ಉದಯಕಾಲ ನ್ಯೂಸ್, ಉತ್ತರ ಕನ್ನಡ: ಕನ್ನಡ ರಾಜ್ಯೋತ್ಸವದ ಸಡಗರದ ದಿನವೇ ಉತ್ತರ ಕನ್ನಡ ಜಿಲ್ಲೆಯ ಕಾರವಾರಕ್ಕೆ ಹೆಮ್ಮೆಯ ಗರಿಯೊಂದು ಸೇರಿದೆ. ಭಾರತೀಯ ಸೇನೆಯ ಪ್ಯಾರಾ ಸ್ಪೆಷಲ್ ಫೋರ್ಸಸ್ನಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿರುವ ಕಾರವಾರದ ಪ್ರಕಾಶ ಗೊಲ್ಲರ, ಗೋವಾದಲ್ಲಿ ಜರುಗಿದ ವಿಶ್ವವಿಖ್ಯಾತ ‘ಐರನ್ಮ್ಯಾನ್ 70.3’ ಸ್ಪರ್ಧೆಯನ್ನು ಅತ್ಯಂತ ಯಶಸ್ವಿಯಾಗಿ ಕೇವಲ ಆರು ಗಂಟೆಗಳಲ್ಲಿ ಪೂರ್ಣಗೊಳಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ.
ತೀರಾ ಬಡತನದ ಹಿನ್ನೆಲೆಯಿಂದ ಬಂದು, ದೇಶದ ಅತ್ಯಂತ ಕಠಿಣ ಸೇನಾ ತರಬೇತಿ ಪಡೆದಿರುವ ಪ್ರಕಾಶ, ಜಾಗತಿಕ ಮಟ್ಟದ ಈ ಸವಾಲಿನ ಕ್ರೀಡೆಯಲ್ಲಿ ತಮ್ಮ ಛಲ ಹಾಗೂ ದೈಹಿಕ ಸಾಮರ್ಥ್ಯವನ್ನು ಸಾಬೀತುಪಡಿಸುವ ಮೂಲಕ ಕನ್ನಡಿಗರ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.
ಗೋವಾದಲ್ಲಿ ನವೆಂಬರ್ 1ರಂದು ನಡೆದ ಪ್ರತಿಷ್ಠಿತ ‘ಐರನ್ಮ್ಯಾನ್ 70.3’ (ಹಾಫ್ ಐರನ್ಮ್ಯಾನ್) ಸ್ಪರ್ಧೆಯಲ್ಲಿ ವಿವಿಧ ದೇಶಗಳ ನೂರಾರು ಪ್ರಮುಖ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಇದು ದೈಹಿಕ ಸಾಮರ್ಥ್ಯ, ತಾಳ್ಮೆ, ಸಮಯ ನಿರ್ವಹಣೆ ಹಾಗೂ ಮಾನಸಿಕ ಸ್ಥೈರ್ಯದ ಅತ್ಯಂತ ಕಠಿಣ ಪರೀಕ್ಷೆಯಾಗಿದೆ. ಈ ಸ್ಪರ್ಧೆಯಲ್ಲಿ ಮೂರು ಪ್ರತ್ಯೇಕ ವಿಭಾಗಗಳನ್ನು ಒಂದರ ಹಿಂದೆ ಒಂದರಂತೆ ಯಾವುದೇ ವಿರಾಮವಿಲ್ಲದೆ ಪೂರ್ಣಗೊಳಿಸಬೇಕಾಗುತ್ತದೆ. ಸಮುದ್ರದ ನೀರಿನಲ್ಲಿ 1.9 ಕಿ.ಮೀ. ಈಜು, 90 ಕಿ.ಮೀ. ಸೈಕ್ಲಿಂಗ್ ಹಾಗೂ 21.1 ಕಿ.ಮೀ. ಓಟ ಸೇರಿದಂತೆ ಒಟ್ಟು 113 ಕಿ.ಮೀ. (70.3 ಮೈಲು) ದೂರವನ್ನು ಯೋಧ ಪ್ರಕಾಶ ಗೊಲ್ಲರ ಕೇವಲ ಆರು ಗಂಟೆಗಳಲ್ಲಿ ಕ್ರಮಿಸಿ ಗುರಿ ತಲುಪಿದ್ದಾರೆ.
ಬಡತನ ಮೆಟ್ಟಿದ ಸ್ಪೂರ್ತಿಯ ಹಾದಿ
ಕಾರವಾರ ನಗರದ ಧೋಬಿಘಾಟ್ ರಸ್ತೆಯಲ್ಲಿ ಬಸವೇಶ್ವರ ಖಾನಾವಳಿ ನಡೆಸುವ ತಂದೆ ಶೇಖಪ್ಪ ಗೊಲ್ಲರ ಹಾಗೂ ತಾಯಿ ಗಂಗಮ್ಮ ಅವರ ಬಡತನದ ಕುಟುಂಬದಲ್ಲಿ ಬೆಳೆದು ಬಂದ ಪ್ರಕಾಶ ಅವರ ಜೀವನವೇ ಒಂದು ರೋಚಕ ಸ್ಪೂರ್ತಿ. 2018ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಂಡ ಅವರು, ತಮ್ಮ ಅಸಾಧಾರಣ ಪರಿಶ್ರಮದಿಂದ ಭಾರತೀಯ ಸೇನೆಯ ಅತ್ಯಂತ ಕಠಿಣ ಪಡೆ ಎನಿಸಿರುವ ‘ಪ್ಯಾರಾ ಸ್ಪೆಷಲ್ ಫೋರ್ಸಸ್’ಗೆ ಆಯ್ಕೆಯಾದರು. ಉತ್ತರ ಕನ್ನಡ ಜಿಲ್ಲೆಯಿಂದ ಈ ವಿಶೇಷ ಸೇನಾ ಪಡೆ ಸೇರಿದ ಮೊದಲ ಯೋಧ ಎಂಬ ಹೆಗ್ಗಳಿಗೆ ಇವರದ್ದಾಗಿದೆ. ಜಮ್ಮು-ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿರುವ ಅವರು ಪ್ರಸ್ತುತ ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಯುವಜನತೆಗೆ ಮಾದರಿ
ಸೇನಾ ಸಮವಸ್ತ್ರದ ಜತೆಗೆ ಕ್ರೀಡಾ ಲೋಕದಲ್ಲೂ ತಮ್ಮ ಸಾಮರ್ಥ್ಯ ಮೆರೆದಿರುವ ಪ್ರಕಾಶ ಅವರ ಈ ಸಾಧನೆಯು ನಾಡಿನಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ. ಬಡತನ ಸಾಧನೆಗೆ ಎಂದಿಗೂ ಅಡ್ಡಿಯಾಗುವುದಿಲ್ಲ, ಗುರಿಯ ಮೇಲಿನ ಬದ್ಧತೆ ಇದ್ದರೆ ಜಾಗತಿಕ ವೇದಿಕೆಯಲ್ಲೂ ಗೆಲ್ಲಬಹುದು ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ಈ ಐರನ್ಮ್ಯಾನ್ ಸಾಧನೆಯು ಕೇವಲ ವೈಯಕ್ತಿಕ ಯಶಸ್ಸಷ್ಟೇ ಅಲ್ಲದೆ, ಕಾರವಾರ ಹಾಗೂಒಟ್ಟಾರೆ ಕರುನಾಡಿನ ಯುವಜನತೆಗೆ ಕ್ರೀಡೆ ಮತ್ತು ದೈಹಿಕ ಫಿಟ್ನೆಸ್ ಬಗ್ಗೆ ಒಲವು ಮೂಡಿಸಲು ದೊಡ್ಡ ಪ್ರೇರಣೆಯಾಗಿದೆ.
#Ironman703 #PrakashGollar #KarwarHero #KannadaRajyotsava #ParaCommando #UdayakalaNews #IndianArmy #TriathlonAchievement


