ಉದಯಕಾಲ ನ್ಯೂಸ್, ಬೆಳಗಾವಿ: ಕರ್ನಾಟಕ ರಾಜ್ಯೋತ್ಸವದ (ನವೆಂಬರ್ 1) ಸಂಭ್ರಮದ ನಡುವೆ ಬೆಳಗಾವಿ ಜಿಲ್ಲೆಗೆ ಕೀರ್ತಿ ತಂದ ಮೂವರು ಹಿರಿಯ ಸಾಧಕರಿಗೆ ಈ ಬಾರಿಯ ಪ್ರತಿಷ್ಠಿತ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಒಲಿದುಬಂದಿದೆ. ಸಂಕೀರ್ಣ ಕ್ಷೇತ್ರದಲ್ಲಿ ಗಡಿಭಾಗದ ಖ್ಯಾತ ರಂಗಕರ್ಮಿ ಹಾಗೂ ಸಾಹಿತಿ ಡಾ. ಡಿ.ಎಸ್. ಚೌಗಲೆ, ವೈದ್ಯಕೀಯ ಕ್ಷೇತ್ರದಲ್ಲಿ ಮಧುಮೇಹ ಪೀಡಿತ ಮಕ್ಕಳ ಪಾಲಿನ ಜೀವ ದೇವತೆಯಾಗಿರುವ ಡಾ. ಸುಜಾತಾ ಮಲ್ಲಿಕಾರ್ಜುನ್ ಜಾಲಿ ಹಾಗೂ ಶಿಲ್ಪಕಲೆ ಕ್ಷೇತ್ರದಲ್ಲಿ ಕಲ್ಲುಗಳಿಗೆ ಜೀವತುಂಬಿರುವ ನಿಪುಣ ಶಿಲ್ಪಕಾರ ಕಾಡಪ್ಪ ಗಾಡಿವಡ್ಡರ ಅವರು ರಾಜ್ಯ ಸರ್ಕಾರದ ಅತ್ಯುನ್ನತ ಗೌರವಕ್ಕೆ ಪಾತ್ರರಾಗಿದ್ದಾರೆ.
ಸಾಹಿತ್ಯ, ರಂಗಭೂಮಿ, ವೈದ್ಯಕೀಯ ಸೇವೆ ಹಾಗೂ ಸಾಂಪ್ರದಾಯಿಕ ಕರಕುಶಲ ಕಲೆಗಳಲ್ಲಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟುಕೊಂಡು ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ಈ ಮೂವರ ನಿಸ್ವಾರ್ಥ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಇಡೀ ಬೆಳಗಾವಿ ಜಿಲ್ಲೆಯಲ್ಲಿ ಹರ್ಷದ ಹೊಳೆಯನ್ನೇ ಹರಿಸಿದೆ.
ಡಾ. ಡಿ.ಎಸ್. ಚೌಗಲೆ
ಬೆಳಗಾವಿ ನಗರದವರಾದ ಇವರು ನಾಟಕ, ಚಿತ್ರಕಲೆ, ಸಣ್ಣಕತೆ ಹಾಗೂ ಕನ್ನಡ-ಮರಾಠಿ ರಂಗಭೂಮಿಗೆ ಮೂರು ದಶಕಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದ್ದಾರೆ. ‘ನಮ್ಮೊಳಗೊಬ್ಬ ಗಾಂಧಿ’, ‘ಗಾಂಧಿ ವಿರುದ್ಧ ಗಾಂಧಿ’ಯಂತಹ ಮಹತ್ವದ ನಾಟಕಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಟರ್ಕಿಯಲ್ಲಿ ನಡೆದ ಅಂತರರಾಷ್ಟ್ರೀಯ ಕಲಾ ಸಮ್ಮೇಳನದಲ್ಲೂ ಭಾಗವಹಿಸಿದ್ದ ಇವರು, ಈ ಪ್ರಶಸ್ತಿಯನ್ನು ತಮ್ಮ ತಾಯಿ, ಪತ್ನಿ ಹಾಗೂ ನಾಟಕ-ಕತೆಗಳ ಪಾತ್ರಗಳಿಗೆ ಅರ್ಪಿಸಿದ್ದಾರೆ.
ಡಾ. ಸುಜಾತಾ ಮಲ್ಲಿಕಾರ್ಜುನ್ ಜಾಲಿ (ವೈದ್ಯಕೀಯ ಕ್ಷೇತ್ರ)
ಕೆಎಲ್ಇ ಆಸ್ಪತ್ರೆಯಲ್ಲಿ ಕಳೆದ 25 ವರ್ಷಗಳಿಂದ ಮಧುಮೇಹ ತಜ್ಞೆಯಾಗಿ ಸೇವೆ ಸಲ್ಲಿಸುತ್ತಿರುವ ಇವರು, 627ಕ್ಕೂ ಅಧಿಕ ಬಡ ಮಧುಮೇಹ ಮಕ್ಕಳಿಗೆ ಉಚಿತ ಇನ್ಸುಲಿನ್ ಹಾಗೂ ನಿರಂತರ ಚಿಕಿತ್ಸೆ ನೀಡುತ್ತಿದ್ದಾರೆ. ಥೆಲಾಸಿಮಿಯಾ ಪೀಡಿತ ಮಕ್ಕಳಿಗೆ ರಕ್ತಪೂರಣ ಮತ್ತು ಅಸ್ಥಿಮಜ್ಜೆ ಕಸಿ ಚಿಕಿತ್ಸೆಗೆ ನೆರವಾಗಿರುವ ಇವರ ಈ ಸೇವೆಗೆ ಅಂತಾರಾಷ್ಟ್ರೀಯ ‘SWEET’ ಮನ್ನಣೆ ಹಾಗೂ ಪ್ರಾಗ್ನ ‘AZF ಗೌರವ’ವೂ ಲಭಿಸಿದೆ.
ಕಾಡಪ್ಪ ಗಾಡಿವಡ್ಡರ (ಶಿಲ್ಪಕಲೆ ಕ್ಷೇತ್ರ)
ಗೋಕಾಕ್ ತಾಲೂಕಿನ ಕೊಣ್ಣೂರ ಪಟ್ಟಣದವರಾದ ಕಾಡಪ್ಪ ಅವರು ಕಡುಬಡತನದ ಹಿನ್ನೆಲೆಯಿಂದ ಬಂದು, ಕೇವಲ ಸ್ವಯಂ ಪರಿಶ್ರಮದಿಂದ ಶಿಲ್ಪಕಲೆಯಲ್ಲಿ ಮೇರು ಸಾಧನೆ ಮಾಡಿದ್ದಾರೆ. ಕಳೆದ 30 ವರ್ಷಗಳಲ್ಲಿ 60ಕ್ಕೂ ಅಧಿಕ ಭವ್ಯ ದೇವಸ್ಥಾನಗಳು, 5 ಮಹಾದ್ವಾರಗಳು ಹಾಗೂ ನೂರಾರು ದೇವರ ಮೂರ್ತಿಗಳನ್ನು ಕೆತ್ತುವ ಮೂಲಕ ಸಾಂಪ್ರದಾಯಿಕ ಶಿಲ್ಪಕಲೆಗೆ ಜೀವತುಂಬಿದ್ದಾರೆ. ಈ ಪ್ರಶಸ್ತಿಯನ್ನು ಅವರು ಸಂಪೂರ್ಣವಾಗಿ ಭಗವಂತನಿಗೆ ಅರ್ಪಿಸಿದ್ದಾರೆ.
#Belagavi #KarnatakaRajyotsavaAward #DrDSChougule #DrSujataJali #KadapPagaDivaddar #UdayakalaNews #KannadaAchievers #BellagaviNews

