Menu

ಮೋದಿ ಮಾಡಿದ್ರೆ ದೇಶೋದ್ಧಾರ, ಕಾಂಗ್ರೆಸ್ ರೈತರನ್ನು ಬದುಕಿಸಬಾರದೇ? ಹಾಲು ಬೆಲೆ ಏರಿಕೆ ಸಮರ್ಥಿಸಿದ ಪ್ರಿಯಾಂಕ್ 

ಉದಯಕಾಲ ನ್ಯೂಸ್, ಬೆಂಗಳೂರು: ಕೇಂದ್ರ ಬಿಜೆಪಿ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಗಗನಕ್ಕೇರಿಸಿದಾಗ ‘ದೇಶಕ್ಕಾಗಿ’ ಎಂದು ಸಮರ್ಥಿಸಿಕೊಳ್ಳುವ, ಜನಗಳೆದುರು ಕೂಗುವ ವಿರೋಧ ಪಕ್ಷದವರು, ರಾಜ್ಯ ಸರ್ಕಾರ ರೈತರ ಹಿತದೃಷ್ಟಿಯಿಂದ ಹಾಲಿನ ದರ ಏರಿಸಿದರೆ ಮಾತ್ರ ‘ಸಾಮಾನ್ಯರ ಮೇಲೆ ಬರೆ’ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ನಂದಿನಿ ಹಾಲಿನ ಪರಿಷ್ಕೃತ ದರ ಜಾರಿಗೆ ಬಂದ ಬೆನ್ನಲ್ಲೇ ಬಿಜೆಪಿ ಟೀಕೆಗಳಿಗೆ ದಿಟ್ಟ ತಿರುಗೇಟು ನೀಡಿದ್ದಾರೆ.

ರೈತರ ಬದುಕುಳಿಸಲು ಹಾಲಿನ ದರ ಹೆಚ್ಚಳ ಅನಿವಾರ್ಯ

ರಾಜ್ಯದಲ್ಲಿ ನಂದಿನಿ ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡು ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಹಲವು ವರ್ಷಗಳಿಂದ ಹಾಲಿನ ದರವನ್ನು ಹೆಚ್ಚಳ ಮಾಡಲಾಗಿರಲಿಲ್ಲ. ಜನಸಾಮಾನ್ಯರ ಮೇಲೆ ಹೊರೆಯಾಗಬಾರದು ಎಂಬ ಏಕೈಕ ಕಾರಣಕ್ಕಾಗಿ ರಾಜ್ಯ ಸರ್ಕಾರವು ದೀರ್ಘಕಾಲದಿಂದ ದರ ಏರಿಕೆಯನ್ನು ಮುಂದೂಡುತ್ತಾ ಬಂದಿತ್ತು ಎಂದು ಸ್ಪಷ್ಟಪಡಿಸಿದರು.

ಇತ್ತೀಚಿನ ದಿನಗಳಲ್ಲಿ ಜಾನುವಾರುಗಳ ಮೇವು, ಹಿಂಡಿ ಹಾಗೂ ಹೈನುಗಾರಿಕಾ ವೆಚ್ಚವು ತೀವ್ರವಾಗಿ ಏರಿಕೆಯಾಗಿದ್ದು, ಹೈನುಗಾರಿಕೆ ನಡೆಸುವುದು ರೈತರಿಗೆ ಕಷ್ಟಸಾಧ್ಯವಾಗಿತ್ತು. ಹೀಗಾಗಿ ರೈತರಿಗೆ ನೆರವು ನೀಡುವಂತೆ ವಿವಿಧ ರೈತ ಸಂಘಟನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಲೆ ಸತತವಾಗಿ ಒತ್ತಡ ಹೇರುತ್ತಿದ್ದವು. ಕಷ್ಟದಲ್ಲಿದ್ದ ರೈತರನ್ನು ಉಳಿಸಿ ಬೆಳೆಸುವ ನೈತಿಕ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಅವರು ಹೇಳಿದರು. ಅಲ್ಲದೆ, ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಇಂದಿಗೂ ನಂದಿನಿ ಹಾಲಿನ ದರವೇ ಅತ್ಯಂತ ಕಡಿಮೆಯಿದೆ ಎಂಬುದನ್ನು ವಿರೋಧಿಗಳು ಅರಿಯಬೇಕು ಎಂದರು.

ಕೇಂದ್ರದ ವಿರುದ್ಧ ವಾಗ್ದಾಳಿ: ‘ಮೋದಿ ಮಾಡಿದರೆ ಮಾಸ್ಟರ್ ಸ್ಟ್ರೋಕ್’

ಸಾಮಾನ್ಯ ಜನರ ಮೇಲಿನ ಆರ್ಥಿಕ ಹೊರೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ತಪ್ಪಾದ ಆರ್ಥಿಕ ನೀತಿಗಳೇ ನೇರ ಕಾರಣ ಎಂದು ಸಚಿವರು ಆರೋಪಿಸಿದರು. “ಪೆಟ್ರೋಲ್ ಬೆಲೆ 200 ರೂಪಾಯಿ ಮುಟ್ಟಿದರೂ ‘ದೇಶಕ್ಕೋಸ್ಕರ ಕೊಡುತ್ತೇವೆ’ ಎಂದು ಸಮರ್ಥಿಸಿಕೊಳ್ಳುತ್ತಿದ್ದ ಬಿಜೆಪಿಯವರು, ಈಗ ರೈತರ ಪರವಾಗಿ ನಿರ್ಧಾರ ಕೈಗೊಂಡರೆ ವಿರೋಧಿಸುತ್ತಿರುವುದು ಹಾಸ್ಯಾಸ್ಪದ” ಎಂದು ಕಿಡಿಕಾರಿದರು.

ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾತೈಲ ಖರೀದಿಸುತ್ತಿದ್ದರೂ ಕೇಂದ್ರ ಸರ್ಕಾರ ಆ ಲಾಭವನ್ನು ದೇಶದ ಜನರಿಗೆ ಏಕೆ ವರ್ಗಾಯಿಸುತ್ತಿಲ್ಲ ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, ಕೇಂದ್ರ ಸರ್ಕಾರ ಮೊದಲು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕಡಿಮೆ ಮಾಡಲಿ ಎಂದು ಆಗ್ರಹಿಸಿದರು. ಇಂಧನ ದರ ಇಳಿಕೆಯಾದರೆ ಸಾರಿಗೆ ಮತ್ತು ಸರಕು ಸಾಗಣೆ ವೆಚ್ಚ ತಾನಾಗಿಯೇ ಕಡಿಮೆಯಾಗಿ, ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆಗಳು ನಿಯಂತ್ರಣಕ್ಕೆ ಬರಲಿವೆ ಎಂದು ಅವರು ಅಭಿಪ್ರಾಯಪಟ್ಟರು.

#PriyankKharge #NandiniMilk #MilkPriceHike #CongressVsBJP #KarnatakaNews #UdayakalaNews #NarendraModi

Related Posts

Leave a Reply

Your email address will not be published. Required fields are marked *