Menu

 ರೈತರನ್ನು ವಿಶ್ವಾಸಕ್ಕೆ ಪಡೆಯಲು ಸಕ್ಕರೆ ಕಾರ್ಖಾನೆ ಮಾಲೀಕರು ವಿಫಲ: ಸಿಎಂ ಡಿಕೆಶಿ ಅಸಮಾಧಾನ

ಉದಯಕಾಲ ನ್ಯೂಸ್, ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡೆಸಿದ ಮಹತ್ವದ ಸಭೆ ಮುಕ್ತಾಯಗೊಂಡಿದೆ. ರೈತರ ಬೇಡಿಕೆಗಳಿಗೆ ಸ್ಪಂದಿಸುವಲ್ಲಿ ಮತ್ತು ಅವರನ್ನು ವಿಶ್ವಾಸಕ್ಕೆ ಪಡೆಯುವಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ವಿಫಲರಾಗಿದ್ದಾರೆ ಎಂದು  ಡಿ.ಕೆ. ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2 ಗಂಟೆಗೂ ಅಧಿಕ ಕಾಲ ನಡೆದ ಸುದೀರ್ಘ ಸಭೆ

ಸುವರ್ಣ ವಿಧಾನಸೌಧದಲ್ಲಿ ನಡೆದ ಈ ಉನ್ನತ ಮಟ್ಟದ ಸಭೆಯು ಸುಮಾರು 2 ಗಂಟೆಗೂ ಅಧಿಕ ಕಾಲ ಜರುಗಿತು. ಸಭೆಯಲ್ಲಿ ಪ್ರಮುಖ ಸಚಿವರಾದ ಎಂ.ಬಿ. ಪಾಟೀಲ್, ಸತೀಶ ಜಾರಕಿಹೊಳಿ, ಎಸ್.ಎಸ್. ಮಲ್ಲಿಕಾರ್ಜುನ, ಲಕ್ಷ್ಮಣ ಸವದಿ, ಚೆಲುವರಾಯಸ್ವಾಮಿ, ಸಂತೋಷ ಲಾಡ್, ರುದ್ರಪ್ಪ ಲಮಾಣಿ ಹಾಗೂ ಡಾ. ಪ್ರಭಾಕರ ಕೋರೆ, ಸಂಗಮೇಶ ನಿರಾಣಿ, ಶ್ರೀಮಂತ ಪಾಟೀಲ್, ಅಜಯ್ ಕುಮಾರ ಸರನಾಯಕ್ ಸೇರಿ 81 ಕಾರ್ಖಾನೆಗಳ ಮಾಲೀಕರು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಸಿಎಂ ಡಿ.ಕೆ. ಶಿವಕುಮಾರ್ ನೀಡಿದ ಪ್ರಮುಖ ಸೂಚನೆಗಳು

ಕಾರ್ಖಾನೆಗಳಿಲ್ಲದಿದ್ದರೆ ರೈತರಿಗೆ ತೊಂದರೆ, ರೈತರ ಇಲ್ಲದಿದ್ದರೆ ಕಾರ್ಖಾನೆಗಳಿಲ್ಲ. ಸರ್ಕಾರ ಯಾರ ಪರವೂ ಇಲ್ಲದೆ ಇಬ್ಬರ ರಕ್ಷಣೆ ಮಾಡಬೇಕಿದೆ. ಹೀಗಾಗಿ ಕಾರ್ಖಾನೆ ಮಾಲೀಕರು ಹೃದಯ ಶ್ರೀಮಂತಿಕೆ ತೋರಿ, ಹೊರೆಯಾದರೂ ಸರಿ ಒಂದು ಸೌಹಾರ್ದಯುತ ಪರಿಹಾರಕ್ಕೆ ಬರಬೇಕು ಎಂದು ಸಲಹೆ ನೀಡಿದರು.ಎಥನಾಲ್, ಮೊಲಾಸಿಸ್ ಹಾಗೂ ಸಕ್ಕರೆ ಬೆಲೆ ನಿಗದಿಗೆ ಸಂಬಂಧಿಸಿದಂತೆ ರಾಷ್ಟ್ರ ಮಟ್ಟದಲ್ಲಿ ತೀರ್ಮಾನವಾಗಬೇಕಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರೊಂದಿಗೆ ಚರ್ಚಿಸಲಾಗಿದ್ದು, ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿ ಒತ್ತಡ ತರಲಾಗುವುದು.

ಕಳೆದ 10 ವರ್ಷಗಳಿಂದ ಸಕ್ಕರೆ ಬೆಲೆ ಏರಿಕೆಯಾಗಿಲ್ಲ, ಕಬ್ಬು ಇಳುವರಿಯೂ ಕಡಿಮೆಯಾಗಿದೆ. ಪ್ರತಿ ಟನ್ ಕಬ್ಬಿಗೆ ರೂ. 6,000 ವರೆಗೆ ಬೆಲೆ ನಿಗದಿ ಮಾಡಲು ರೈತರು ಮನವಿ ಮಾಡಿದ್ದಾರೆ. ಇದಕ್ಕೆ ಸಕ್ಕರೆ ಕಾರ್ಖಾನೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ಸೂಕ್ತ ಪರಿಹಾರ ಕಂಡುಹಿಡಿಯಬೇಕು. ಕಳೆದ ಬಾರಿಯಂತೆ ವಾಹನಗಳಿಗೆ ಬೆಂಕಿ ಹಚ್ಚುವಂತಹ ಅಹಿತಕರ ಘಟನೆಗಳು ಮರುಕಳಿಸಬಾರದು, ರಾಜ್ಯದಲ್ಲಿ ಶಾಂತಿ ಕಾಪಾಡುವುದು ಸರ್ಕಾರದ ಕರ್ತವ್ಯ.
ಇದು ರಾಜಕಾರಣ ಮಾಡುವ ವೇದಿಕೆಯಲ್ಲ.ರೈತರು ಹಾಗೂ ಕಾರ್ಖಾನೆ ಮಾಲೀಕರಿಬ್ಬರ ಬದುಕೂ ನಮಗೆ ಮುಖ್ಯ. ಎಲ್ಲರ ಜೊತೆ ಚರ್ಚಿಸಿ ಸೌಹಾರ್ದಯುತ ತೀರ್ಮಾನಕ್ಕೆ ಬರಲಾಗುವುದು ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಸಂಗಮೇಶ ನಿರಾಣಿ ಪ್ರತಿಕ್ರಿಯೆ

ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕಾರ್ಖಾನೆ ಮಾಲೀಕ ಸಂಗಮೇಶ ನಿರಾಣಿ, ರೈತರು, ಕಾರ್ಖಾನೆಗಳು ಹಾಗೂ ಸರ್ಕಾರದ ನಡುವೆ ಸಮನ್ವಯತೆ ಕಾಪಾಡುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ. ಸಂಜೆ ಮತ್ತೊಮ್ಮೆ ಸಭೆ ನಡೆಯಲಿದ್ದು, ಸೌಹಾರ್ದಯುತ ಪರಿಹಾರ ದೊರೆಯುವ ವಿಶ್ವಾಸವಿದೆ ಎಂದಿದ್ದಾರೆ.
#Udayakala #KarnatakaNews #CMDKShivakumar #SugarcaneFarmers #Belagavi #SuvarnaSoudha #KarnatakaPolitics #FarmerProtest #SugarcanePrice #BelagaviNews

Related Posts

Leave a Reply

Your email address will not be published. Required fields are marked *