Wednesday, October 28, 2026
Menu

ಸಿನಿಮಾ ಟಿಕೆಟ್ ಮೇಲೆ ಶೇ. 2ರಷ್ಟು ಸೆಸ್: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸು

ಉದಯಕಾಲ ನ್ಯೂಸ್, ಬೆಂಗಳೂರು: ರಾಜ್ಯ ಸರ್ಕಾರದ ವಿವಾದಿತ ‘ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕಲ್ಯಾಣ) ಕಾಯ್ದೆ, 2024’ ಹಾಗೂ 2026ರ ತಿದ್ದುಪಡಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಮತ್ತು ಪ್ರತ್ಯೇಕ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಅಧಿಕೃತವಾಗಿ ನೋಟಿಸ್ ಜಾರಿ ಮಾಡಿದೆ. ಈ ಮೂಲಕ ಚಿತ್ರಮಂದಿರಗಳ ಟಿಕೆಟ್ ದರಗಳ ಮೇಲೆ ಶೇ. 2ರಷ್ಟು ಸೆಸ್ (ಕರ) ವಿಧಿಸುವ ಸರ್ಕಾರದ ನಿರ್ಧಾರದ ವಿರುದ್ಧದ ಕಾನೂನು ಸಮರ ಮತ್ತಷ್ಟು ತೀವ್ರಗೊಂಡಿದೆ.

ಅರ್ಜಿದಾರರ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಬಂದ ಬಳಿಕ ರಾಜ್ಯ ಮಟ್ಟದಲ್ಲಿ ಮನರಂಜನಾ ತೆರಿಗೆ ಅಥವಾ ಪ್ರತ್ಯೇಕ ಕರವನ್ನು ವಿಧಿಸುವುದಕ್ಕೆ ಅವಕಾಶವಿರುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

2026ರ ತಿದ್ದುಪಡಿ ಕಾಯ್ದೆ ಹಾಗೂ 2025ರ ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ನಿಯಮಗಳಡಿರುವ ನಿಯಮ 2(1)(ಸಿ), ನಿಯಮ 8(2), ನಿಯಮ 10 ಹಾಗೂ ನಿಯಮ 11ಗಳು ಸಂವಿಧಾನಬಹಿರವಾಗಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಚಲನಚಿತ್ರ ನಿರ್ಮಾಪಕರು, ಕಲಾವಿದರು ಹಾಗೂ ಪ್ರೇಕ್ಷಕರ ಮೇಲೆ ಇದು ಗಂಭೀರ ಸ್ವರೂಪದ ಹೆಚ್ಚುವರಿ ಆರ್ಥಿಕ ಹೊರೆಯನ್ನು ಹೇರಲಿದೆ ಎಂದು ದೂರಲಾಗಿದೆ.

ಮಧ್ಯಂತರ ತಡೆಯಾಜ್ಞೆಗೆ ಬೇಡಿಕೆ

ಪ್ರಕರಣದ ಅಂತಿಮ ತೀರ್ಪು ಬರುವವರೆಗೆ ವಿವಾದಿತ ಅಧಿಸೂಚನೆಗಳ ಜಾರಿಗೆ ತಕ್ಷಣವೇ ಮಧ್ಯಂತರ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಸ್ಯಾಂಡಲ್‌ವುಡ್ ಚಲನಚಿತ್ರ ರಂಗ ಹಾಗೂ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್‌ಗಳು ಈ ನೂತನ ಕಾಯ್ದೆಯ ಕಾನೂನುಬದ್ಧತೆಯನ್ನು ಪ್ರಶ್ನಿಸಿದ್ದು, ಚಿತ್ರರಂಗದ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ನ್ಯಾಯಾಲಯದ ಮುಂದಿನ ವಿಚಾರಣೆಯಲ್ಲಿ ಸರ್ಕಾರದ ನಿಲುವು ಹಾಗೂ ಹೈಕೋರ್ಟ್ ನೀಡಲಿರುವ ಮಧ್ಯಂತರ ಆದೇಶವೇನು ಎಂಬುದನ್ನು ಕಾದು ನೋಡಬೇಕಿದೆ.

#KarnatakaHighCourt #Sandalwood #CinemaCess #KarnatakaGovernment #LegalNews #UdayakalaNews

Related Posts

Leave a Reply

Your email address will not be published. Required fields are marked *