್ತು ಕಡಿಮೆ ಗಾಳಿಯ ವೇಗದಿಂದಾಗಿ ವಿಷಕಾರಿ ಹೊಗೆಯು ನೆಲದ ಮಟ್ಟದಲ್ಲೇ ಉಳಿದುಕೊಂಡಿದೆ. ಇದು ಜನರ ಉಸಿರಾಟದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿದ್ದು, ಅಸ್ತಮಾ, ಕಣ್ಣಿನ ಉರಿ ಹಾಗೂ ಶ್ವಾಸಕೋಶದ ಕಾಯಿಲೆಗಳಿಂದ ಬಳಲುವವರ ಸಂಖ್ಯೆ ಹೆಚ್ಚುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಜನಸಾಮಾನ್ಯರ ಆರೋಗ್ಯದ ಮೇಲೆ ತೀವ್ರ ಸ್ವರೂಪದ ದುಷ್ಪರಿಣಾಮ ಬೀರಲಿದೆ ಎಂದು ತಜ್ಞರು ಎಚ್ಚರಿಸಿದ್ದು, ತುರ್ತು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
#AirPollution #ShrigangaNagar #DelhiPollution #AQI #Udayakala #IndiaNews #EnvironmentCrisis #PunjabHaryanaPollution


