Saturday, October 31, 2026
Menu

ಬೀದಿ ನಾಯಿಯ ಮಾರಣಾಂತಿಕ ದಾಳಿಗೆ 4 ವರ್ಷದ ಕಂದಮ್ಮ ಬಲಿ!

ಉದಯಕಾಲ ನ್ಯೂಸ್,ಕಲಬುರಗಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು ಬಡವರಿಗೆ ಹಾಗೂ ಜೋಪಡಿ ವಾಸಿಗಳಿಗೆ ಭಯದ ವಾತಾವರಣ ಸೃಷ್ಟಿಯಾಗಿದೆ. ಇಂದು ಹಸಿ ಕಂದಮ್ಮನ ಜೀವವನ್ನು ಬಲಿ ತೆಗೆದುಕೊಂಡಿರುವ ಅತ್ಯಂತ ಹೃದಯವಿದ್ರಾವಕ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ. ಮನೆಯ ಬಳಿ ಆಟವಾಡುತ್ತಿದ್ದ 4 ವರ್ಷದ ಬಾಲಕನ ಮೇಲೆ ಬೀದಿ ನಾಯಿ ಒಮ್ಮೆಲೆರಗಿ ತೀವ್ರವಾಗಿ ಕಚ್ಚಿ ಗಾಯಗೊಳಿಸಿದ್ದು, ಗಂಭೀರಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಕೊನೆಯುಸಿರೆಳೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಹಾಗೂ ಆತಂಕ ಮೂಡಿಸಿದೆ.

ಮೃತನನ್ನು ಕಲಬುರಗಿ ತಾಲೂಕಿನ ಜಂಬಗಾ ಗ್ರಾಮದ ಶರಣಬಸಪ್ಪಾ ಪೂಜಾರಿ ಅವರ ಮುದ್ದಿನ ಮಗ ಮನೋಜ್ ಪೂಜಾರಿ (4) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ವಾಚ್‌ಮನ್ ಆಗಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಶರಣಬಸಪ್ಪ ಅವರು ತಮ್ಮ ಕುಟುಂಬದೊಂದಿಗೆ ಕಲಬುರಗಿ ನಗರದ ದರಿಯಾಪುರ ಕೋಟನೂರ್ ಬಡಾವಣೆಯಲ್ಲಿ ವಾಸವಾಗಿದ್ದರು. ಎಂದಿನಂತೆ ಬಾಲಕ ಮನೋಜ್ ಮನೆಯ ಸಮೀಪದ ಗಾಣದೇವತೆ ದೇವಸ್ಥಾನದ ರಸ್ತೆಯಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ.

ಸ್ಥಳೀಯರ ಆಕ್ರೋಶ

ಏಕಾಏಕಿ ದಾಳಿ ನಡೆಸಿದ ಬೀದಿ ನಾಯಿ ಬಾಲಕನ ಮುಖ, ತಲೆ ಹಾಗೂ ದೇಹದ ವಿವಿಧ ಭಾಗಗಳಿಗೆ ತೀವ್ರವಾಗಿ ಕಚ್ಚಿ ಗಾಯಗೊಳಿಸಿವೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗುವನ್ನು ಕಂಡು ಪೋಷಕರು ಕಣ್ಣೀರಿಟ್ಟಿದ್ದಾರೆ.ನಾಯಿಗಳ ದಾಳಿಯಿಂದ ಗಂಭೀರವಾಗಿ ಅಸ್ವಸ್ಥಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪುಟ್ಟ ಬಾಲಕ ಮನೋಜ್‌ನನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲು ಪ್ರಯತ್ನಿಸಲಾಯಿತಾದರೂ, ಅಷ್ಟರಲ್ಲಿ ಮಗು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಬಡಾವಣೆಯಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದರೂ ಸ್ಥಳೀಯ ಮಹಾನಗರ ಪಾಲಿಕೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಮುಂಜಾಗರೂಕತಾ ಕ್ರಮ ಕೈಗೊಂಡಿಲ್ಲ ಎಂದು ಮೃತ ಬಾಲಕನ ಪೋಷಕರು ಹಾಗೂ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಚ್ಚೆತ್ತುಕೊಳ್ಳದ ಆಡಳಿತ

ಮುದ್ದು ಮಗುವನ್ನು ಕಳೆದುಕೊಂಡ ಪೋಷಕರ ಆಕ್ರೋಶ ಮುಗಿಲು ಮುಟ್ಟಿದ್ದು, ಇನ್ನು ಮುಂದಾದರೂ ಇಂತಹ ದುರ್ಘಟನೆಗಳು ಮರುಕಳಿಸದಂತೆ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

#KalaburagiNews #StrayDogAttack #BoyDeath #DariyapurKotonur #KarnatakaNews #UdayakalaNews #DogMenace

Related Posts

Leave a Reply

Your email address will not be published. Required fields are marked *