Wednesday, November 04, 2026
Menu

ಮಧ್ಯರಾತ್ರಿಯಿಂದಲೇ ಬಸ್ ಪ್ರಯಾಣ ದರ ಹೆಚ್ಚಳ– ಕೆಎಸ್‌ಆರ್‌ಟಿಸಿ ಶೇ.23, ಬಿಎಂಟಿಸಿ ಶೇ.35ರಷ್ಟು ಏರಿಕೆ

ಉದಯಕಾಲ ನ್ಯೂಸ್, ಬೆಂಗಳೂರು: ಹಾಲಿನ ದರ ಏರಿಕೆಯ ಬೆನ್ನಲ್ಲೇ ರಾಜ್ಯದ ಬಡ ಹಾಗೂ ಮಧ್ಯಮ ವರ್ಗದ ಜನತೆಗೆ ಮತ್ತೊಂದು ಆರ್ಥಿಕ ಹೊಡೆತ ಬಿದ್ದಿದೆ. ರಾಜ್ಯ ಸರ್ಕಾರಿ ಸಾರಿಗೆ ಬಸ್‌ಗಳ ಪ್ರಯಾಣ ದರವನ್ನು ಅಧಿಕೃತವಾಗಿ ಪರಿಷ್ಕರಿಸಿದ್ದು, ವಾಯುವ್ಯ, ಕಲ್ಯಾಣ ಕರ್ನಾಟಕ ಹಾಗೂ ಕೆಎಸ್‌ಆರ್‌ಟಿಸಿ ಸಾರಿಗೆ ನಿಗಮಗಳಲ್ಲಿ ಶೇ.23ರಷ್ಟು ಹಾಗೂ ಬಿಎಂಟಿಸಿ ಬಸ್‌ಗಳಲ್ಲಿ ಶೇ.35ರಷ್ಟು ಪ್ರಯಾಣ ದರವನ್ನು ಹೆಚ್ಚಿಸಲಾಗಿದೆ. ಈ ಹೊಸ ದರಗಳು ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿವೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಘೋಷಿಸಿದ್ದಾರೆ.

ದರ ಏರಿಕೆಗೆ ಕಾರಣ? ನೌಕರರ ವೇತನ ಹಾಗೂ ಇಂಧನ ಬೆಲೆ ಸಬೂಬು

ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಸಾರಿಗೆ ಸಚಿವ ಬೈರತಿ ಸುರೇಶ್, ಡೀಸೆಲ್ ಬೆಲೆ ಏರಿಕೆ, ನೌಕರರ ವೇತನ ಹೆಚ್ಚಳ ಹಾಗೂ ನಿಗಮಗಳ ಮೇಲಿನ ಸಾಲದ ಭಾರವೇ ದರ ಪರಿಷ್ಕರಣೆಗೆ ಮುಖ್ಯ ಕಾರಣ ಎಂದರು. ಕಳೆದ 10 ವರ್ಷಗಳಲ್ಲಿ ಬಿಎಂಟಿಸಿಯಲ್ಲಿ ಕೇವಲ ಒಂದು ಬಾರಿ ಹಾಗೂ ಇನ್ನುಳಿದ ಮೂರು ನಿಗಮಗಳಲ್ಲಿ ಎರಡು ಬಾರಿ ಮಾತ್ರ ದರ ಏರಿಕೆ ಮಾಡಲಾಗಿತ್ತು. ಪ್ರಸ್ತುತ ಡೀಸೆಲ್ ಬೆಲೆ 98 ರೂ. ತಲುಪಿದ್ದು, ಕಳೆದ ಒಂದೂವರೆ ವರ್ಷದಲ್ಲೇ ಡೀಸೆಲ್ ದರ 10.47 ರೂ. ಹೆಚ್ಚಾಗಿದೆ.

ನಿಗಮಗಳ ಆದಾಯದ ಶೇ.80ರಷ್ಟು ಹಣ ಡೀಸೆಲ್ ಮತ್ತು ಸಿಬ್ಬಂದಿ ವೇತನಕ್ಕೇ ಬಳಕೆಯಾಗುತ್ತಿದೆ. ಒಟ್ಟು ನಾಲ್ಕು ನಿಗಮಗಳಲ್ಲಿ ಬಾಕಿ ಮತ್ತು ಹೊಣೆಗಾರಿಕೆ 7,719 ಕೋಟಿ ರೂ. ಹಾಗೂ 2,192 ಕೋಟಿ ರೂ. ಸಾಲ ಸೇರಿ ಒಟ್ಟು 9,912 ಕೋಟಿ ರೂ. ಆರ್ಥಿಕ ಹೊರೆಯಿದೆ. ‘ಶಕ್ತಿ ಯೋಜನೆ’ಯಿಂದ ನಿಗಮಗಳಿಗೆ ನಷ್ಟವಾಗುತ್ತಿಲ್ಲ, ಸರ್ಕಾರದಿಂದ ಪ್ರತಿ ಟಿಕೆಟ್‌ಗೆ ಅನುದಾನ ನೀಡಲಾಗುತ್ತಿದೆ. ಆದರೂ ನಿಗಮಗಳ ಮೇಲಿನ ಆರ್ಥಿಕ ನಷ್ಟದ ಹೊರೆ ಇಳಿಸಲು ಅನಿವಾರ್ಯವಾಗಿ ದರ ಏರಿಕೆ ಮಾಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಹೊಸ ದರಗಳ ವಿವರ

ಬಿಎಂಟಿಸಿ (ಬೆಂಗಳೂರು ಮಹಾನಗರ ಸಾರಿಗೆ): 2 ಕಿ.ಮೀ ವರೆಗಿನ ಪ್ರಯಾಣಕ್ಕೆ 4 ರೂ., 2ರಿಂದ 4 ಕಿ.ಮೀ ವರೆಗೆ 6 ರೂ. ಹಾಗೂ ದೂರದ ಪ್ರಯಾಣಕ್ಕೆ 12 ರೂ.ವರೆಗೆ ಹೆಚ್ಚಿಸಲಾಗಿದೆ.
ಎಸಿ ಬಸ್‌ಗಳು: ಹತ್ತಿರದ ಪ್ರಯಾಣಕ್ಕೆ 5 ರೂ., 6ರಿಂದ 18 ಕಿ.ಮೀ ವರೆಗೆ 10 ರೂ. ಹಾಗೂ ದೂರದ ಪ್ರಯಾಣಕ್ಕೆ 15 ರೂ. ವರೆಗೆ ದರ ಹೆಚ್ಚಳ ಮಾಡಲಾಗಿದೆ.
ರಾಜ್ಯ ಸಾರಿಗೆ (KSRTC/NWKRTC/NEKRTC): ಸಾಮಾನ್ಯ ಸಾರಿಗೆಯ ನೆಲಮಂಗಲ ಮಾರ್ಗದಲ್ಲಿ 35 ರೂ. ಇದ್ದದ್ದು 44 ರೂ.ಗೆ ಏರಿಕೆಯಾಗಿದೆ. ವೇಗದೂತ ಸಾರಿಗೆಗಳಲ್ಲಿ ಗರಿಷ್ಠ 18 ರೂಪಾಯವರೆಗೆ ದರ ಹೆಚ್ಚಿಸಲಾಗಿದೆ.

ಪ್ರಯಾಣಿಕರು ಹಾಗೂ ದೈನಂದಿನ ಕಾರ್ಮಿಕರ ಮೇಲೆ ಈ ದರ ಏರಿಕೆಯು ಬರೆ ಎಳೆದಂತಾಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

#BusFareHike #KarnatakaTransport #BMTC #KSRTC #ByrathiSuresh #UdayakalaNews #KarnatakaNews

Related Posts

Leave a Reply

Your email address will not be published. Required fields are marked *