ಉದಯಕಾಲ ನ್ಯೂಸ್,ಲಕ್ನೋ: ಹಿಂಸಾತ್ಮಕ ಮಾರ್ಗಗಳ ಮೂಲಕ ಆಡಳಿತ ಬದಲಾವಣೆಗೆ (Regime Change) ಕರೆ ನೀಡುವ ಅಥವಾ ಅಂತಹ ಅಶಾಂತಿ ಚಟುವಟಿಕೆಗಳಲ್ಲಿ ಭಾಗಿಯಾಗುವ ವ್ಯಕ್ತಿಗಳಿಗೆ ಇನ್ನು ಮುಂದೆ ಸರ್ಕಾರಿ ಉದ್ಯೋಗ ನೀಡದಿರಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಮಹತ್ವದ ಹಾಗೂ ಕಠಿಣ ನಿರ್ಧಾರ ಕೈಗೊಂಡಿದೆ. ಇತ್ತೀಚಿನ ಪ್ರತಿಭಟನೆಗಳ ವೇಳೆ ವ್ಯಕ್ತವಾದ ‘ಆಡಳಿತ ಬದಲಾವಣೆ’ಯ ಘೋಷಣೆಗಳು ಮೊಳಗಿದ ಬೆನ್ನಲ್ಲೇ, ಸರ್ಕಾರಿ ನೇಮಕಾತಿಗಳಲ್ಲಿ ಚಾರಿತ್ರ್ಯ ಪರಿಶೀಲನೆ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಸರ್ಕಾರದ ಈ ನೀತಿಗೆ ವಿರೋಧ ಪಕ್ಷಗಳಾದ ಸಮಾಜವಾದಿ ಪಕ್ಷ (SP) ಹಾಗೂ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
ಹೊಸ ಮಾರ್ಗಸೂಚಿ
ಅಲಹಾಬಾದ್ ಹೈಕೋರ್ಟ್ ನಿರ್ದೇಶನದ ಮೇರೆಗೆ ನೇಮಕಾತಿ ಮತ್ತು ಸಿಬ್ಬಂದಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ. ದೇವರಾಜ್ ಈ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಹಿಂಸಾತ್ಮಕ ಚಟುವಟಿಕೆಗಳ ಮೂಲಕ ಚುನಾಯಿತ ಸರ್ಕಾರವನ್ನು ಬೀಳಿಸಲು ಯತ್ನಿಸುವವರನ್ನು ಸಾರ್ವಜನಿಕ ಉದ್ಯೋಗದಿಂದ ಅನರ್ಹಗೊಳಿಸಲಾಗುವುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಅದೇ ಸಮಯದಲ್ಲಿ, ಅಭ್ಯರ್ಥಿಯ ಕೇವಲ ರಾಜಕೀಯ ಸಿದ್ಧಾಂತವನ್ನು ಆಧರಿಸಿ ಯಾರನ್ನೂ ಅನರ್ಹಗೊಳಿಸಲಾಗುವುದಿಲ್ಲ ಎಂಬ ಸ್ಪಷ್ಟನೆಯನ್ನೂ ನೀಡಲಾಗಿದೆ.
ಕೇವಲ ಎಫ್ಐಆರ್ ದಾಖಲಾದ ಮಾತ್ರಕ್ಕೆ ಅಥವಾ ತನಿಖೆ ಬಾಕಿ ಇದೆ ಎಂದ ಮಾತ್ರಕ್ಕೆ ಅಭ್ಯರ್ಥಿಯನ್ನು ಸ್ವಯಂಚಾಲಿತವಾಗಿ ಅನರ್ಹಗೊಳಿಸಲಾಗುವುದಿಲ್ಲ. ನ್ಯಾಯಾಲಯದಿಂದ ದೋಷಮುಕ್ತಗೊಂಡವರು, ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡ ಪ್ರಕರಣಗಳು ಮತ್ತು ಬಾಲಾಪರಾಧ ನ್ಯಾಯ ಕಾಯ್ದೆಯ ವ್ಯಾಪ್ತಿಗೆ ಬರುವ ಪ್ರಕರಣಗಳಿರುವ ಅಭ್ಯರ್ಥಿಗಳು ಅನರ್ಹತೆಗೆ ಒಳಪಡುವುದಿಲ್ಲ. ಚಾರಿತ್ರ್ಯ ಪರಿಶೀಲನಾ ವರದಿ ತಡವಾಗುತ್ತಿದೆ ಎಂಬ ಕಾರಣಕ್ಕೆ ನೇಮಕಾತಿ ಪತ್ರ ವಿಳಂಬ ಮಾಡದೆ, ಸ್ವಯಂ ಘೋಷಣಾಪತ್ರ ಪಡೆದು ತಾತ್ಕಾಲಿಕ ನೇಮಕಾತಿ ನೀಡಬಹುದು. ಆದರೆ ಸುಳ್ಳು ಮಾಹಿತಿ ದೃಢಪಟ್ಟರೆ ನೇಮಕಾತಿ ರದ್ದುಪಡಿಸಿ ಕಾನೂನು ಕ್ರಮ ಜರುಗಿಸಲಾಗುತ್ತದೆ.
ಪೊಲೀಸ್ ಪರಿಶೀಲನೆಗೆ 30 ದಿನಗಳ ಗಡುವು
ಹೊಸ ನಿಯಮಾವಳಿಗಳ ಅನ್ವಯ, ಜಿಲ್ಲಾ ಪೊಲೀಸ್ ಹಾಗೂ ಸ್ಥಳೀಯ ಗುಪ್ತಚರ ದಳ ಮನವಿ ಸ್ವೀಕರಿಸಿದ 30 ದಿನಗಳ ಒಳಗೆ ಚಾರಿತ್ರ್ಯ ಪರಿಶೀಲನಾ ವರದಿಯನ್ನು ಸಲ್ಲಿಸಬೇಕು. ಪರಿಶೀಲನೆಗಾಗಿ ಪೊಲೀಸರು ಮನೆಗೆ ಭೇಟಿ ನೀಡುವುದು ಕಡ್ಡಾಯವಲ್ಲ. ವರದಿ ನಕಾರಾತ್ಮಕವಾಗಿದ್ದರೆ, ಜಿಲ್ಲಾಧಿಕಾರಿಗಳು ಅಂತಿಮ ಶಿಫಾರಸು ಕಳುಹಿಸುವ ಮುನ್ನ ಅಭ್ಯರ್ಥಿಗೆ ತಮ್ಮ ವಾದ ಮಂಡಿಸಲು ಅವಕಾಶ ನೀಡಬೇಕಾಗುತ್ತದೆ.
ವಿಪಕ್ಷಗಳಿಂದ ತೀವ್ರ ವಿರೋಧ
ಯೋಗಿ ಸರ್ಕಾರದ ಈ ನಿರ್ಧಾರವನ್ನು ಬ್ರಿಟಿಷ್ ಆಡಳಿತಕ್ಕೆ ಹೋಲಿಸಿ ಸಮಾಜವಾದಿ ಪಕ್ಷ ವಾಗ್ದಾಳಿ ನಡೆಸಿದೆ. ಸ್ವತಂತ್ರ ಭಾರತದಲ್ಲಿ ಪ್ರತಿಭಟಿಸುವ ಸಾಂವಿಧಾನಿಕ ಹಕ್ಕನ್ನು ದಮನ ಮಾಡಲು ಸರ್ಕಾರ ಹೆದರಿಕೆಯ ವಾತಾವರಣ ಸೃಷ್ಟಿಸುತ್ತಿದೆ ಎಂದು ಎಸ್ಪಿ ಟೀಕಿಸಿದೆ. ಕಾಂಗ್ರೆಸ್ ಹಿರಿಯ ನಾಯಕ ರಶೀದ್ ಆಳ್ವಿ ಪ್ರತಿಕ್ರಿಯಿಸಿ, ಸರ್ಕಾರವೇ ನ್ಯಾಯಾಧೀಶರಂತೆ ವರ್ತಿಸುತ್ತಿದೆ ಎಂದು ಕಟುವಾಗಿ ಆಕ್ಷೇಪಿಸಿದ್ದಾರೆ.
#YogiAdityanath #UPGovernment #GovernmentJobs #CharacterVerification #RegimeChange #AkhileshYadav #Congress #UdayakalaNews #UttarPradeshNews


