ಉದಯಕಾಲ ನ್ಯೂಸ್, ಬೆಳಗಾವಿ: ಕಬ್ಬಿಗೆ ಸೂಕ್ತ ಬೆಲೆ ಹಾಗೂ ಪ್ರೋತ್ಸಾಹಧನ ನೀಡುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದೆ. ಬೆಳಗಾವಿ ತಾಲೂಕಿನ ಮುಕ್ತಿಮಠದಿಂದ ಚನ್ನಮ್ಮ ವೃತ್ತದವರೆಗೆ ಪಾದಯಾತ್ರೆ ಹಾಗೂ ‘ಜೈಲ್ ಭರೋ’ ಚಳವಳಿಗೆ ಮುಂದಾಗಿದ್ದ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಸೇರಿದಂತೆ ನೂರಾರು ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತೀವ್ರ ವಾಗ್ವಾದ ಹಾಗೂ ಗದ್ದಲ ಉಂಟಾಯಿತು.
ಅಸ್ವಸ್ಥಗೊಂಡ ರೈತ; ಆಸ್ಪತ್ರೆಗೆ ದಾಖಲು
ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ಯುವಾಗ ಹುಕ್ಕೇರಿ ತಾಲೂಕಿನ ಬಸ್ಸಾಪುರ ಗ್ರಾಮದ ಬಳಿ ರೈತನೋರ್ವ ತೀವ್ರ ಅಸ್ವಸ್ಥಗೊಂಡ ಘಟನೆ ನಡೆಯಿತು. ತನಗೆ ಈಗಾಗಲೇ ಹಾರ್ಟ್ ಸರ್ಜರಿ ಆಗಿದ್ದು, ದಯವಿಟ್ಟು ಆಸ್ಪತ್ರೆಗೆ ಕರೆದೊಯ್ಯುವಂತೆ ಆ ರೈತ ಬೇಡಿಕೊಂಡರೂ, ಪೊಲೀಸರು ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಸಹ ರೈತರು ಆಕ್ರೋಶ ವ್ಯಕ್ತಪಡಿಸಿದರು. ನಂತರ ಸ್ಥಳದಲ್ಲಿದ್ದ ಇತರ ರೈತರು ಆತನನ್ನು ಹೊತ್ತುಕೊಂಡು ಹೋಗಿ ಬಸ್ಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಇನ್ನು ಮೂಡಲಗಿ ತಾಲೂಕಿನಲ್ಲಿ ರಾಜ್ಯ ರೈತ ಸಂಘದ ಗೌರವ ಅಧ್ಯಕ್ಷ ಶಶಿಕಾಂತ್ ಗುರೂಜಿ ಅವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದು, ರೈತರು ಯಾರೂ ಬೆಳಗಾವಿಯತ್ತ ಬರಬೇಡಿ ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ರೂ.3,600ಕ್ಕೆ ಒಪ್ಪದ ರೈತರು: ಮುಂದುವರಿದ ಆಕ್ರೋಶ
ಪ್ರತಿ ಟನ್ ಕಬ್ಬಿಗೆ 3,600 ರೂಪಾಯಿ ದರ ನೀಡಲು ಕಾರ್ಖಾನೆ ಮಾಲೀಕರು ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದ. ಕಿತ್ತೂರು, ಬೈಲಹೊಂಗಲ ಭಾಗದ ಕೆಲ ರೈತರು ಇದಕ್ಕೆ ಒಪ್ಪಿಗೆ ಸೂಚಿಸಿದ್ದರೂ, ಚೂನಪ್ಪ ಪೂಜಾರಿ ಹಾಗೂ ರವಿ ಪಾಟೀಲ್ ಸೇರಿದಂತೆ ಪ್ರಮುಖ ಮುಖಂಡರು ಇದನ್ನು ವಿರೋಧಿಸಿದ್ದಾರೆ. ಒಂದು ತಿಂಗಳಿಂದ ಕೇವಲ ಇದೇ ಭರವಸೆ ನೀಡಲಾಗುತ್ತಿದ್ದು, ಪ್ರತಿ ಟನ್ ಕಬ್ಬಿಗೆ ಹೆಚ್ಚುವರಿಯಾಗಿ 1 ಸಾವಿರ ರೂ. ಪ್ರೋತ್ಸಾಹಧನ ಘೋಷಿಸುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ, ಸರ್ಕಾರದ ಧೋರಣೆ ವಿರುದ್ಧ ರೈತರು ಆಕ್ರೋಶ ಮುಂದುವರಿಸಿದ್ದಾರೆ.
#BelagaviFarmersProtest #ChunappaPujari #SugarcanePrice #KarnatakaNews #RaithaSangha #UdayakalaNews

