ಉದಯಕಾಲ ನ್ಯೂಸ್,ಹುಬ್ಬಳ್ಳಿ: ರಾಜ್ಯದ ವಾಣಿಜ್ಯ ನಗರಿ ಹುಬ್ಬಳ್ಳಿ ಭಾಗಕ್ಕೆ ರೈಲು ಸಂಪರ್ಕವನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಹಾಗೂ ಪ್ರಯಾಣಿಕರಿಂದ ಮಹತ್ವದ ಬೇಡಿಕೆಗಳು ಮುನ್ನೆಲೆಗೆ ಬಂದಿವೆ. ಪ್ರಸ್ತಾವಿತ ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ಎಕ್ಸ್ಪ್ರೆಸ್ ರೈಲನ್ನು ಹುಬ್ಬಳ್ಳಿ ಮಾರ್ಗವಾಗಿಯೂ ಸಂಚರಿಸುವಂತೆ ಒತ್ತಾಯ ಕೇಳಿಬರುತ್ತಿದೆ. ಈ ಬೆನ್ನಲ್ಲೇ ಮತ್ತೊಂದೆಡೆ ವಂದೇ ಭಾರತ್ ರೈಲುಗಳ ದುಬಾರಿ ಬೆಲೆ ಬಡ ಹಾಗೂ ಮಧ್ಯಮ ವರ್ಗದ ಜನರ ಜೇಬಿಗೆ ಹೊರೆಯಾಗಿದೆ. ‘ಜನಶತಾಬ್ದಿ’ ಸೇರಿದಂತೆ ಕಡಿಮೆ ದರದ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ನಾಗರಿಕರು ಮೋದಿ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.
ನೈಋತ್ಯ ರೈಲ್ವೆಯ ಪ್ರಾದೇಶಿಕ ಬಳಕೆದಾರರ ಸಲಹಾ ಸಮಿತಿ ಸದಸ್ಯ ಮಹೇಂದ್ರ ಸಿಂಘಿ ನೇತೃತ್ವದ ನಿಯೋಗವು ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ್ದು, ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲನ್ನು ವಾರದಲ್ಲಿ ಮೂರು ದಿನ ದಾವಣಗೆರೆ-ಹುಬ್ಬಳ್ಳಿ-ಬೆಳಗಾವಿ ಮಾರ್ಗವಾಗಿ ಓಡಿಸುವಂತೆ ಪ್ರಸ್ತಾವನೆ ಮಂಡಿಸಿದೆ. ಇದು ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ಮಹತ್ವದ ವರದಾನವಾಗಲಿದೆ ಎಂದು ಅಭಿಪ್ರಾಯಪಡಲಾಗಿದೆ.
ಪ್ರಯಾಣಿಕರ ಅಳಲು-ದುಬಾರಿ ಪ್ರಯಾಣ ದರ
ಹುಬ್ಬಳ್ಳಿ-ಬೆಂಗಳೂರು ನಡುವೆ ವಂದೇ ಭಾರತ್ ಚೇರ್ಕಾರ್ ದರ ಅಂದಾಜು ₹1,330 ಇದ್ದರೆ, ಜನಶತಾಬ್ದಿ ದರ ಸುಮಾರು ₹720 ಇದೆ. ಕೇವಲ ಅರ್ಧ ಗಂಟೆ ಪ್ರಯಾಣದ ಸಮಯ ಉಳಿಸಲು ದುಪ್ಪಟ್ಟು ಹಣ ತೆರಬೇಕಿರುವುದರಿಂದ ಕುಟುಂಬ ಸಮೇತ ಪ್ರಯಾಣಿಸುವವರಿಗೆ ಇದು ದೊಡ್ಡ ಆರ್ಥಿಕ ಹೊರೆಯಾಗಿದೆ.
ಹುಬ್ಬಳ್ಳಿಗೂ ಸ್ಲೀಪರ್ ರೈಲು ಬೇಕೆಂಬ ಬೇಡಿಕೆ
ಕರ್ನಾಟಕ ಮತ್ತು ಮಹಾರಾಷ್ಟ್ರ ಸಂಪರ್ಕಿಸುವ ವಂದೇ ಭಾರತ್ ಸ್ಲೀಪರ್ ರೈಲು ಮಾರ್ಗವನ್ನು ಎರಡು ಪರ್ಯಾಯ ಮಾರ್ಗಗಳಲ್ಲಿ ವಿಂಗಡಿಸಿ, ಕೆಲವು ದಿನಗಳ ಕಾಲ ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಲಾಗಿದೆ.
ಹೈಟೆಕ್ ಮತ್ತು ಐಷಾರಾಮಿ ರೈಲುಗಳಿಗಿಂತ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ದಿನನಿತ್ಯ ಸಂಚರಿಸುವ ಬಡ-ಮಧ್ಯಮ ವರ್ಗದ ಜನಸಾಮಾನ್ಯರ ಅನುಕೂಲಕ್ಕಾಗಿ ಜನಶತಾಬ್ದಿ ಹಾಗೂ ಸಾಮಾನ್ಯ ರೈಲುಗಳ ಸೇವೆಯನ್ನು ವಿಸ್ತರಿಸಿ ಅಧಿಕಗೊಳಿಸಬೇಕೆಂದು ಸಾರ್ವಜನಿಕರು ತೀವ್ರವಾಗಿ ಆಗ್ರಹಿಸಿದ್ದಾರೆ.
#Hubballi #VandeBharatSleeper #JanshatabdiExpress #HubballiNews #RailwayConnectivity #SouthWesternRailway #UdayakalaNews #KarnatakaRailways

