Tuesday, November 03, 2026
Menu

ಸಜ್ಜೆಪಾಳ್ಯ ವಿವಾದಿತ 44 ಎಕರೆ ಜಮೀನು ತಗಾದೆ, ಒಕ್ಕಲಿಗರ ಸಂಘಕ್ಕೆ ಹಿನ್ನಡೆ: ಹೈಕೋರ್ಟ್ ಮಹತ್ವದ ತೀರ್ಪು

ಉದಯಕಾಲ ನ್ಯೂಸ್, ಬೆಂಗಳೂರು: ಯಶವಂತಪುರ ಹೋಬಳಿ ಶ್ರೀಗಂಧ ಕಾವಲು ವ್ಯಾಪ್ತಿಯ ಸಜ್ಜೆಪಾಳ್ಯದಲ್ಲಿರುವ 44 ಎಕರೆ ಜಮೀನಿನ ಒಡೆತನಕ್ಕೆ ಸಂಬಂಧಿಸಿದ ದೀರ್ಘಕಾಲದ ವಿವಾದದಲ್ಲಿ ರಾಜ್ಯ ಒಕ್ಕಲಿಗರ ಸಂಘ ಹಾಗೂ ಕೃಷ್ಣಪ್ಪ ರಂಗಮ್ಮ ಎಜುಕೇಶನ್ ಟ್ರಸ್ಟ್‌ಗೆ ಹೈಕೋರ್ಟ್‌ನಿಂದ ಭಾರಿ ಹಿನ್ನಡೆಯಾಗಿದೆ. ಈ ವಿವಾದಿತ ಜಮೀನಿನಲ್ಲಿ ಒಕ್ಕಲಿಗರ ಸಂಘಕ್ಕೆ ಯಾವುದೇ ರೀತಿಯ ಹಕ್ಕು ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ಒಕ್ಕಲಿಗರ ಸಂಘದ ಅರ್ಜಿಯನ್ನು ಸಂಪೂರ್ಣವಾಗಿ ವಜಾಗೊಳಿಸಿದೆ.

ಮಹೇಂದ್ರಗೆ ಆಸ್ತಿ ನಿರ್ವಹಣೆ ಮತ್ತು ಮಾರಾಟದ ಸಂಪೂರ್ಣ ಹಕ್ಕು

ದಿವಂಗತ ರಂಗಮ್ಮ ಹಾಗೂ ಅವರ ತಂದೆ ಪುಟ್ಟಸ್ವಾಮಿ ಅವರ ಹೆಸರಿನಲ್ಲಿ ಬರೆಯಲಾದ ‘ಉಯಿಲು’ (Will) ಆಧಾರದ ಮೇಲೆ ಬಿ.ಪಿ. ಮಹೇಂದ್ರ ಅವರಿಗೆ ಮಾತ್ರ ಈ ಆಸ್ತಿಯನ್ನು ನಿರ್ವಹಿಸುವ, ಮಾರಾಟ ಮಾಡುವ ಹಾಗೂ ಅದರಿಂದ ಬರುವ ಆದಾಯವನ್ನು ರಂಗಮ್ಮನವರ ಆಶಯದಂತೆ ಬಳಸುವ ಸಂಪೂರ್ಣ ಹಕ್ಕು ಇರಲಿದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಬಿ.ಪಿ. ಮಹೇಂದ್ರ ಅವರ ಹೆಸರಿನಲ್ಲಿ ಅನುಮೋದಿಸಿದ್ದ ವಸತಿ ಬಡಾವಣೆ ನಕ್ಷೆ ಮತ್ತು ಕಾರ್ಯಾದೇಶವನ್ನು ರದ್ದುಪಡಿಸಬೇಕು ಎಂದು ಕೋರಿ ಕೃಷ್ಣಪ್ಪ ರಂಗಮ್ಮ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿ ಎಚ್.ಎನ್. ಅಶೋಕ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಳ್ಳಿಹಾಕಿದೆ. ಅಲ್ಲದೆ, ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳು ಭೂ ಪರಿವರ್ತನೆ ಹಾಗೂ ಮ್ಯುಟೇಷನ್ ರದ್ದತಿಗೆ ಹೊರಡಿಸಿದ್ದ ಆದೇಶಗಳು ಕಾನೂನುಬಾಹಿರ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲೇಖ!

ಆಸ್ತಿಯ ಮೂಲ ಮಾಲೀಕರಾದ ದಿವಂಗತ ಶ್ರೀಮತಿ ರಂಗಮ್ಮ ಅವರು 1962ರಲ್ಲಿ ಬರೆದಿದ್ದ ಉಯಿಲಿನಂತೆ ಬಿ.ಎಂ. ಪುಟ್ಟಸ್ವಾಮಿ ಅವರನ್ನು ನಿರ್ವಹಣಾಧಿಕಾರಿಯಾಗಿ ನೇಮಿಸಲಾಗಿತ್ತು. ನಂತರ 1978ರಲ್ಲಿ ಟ್ರಸ್ಟ್ ರಚಿಸಲು ಯತ್ನಿಸಿದರೂ ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ಉಲ್ಲಂಘನೆಯಿಂದ ಆ ಒಪ್ಪಂದ ಜಾರಿಗೆ ಬಂದಿರಲಿಲ್ಲ. ಬಳಿಕ ಬಿ.ಎಂ. ಪುಟ್ಟಸ್ವಾಮಿ ಅವರು 1985ರಲ್ಲಿ ಮತ್ತೊಂದು ವಿಲ್ ಬರೆದು ತಮ್ಮ ಮಗ ಬಿ.ಪಿ. ಮಹೇಂದ್ರ ಅವರನ್ನು ಉತ್ತರಾಧಿಕಾರಿಯಾಗಿ ನೇಮಿಸಿದ್ದರು. ಈ ಆಸ್ತಿಯ ಒಡೆತನಕ್ಕಾಗಿ ಒಕ್ಕಲಿಗರ ಸಂಘ ಹೂಡಿದ್ದ ಸಿವಿಲ್ ದಾವೆಯನ್ನು ಈ ಹಿಂದೆ ಸಿವಿಲ್ ನ್ಯಾಯಾಲಯ ಹಾಗೂ ಸುಪ್ರೀಂ ಕೋರ್ಟ್ ಕೂಡ ವಜಾಗೊಳಿಸಿದ್ದವು. ಕಂದಾಯ ಅಧಿಕಾರಿಗಳ ಈ ಕ್ರಮವನ್ನು ಪ್ರಶ್ನಿಸಿ ಮಹೇಂದ್ರ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.ಈಗ ಅವರ ಪರವಾಗಿ ತೀರ್ಪು ಬಂದಿದೆ.
#SajjepalyaLandDispute #KarnatakaHighCourt #VokkaligaraSangha #BPMahendra #BengaluruNews #Udayakala #LegalNews

Related Posts

Leave a Reply

Your email address will not be published. Required fields are marked *