ಉದಯಕಾಲ ನ್ಯೂಸ್,ವಿಜಯನಗರ: ಕುರಿಗಾಯಿ ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ವಿರುದ್ಧ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸ್ಥಳದಲ್ಲೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯ ವಿನಾಯಕ ಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಕುರಿಗಾಯಿ ಮಹಿಳೆಯರ ಅಹವಾಲುಗಳನ್ನು ಅವರು ಆಲಿಸಿದರು.
ಕಾರ್ಯಕ್ರಮದ ಸ್ಥಳದಲ್ಲಿದ್ದ ಅವ್ಯವಸ್ಥೆ ಹಾಗೂ ಪ್ರಮುಖವಾಗಿ ಸಭೆಗೆ ಗೈರುಹಾಜರಾಗಿದ್ದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಜಿ.ಕೆ. ಮಲ್ಲೇಶ್ ಮತ್ತು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳ ಗೈರುಹಾಜರಿಯನ್ನು ಗಂಭೀರವಾಗಿ ಪರಿಗಣಿಸಿದ ಅಧ್ಯಕ್ಷರು, ಇಲಾಖೆಯ ಕಾರ್ಯವೈಖರಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಕುರಿಗಾಯಿಗಳಿಂದ ಹರಿದುಬಂದ ಸಮಸ್ಯೆಗಳ ಸರಮಾಲೆ
ಸಂವಾದದ ವೇಳೆ ವಿಜಯನಗರ ಜಿಲ್ಲೆ ಸೇರಿದಂತೆ ವಿವಿಧ ತಾಲೂಕುಗಳು ಹಾಗೂ ಇತರೆ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಕುರಿಗಾಯಿ ಮಹಿಳೆಯರು ತಮ್ಮ ಕಷ್ಟ-ನಷ್ಟಗಳನ್ನು ತೋಡಿಕೊಂಡರು. ಕುರಿಗಾಯಿಗಳಿಗೆ ಸರ್ಕಾರದ ವತಿಯಿಂದ ಇದುವರೆಗೆ ಸರಿಯಾಗಿ ಗುರುತಿನ ಚೀಟಿ (ID Card) ನೀಡದಿರುವುದು, ಕುರಿಗಳಿಗೆ ಕಾಲುಬಾಯಿ ರೋಗ ಅಥವಾ ಅನಾರೋಗ್ಯ ಉಂಟಾದಾಗ ಪಶುವೈದ್ಯರು ತುರ್ತಾಗಿ ಸ್ಥಳಕ್ಕೆ ಭೇಟಿ ನೀಡಿ ಚಿಕಿತ್ಸೆ ನೀಡದಿರುವ ಬಗ್ಗೆ ತೀವ್ರ ಅಳಲು ತೋಡಿಕೊಂಡರು. ಅಲೆಮಾರಿ ಹಾಗೂ ಅರ್ಧ-ಅಲೆಮಾರಿ ಜೀವನ ನಡೆಸುವ ಕುರಿಗಾಯಿಗಳಿಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ತಲುಪುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಮಹಿಳೆಯರ ಅಹವಾಲುಗಳನ್ನು ಆಲಿಸಿದ ಡಾ. ನಾಗಲಕ್ಷ್ಮಿ ಚೌಧರಿ ಅವರು ಕೆಲವೊಂದು ಪ್ರಮುಖ ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದಿಸಿದರು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕೊಪ್ಪಳ ಜಿಲ್ಲಾಧಿಕಾರಿ ಹಾಗೂ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸ್ವತಃ ದೂರವಾಣಿ ಕರೆ ಮಾಡಿ, ಕುರಿಗಾಯಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅಧಿಕಾರಿಗಳಿಗೆ ಎಚ್ಚರಿಕೆ
ಕುರಿಗಾಯಿಗಳ ರಕ್ಷಣೆ ಹಾಗೂ ಅವರ ಜೀವನೋಪಾಯಕ್ಕೆ ಬರುವ ಅಡೆತಡೆಗಳನ್ನು ನಿವಾರಿಸಲು ಆಡಳಿತಯಂತ್ರ ಗಂಭೀರವಾಗಿ ಕಾರ್ಯನಿರ್ವಹಿಸಬೇಕು ಎಂದು ಅಧ್ಯಕ್ಷರು ಎಚ್ಚರಿಸಿದರು. ಕುರಿಗಾಯಿಗಳ ಸಂವಾದದ ಬಳಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿವಿಧ ಭಾಗಗಳ ಇತರೆ ಮಹಿಳೆಯರ ಅಹವಾಲುಗಳನ್ನು ಆಲಿಸಿದ ನಾಗಲಕ್ಷ್ಮಿ ಅವರು, ಸಂತ್ರಸ್ತ ಮಹಿಳೆಯರಿಗೆ ಕಾನೂನು ನೆರವು ಹಾಗೂ ತ್ವರಿತ ಪರಿಹಾರ ಒದಗಿಸಲು ಅಗತ್ಯವಿರುವ ಎಲ್ಲಾ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
#NagalakshmiChowdary #WomensCommission #VijayanagaraNews #Mariyammanahalli #ShepherdsProtest #UdayakalaNews

