Tuesday, November 03, 2026
Menu

ಚಾಮುಂಡಿ ಬೆಟ್ಟದಲ್ಲಿ ಶಿರಡಿ ಮಾದರಿಯಲ್ಲಿ ಆನ್‌ಲೈನ್ ದರ್ಶನ ವ್ಯವಸ್ಥೆ

ಉದಯಕಾಲ ನ್ಯೂಸ್, ಮೈಸೂರು: ಮೈಸೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ದರ್ಶನ ಹಾಗೂ ವಿವಿಧ ಸೇವೆಗಳಿಗಾಗಿ ನವೆಂಬರ್ 1ರಿಂದ ಹೊಸದಾಗಿ ವೆಬ್‌ಸೈಟ್ ಆರಂಭಿಸಲಾಗಿದ್ದು, ಶಿರಡಿ ಮಾದರಿಯಲ್ಲಿ ಸುಧಾರಿತ ಆನ್‌ಲೈನ್ ದರ್ಶನ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ದೇವಾಲಯದಲ್ಲಿ ಸೇವಾ ಟಿಕೆಟ್‌ಗಳ ದುರುಪಯೋಗ ಹಾಗೂ ಬ್ಲಾಕ್ ಮಾರ್ಕೆಟ್ ಮೂಲಕ ಭಕ್ತರನ್ನು ಸುಲಿಗೆ ಮಾಡುತ್ತಿದ್ದ ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಈ ಮಹತ್ವದ ಹೆಜ್ಜೆ ಇಟ್ಟಿದೆ.

ಅಭಿಷೇಕ ಮತ್ತು ವಿಶೇಷ ದರ್ಶನಕ್ಕೆ ಆನ್‌ಲೈನ್ ಕಡ್ಡಾಯ: ಕೆವೈಸಿ ವ್ಯವಸ್ಥೆ ಜಾರಿ

ಚಾಮುಂಡೇಶ್ವರಿ ಅಭಿಷೇಕಕ್ಕೆ 1,000 ರೂ., ವಿಶೇಷ ದರ್ಶನಕ್ಕೆ 200 ರೂ. ಹಾಗೂ ಧರ್ಮ ದರ್ಶನ ಸೇರಿದಂತೆ ಇತರೆ ಸೇವೆಗಳಿಗೆ ಆನ್‌ಲೈನ್ ಮೂಲಕವೇ ಸ್ಲಾಟ್ ಬುಕ್ ಮಾಡಿಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ. ಇದುವರೆಗೆ ಕೌಂಟರ್‌ನಲ್ಲಿ ನೀಡುತ್ತಿದ್ದ ಟಿಕೆಟ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಟಿಕೆಟ್‌ಗಳ ದುರುಪಯೋಗ ತಡೆಯಲು ಕಡ್ಡಾಯವಾಗಿ ‘ಕೆವೈಸಿ’ (KYC) ಅಳವಡಿಸಲಾಗಿದ್ದು, ಭಕ್ತರು ದರ್ಶನಕ್ಕೆ ಬರುವಾಗ ಆಧಾರ್ ಕಾರ್ಡ್ ತರಬೇಕು. ಬೆಳಗ್ಗೆ 6:30 ರಿಂದ 9 ಹಾಗೂ ಸಂಜೆ 7:30 ರಿಂದ 9 ಗಂಟೆವರೆಗೆ ಮಾತ್ರ ಅಭಿಷೇಕದ ಟಿಕೆಟ್ ಪಡೆದವರಿಗೆ ಗೇಟ್-2ರ ಮೂಲಕ ಪ್ರವೇಶ ನೀಡಲಾಗುತ್ತದೆ. ಧರ್ಮ ದರ್ಶನ ಹಾಗೂ ವಿಶೇಷ ದರ್ಶನ ಬಯಸುವವರು ತಮಗೆ ಅನುಕೂಲವಾದ ಸಮಯವನ್ನು (ಸ್ಲಾಟ್) ವೆಬ್‌ಸೈಟ್‌ನಲ್ಲಿ ನೀವೇ ನೇರವಾಗಿ ಆಯ್ಕೆ ಮಾಡಿಕೊಳ್ಳಬಹುದು. ವಿವಿಐಪಿಗಳ ದರ್ಶನಕ್ಕೂ ಕೂಡ ಸಮಯ ನಿಗದಿಪಡಿಸಲು ಕ್ರಮ ಕೈಗೊಳ್ಳಲಾಗಿದೆ.

ಟಿಕೆಟ್ ಮಾರಾಟದ ಕಳ್ಳಾಟಕ್ಕೆ ಬ್ರೇಕ್: ಸುಲಿಗೆಗೆ ತೆರೆ

ಇದುವರೆಗೆ ಕೆಲವರು ಪ್ರತಿದಿನ ಮುಂಜಾನೆಯೇ ಒಂದಕ್ಕಿಂತ ಹೆಚ್ಚು ಅಭಿಷೇಕದ ಟಿಕೆಟ್‌ಗಳನ್ನು ಖರೀದಿಸಿ, ದರ್ಶನ ಮುಗಿದ ಬಳಿಕ ಆ ಟಿಕೆಟ್‌ಗಳನ್ನು ವಾಪಸ್ ಪಡೆದು ಬೇರೆ ಭಕ್ತರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ದಂಧೆ ನಡೆಸುತ್ತಿದ್ದರು. ಒಂದೇ ಟಿಕೆಟ್ ಬಳಸಿ ದಿನವಿಡೀ ಲಕ್ಷಾಂತರ ರೂ. ಸುಲಿಗೆ ಮಾಡಲಾಗುತ್ತಿತ್ತು. ಇದರಿಂದಾಗಿ ನಿಜವಾದ ಭಕ್ತರಿಗೆ ತೊಂದರೆಯಾಗುತ್ತಿತ್ತು. ಈಗ ಹೊಸ ಆನ್‌ಲೈನ್ ವ್ಯವಸ್ಥೆ ಮತ್ತು ಕಟ್ಟುನಿಟ್ಟಿನ ನಿಯಮಗಳಿಂದಾಗಿ ಈ ಎಲ್ಲಾ ಅಕ್ರಮಗಳಿಗೆ ಸಂಪೂರ್ಣ ಬ್ರೇಕ್ ಬಿದ್ದಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಡಾ. ಎಂ. ರೂಪ ತಿಳಿಸಿದ್ದಾರೆ.

#ChamundiHill #MysoreNews #OnlineDarshan #Chamunditemple #UdayakalaNews #KarnatakaTemples #DevotionalNews

Related Posts

Leave a Reply

Your email address will not be published. Required fields are marked *