Thursday, November 05, 2026
Menu

ರೈತ ಮುಖಂಡರ ಬಂಧನ ಖಂಡಿಸಿ ಬೀದಿಗಿಳಿದ ವಕೀಲರು: ಸರ್ಕಾರದ ವಿರುದ್ಧ ಆಕ್ರೋಶ

ಉದಯಕಾಲ ನ್ಯೂಸ್, ಬೆಳಗಾವಿ: ಕಬ್ಬಿಗೆ ಸೂಕ್ತ ಬೆಲೆ ಹಾಗೂ ಪ್ರೋತ್ಸಾಹಧನ ನೀಡುವಂತೆ ಆಗ್ರಹಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿರುವುದನ್ನು ಖಂಡಿಸಿ, ಬೆಳಗಾವಿಯಲ್ಲಿ ವಕೀಲರು ಮತ್ತು ರೈತರು ಒಗ್ಗೂಡಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.ಸರ್ಕಾರದ ದಬ್ಬಾಳಿಕೆಯ ಧೋರಣೆ ಹಾಗೂ ಪೊಲೀಸರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನ್ಯಾಯವಾದಿಗಳು ರಸ್ತೆ ತಡೆ ನಡೆಸಿ, ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯ ಮೂಲಕ ತೆರಳಿ ತಮ್ಮ ಆಕ್ರೋಶ ಹೊರಹಾಕಿದರು.

ಬೆಳಗಾವಿಯ ಪ್ರಮುಖ ರಾಣಿ ಚೆನ್ನಮ್ಮ ವೃತ್ತಕ್ಕೆ ಏಕಾಏಕಿ ನುಗ್ಗಿದ ವಕೀಲರು ಮತ್ತು ರೈತ ಮುಖಂಡರು ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ತೀವ್ರವಾಗಿ ಧಿಕ್ಕಾರ ಕೂಗಿದರು. ಕಳೆದ ಒಂದು ತಿಂಗಳಿನಿಂದ ರೈತರು ಅತ್ಯಂತ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದರೂ, ರಾತ್ರೋರಾತ್ರಿ ನಿಷೇಧಾಜ್ಞೆ (144 ಸೆಕ್ಷನ್) ಜಾರಿಗೊಳಿಸಿ ರಾಜ್ಯ ರೈತ ಸಂಘದ ಮುಖಂಡರನ್ನು ಅನ್ಯಾಯವಾಗಿ ಬಂಧಿಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ವಕೀಲರ ಸಂಘದ ಬೆಂಬಲ ಹಾಗೂ ಮುಖಂಡರ ಎಚ್ಚರಿಕೆ

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ರೈತ ಮುಖಂಡ ಸುರೇಶ ಸಂಪಗಾವ್, “ರೈತರು ಮಾಡಿದ ತಪ್ಪಾದರೂ ಏನು? ಶಾಂತಿಯುತವಾಗಿ ಪ್ರತಿಭಟಿಸುತ್ತಿರುವ ನಮ್ಮ ಧಮನ ಮಾಡಲು ಸರ್ಕಾರ ಯತ್ನಿಸುತ್ತಿದೆ. ಕೂಡಲೇ ಬಂಧಿತ ರೈತ ಮುಖಂಡರನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ನಾವು ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ” ಎಂದು ಎಚ್ಚರಿಸಿದರು.

ಇದೇ ವೇಳೆ ನ್ಯಾಯವಾದಿ ಪ್ರವೀಣ ಬಾಬಣ್ಣವರ ಮಾತನಾಡಿ, ಪ್ರತಿ ಟನ್ ಕಬ್ಬಿಗೆ 5,500 ರೂ.ಗಳ ಬೇಡಿಕೆ ಇಡಲಾಗಿತ್ತು. ಆದರೆ ಸರ್ಕಾರ ಕೇವಲ 3,600 ರೂ. ಘೋಷಿಸಿ ಕೈತೊಳೆದುಕೊಂಡಿದೆ. ರಾಜ್ಯ ಸರ್ಕಾರದಿಂದ ಎಷ್ಟು ಪ್ರೋತ್ಸಾಹಧನ ನೀಡುತ್ತೀರಿ ಎಂದು ಪ್ರಶ್ನಿಸಿದ್ದಕ್ಕೆ ರೈತರನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಸಿಎಂ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಬಂಧನವನ್ನು ಖಂಡಿಸಿ ನಾವು ನ್ಯಾಯವಾದಿಗಳು ರೈತ ಹೋರಾಟಗಾರರ ಬೆನ್ನಿಗೆ ಸಂಪೂರ್ಣವಾಗಿ ನಿಂತಿದ್ದೇವೆ ಎಂದು ತಿಳಿಸಿದರು.

ಪೊಲೀಸ್ ಎಚ್ಚರಿಕೆ ಧಿಕ್ಕರಿಸಿ ರೈತಪರ ನಿಂತ ವಕೀಲರು

ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಮುಕ್ತಿಮಠದಲ್ಲಿ ಪೊಲೀಸ್ ಕಮಿಷನರ್ ರೈತ ಮುಖಂಡರೊಂದಿಗೆ ಸಭೆ ನಡೆಸಿ ಹೋರಾಟ ಕೈಬಿಡುವಂತೆ ಎಚ್ಚರಿಕೆ ನೀಡಿದ್ದರು. ಆದರೆ, ನಮಗೆ ಗುಂಡು ಬೇಕಾದರೂ ಹಾಕಿ, ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಚೂನಪ್ಪ ಪೂಜಾರಿ ಸೇರಿದಂತೆ ಮುಖಂಡರು ತಿರುಗೇಟು ನೀಡಿದ್ದರು. ಇದೀಗ ಮುಖಂಡರನ್ನು ವಶಕ್ಕೆ ಪಡೆದಿರುವುದನ್ನು ಖಂಡಿಸಿ ವಕೀಲರು ರಸ್ತೆಗಿಳಿದಿರುವುದು ಬೆಳಗಾವಿಯಲ್ಲಿ ತೀವ್ರ ರಾಜಕೀಯ ಹಾಗೂ ಸಾಮಾಜಿಕ ಸಂಚಲನ ಮೂಡಿಸಿದೆ. ಸರ್ಕಾರದ ಈ ಧೋರಣೆಯ ವಿರುದ್ಧ ಕಾನೂನು ಸಮರ ಸಾರುವುದಾಗಿಯೂ ವಕೀಲರು ಎಚ್ಚರಿಕೆ ನೀಡಿದ್ದಾರೆ.
#BelagaviProtest #LawyersProtest #ChunappaPujari #SugarcaneFarmers #KarnatakaPolice #UdayakalaNews

Related Posts

Leave a Reply

Your email address will not be published. Required fields are marked *