Wednesday, November 11, 2026
Menu

ಹಳೇ ವೈಷಮ್ಯದಲ್ಲಿ ರಾಷ್ಟ್ರಪತಿ ಅಂಗರಕ್ಷಕನ ತಲೆಗೆ ಗುಂಡೇಟು, ಸ್ಥಿತಿ ಗಂಭೀರ!

ಉದಯಕಾಲ ನ್ಯೂಸ್, ಲಕ್ನೋ: ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯಲ್ಲಿ ಅತ್ಯಂತ ಕೃತ್ಯವೊಂದು ವರದಿಯಾಗಿದೆ. ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನದಲ್ಲಿ ಅಂಗರಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧನೊಬ್ಬನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಪಟಾಕಿ ಸಿಡಿಸುವ ವಿಚಾರದಲ್ಲಿ ನಡೆದ ಕ್ಷುಲ್ಲಕ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಯೋಧನ ತಲೆಗೆ ಗುಂಡು ಹಾರಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ.

ದೀಪಾವಳಿಗೆ ಬಂದ ಯೋಧನ ಮೇಲೆ ಮಾರಣಾಂತಿಕ ಹಲ್ಲೆ

ರಾಮಲಾ ಪೊಲೀಸ್ ಠಾಣೆ ವ್ಯಾಪ್ತಿಯ ಗೋಪಾಲ್‌ಪುರ ಖದಾನ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡ ಯೋಧನನ್ನು 26 ವರ್ಷದ ಸೌರಭ್ ತೋಮರ್ ಎಂದು ಗುರುತಿಸಲಾಗಿದೆ. ಸೌರಭ್ ತೋಮರ್ ಅವರು 2021ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದರು. ಸದ್ಯ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ದೇಶದ ಅತ್ಯಂತ ಪ್ರತಿಷ್ಠಿತ ಹಾಗೂ ಹಿರಿಯ ಅಶ್ವದಳವಾದ ‘ರಾಷ್ಟ್ರಪತಿ ಅಂಗರಕ್ಷಕ ದಳ’ದಲ್ಲಿ (PBG) ಸೇವೆ ಸಲ್ಲಿಸುತ್ತಿದ್ದರು. ದೀಪಾವಳಿ ಹಬ್ಬದ ನಿಮಿತ್ತ ರಜೆ ಪಡೆದು ತಮ್ಮ ಸ್ವಗ್ರಾಮಕ್ಕೆ ಬಂದಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ನವೆಂಬರ್ 8ರ ರಾತ್ರಿ 9 ಗಂಟೆ ಸುಮಾರಿಗೆ ಸೌರಭ್ ಹಾಗೂ ಅವರ ಸಹೋದರರು ಮನೆಯ ಹೊರಭಾಗದಲ್ಲಿ ಪಟಾಕಿ ಸಿಡಿಸುತ್ತಾ ಸಂಭ್ರಮಿಸುತ್ತಿದ್ದರು. ಈ ವೇಳೆ ಹಳೇ ವೈಷಮ್ಯ ಹೊಂದಿದ್ದ ಅದೇ ಗ್ರಾಮದ ಧೀರಜ್ ಹಾಗೂ ಮೋನು ಎಂಬುವವರು ಏಕಾಏಕಿ ಬಂದಿದ್ದಾರೆ. ಬಂದವರೇ ಗನ್ ಹಾಗೂ ದೊಣ್ಣೆಗಳನ್ನು ಹಿಡಿದು ಜಗಳ ತೆಗೆದಿದ್ದಾರೆ. ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋದಾಗ, ಆರೋಪಿ ಧೀರಜ್ ತನ್ನ ಬಳಿಯಿದ್ದ ದೇಶಿ ಪಿಸ್ತೂಲಿನಿಂದ ಸೌರಭ್ ಮೇಲೆ ಗುಂಡು ಹಾರಿಸಿದ್ದಾನೆ. ಹಾರಿಸಿದ ಗುಂಡು ಮೊದಲು ಗೋಡೆಗೆ ತಗುಲಿ, ನಂತರ ಸೌರಭ್ ಅವರ ಕಿವಿಯ ಹಿಂಭಾಗದ ಮೂಲಕ ತಲೆಯೊಳಗೆ ಹೊಕ್ಕಿದೆ. ಇದರೊಂದಿಗೆ ಸೌರಭ್ ಅವರ ಅಣ್ಣ ವಿನೀತ್ ಮೇಲೂ ಆರೋಪಿಗಳು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ.

ಆರೋಪಿಗಳ ಪತ್ತೆಗೆ 3 ವಿಶೇಷ ತಂಡಗಳ ರಚನೆ

ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡು ರಕ್ತಸಿಕ್ತರಾಗಿ ಬಿದ್ದ ಸೌರಭ್ ಅವರನ್ನು ಕೂಡಲೇ ಸ್ಥಳೀಯರು ಮೀರತ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಸೌರಭ್ ಅವರ ತಲೆಯಲ್ಲಿದ್ದ ಗುಂಡನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಆದಾಗ್ಯೂ, ಅವರ ತಲೆಗೆ ಗಂಭೀರ ಪೆಟ್ಟಾಗಿರುವುದರಿಂದ ಸದ್ಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಸಾವುಬದುಕಿನ ನಡುವೆ ಹೋರಾಡುತ್ತಿದ್ದಾರೆ. ಹಲ್ಲೆಗೊಳಗಾಗಿರುವ ಅವರ ಸಹೋದರ ವಿನೀತ್ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ನಡೆದ ತಕ್ಷಣವೇ ಆರೋಪಿಗಳು ಸ್ಥಳದಿಂದ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ. ಗಾಯಾಳು ತಂದೆ ಜನಕರಾಜ್ ನೀಡಿದ ದೂರಿನ ಮೇರೆಗೆ ಬಾಗ್‌ಪತ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಗಳ ಪತ್ತೆಗಾಗಿ ಪೊಲೀಸರು ಒಟ್ಟು 3 ವಿಶೇಷ ತಂಡಗಳನ್ನು ರಚಿಸಿದ್ದು, ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ. ದೇಶ ರಕ್ಷಿಸುವ ಯೋಧನ ಮೇಲೆಯೇ ಹಲ್ಲೆ ನಡೆದಿರುವುದು ಸ್ಥಳೀಯವಾಗಿ ತೀವ್ರ ಆಕ್ರೋಶ ಹಾಗೂ ಆತಂಕಕ್ಕೆ ಕಾರಣವಾಗಿದೆ.
#UPCrime #PresidentBodyguard #BaghpatNews #SaurabhTomar #Udayakala #UttarPradesh #BreakingNews #IndianArmy

Related Posts

Leave a Reply

Your email address will not be published. Required fields are marked *