Thursday, October 22, 2026
Menu

ಜನಮನ ಗೆದ್ದ ಪಂಜು ಕವಾಯತು, ಬೈಕ್ ಸಾಹಸ: ಮೈಸೂರು ದಸರಾಗೆ ವರ್ಣರಂಜಿತ ತೆರೆ

ಉದಯಕಾಲ ನ್ಯೂಸ್, ಮೈಸೂರು: ಕಣ್ಣುಕೋರೈಸುವ ಪಂಜಿನ ಕವಾಯತು, ಆಕಾಶದಲ್ಲಿ ಮಿನುಗಿದ ಅಚ್ಚರಿಯ ಡ್ರೋನ್‌ಗಳು, ಮೈಜುಂ ಎನ್ನಿಸುವ ಮಿಲಿಟರಿ ಬೈಕ್ ಸಾಹಸ ಹಾಗೂ ಭರಾಟೆಯ ಬಾಣಬಿರುಸಿನ ಸಂಭ್ರಮದೊಂದಿಗೆ 2026ರ ಐತಿಹಾಸಿಕ ನಾಡ ದಸರಾ ಮಹೋತ್ಸವಕ್ಕೆ ಬನ್ನಿಮಂಟಪ ಮೈದಾನದಲ್ಲಿ ವರ್ಣರಂಜಿತ ತೆರೆ ಬಿದ್ದಿತು.

ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಯ ಮುಕ್ತಾಯದ ಬಳಿಕ ಬನ್ನಿಮಂಟಪದ ಪರೇಡ್ ಮೈದಾನದಲ್ಲಿ ನಡೆದ ಭವ್ಯ ಸಮಾರೋಪ ಸಮಾರಂಭವು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.

ಆಕಾಶದಲ್ಲಿ ಮಿನುಗಿದ 3500 ಡ್ರೋನ್‌ಗಳ ಚಮತ್ಕಾರ
ಈ ಬಾರಿಯ ದಸರಾ ಪಂಜಿನ ಕವಾಯತಿನ ಪ್ರಮುಖ ಆಕರ್ಷಣೆಯಾಗಿದ್ದ ಡ್ರೋನ್ ಶೋ ನೋಡುಗರನ್ನು ನಿಬ್ಬೆರಗಾಗಿಸಿತು. ಕಗ್ಗತ್ತಲಿನ ಮುಗಿಲಿನಲ್ಲಿ ಏಕಕಾಲಕ್ಕೆ ಹಾರಿದ 3500 ಡ್ರೋನ್‌ಗಳು ಬಣ್ಣಬಣ್ಣದ ಎಲ್‌ಇಡಿ ದೀಪಗಳ ಮೂಲಕ 12 ವಿಭಿನ್ನ ಆಕರ್ಷಕ ವಿನ್ಯಾಸಗಳನ್ನು ಮೂಡಿಸಿದವು. ಗ್ಯಾಲಕ್ಸಿ, ಸೈನಿಕ, ರಾಷ್ಟ್ರೀಯ ಪಕ್ಷಿ ನವಿಲು, ಸಿಂಹ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳು, ಸುದರ್ಶನ ಚಕ್ರ, ಶಿವತಾಂಡವದ ದೃಶ್ಯಾವಳಿಗಳ ಜತೆಗೆ ಮೈಸೂರಿನ ಐತಿಹಾಸಿಕ ನಂದಿ ವಿಗ್ರಹ, ಚಿನ್ನದ ಅಂಬಾರಿ ಮತ್ತು ತಾಯಿ ಚಾಮುಂಡೇಶ್ವರಿ ದೇವಿಯ ದಿವ್ಯ ರೂಪಗಳು ಆಗಸದಲ್ಲಿ ಮಿನುಗಿ ಎಲ್ಲರ ಕಣ್ಮನ ಸೆಳೆದವು.

ರೋಮಾಂಚನಕಾರಿ ಬೈಕ್ ಸ್ಟಂಟ್ಸ್ ಮತ್ತು ಟೆಂಟ್ ಪೆಗ್ಗಿಂಗ್
ಕಳೆದ ಬಾರಿ ಬೈಕ್ ಸ್ಟಂಟ್ಸ್ ಇಲ್ಲದೆ ನಿರಾಸೆಗೊಂಡಿದ್ದ ಕ್ರೀಡಾಭಿಮಾನಿಗಳಿಗೆ ಈ ಬಾರಿ ಮಿಲಿಟರಿ ಪೊಲೀಸ್ ಪಡೆ ಭರ್ಜರಿ ಮನರಂಜನೆ ನೀಡಿತು. ಮೇಜರ್ ಅಮೃತ್ ಪೊಂಡ ನೇತೃತ್ವದಲ್ಲಿ ನಡೆದ 22 ಬೈಕ್‍ಗಳ ರೋಚಕ ಸಾಹಸ ಪ್ರದರ್ಶನ ಮೈಜುಂ ಎನ್ನಿಸಿತು. ಇದರ ಜತೆಗೆ, ಮೈಸೂರು ನಗರ ಅಶ್ವಾರೋಹಿ ದಳದ ಸಿಬ್ಬಂದಿ ಶರಣಪ್ಪ ಡಿ. ಸಾಸನೂರ ನೇತೃತ್ವದಲ್ಲಿ ನಡೆಸಿದ ಕೋ ಜಂಪಿಂಗ್, ವೈರ್ ಜಂಪಿಂಗ್ ಮತ್ತು ಟೆಂಟ್ ಪೆಗ್ಗಿಂಗ್ ಸಾಹಸಗಳು ಎದೆ ಝಲ್ ಎನಿಸುವಂತೆ ಮಾಡಿತು. ಕುದುರೆ ಸವಾರರು 60 ಕಿ.ಮೀ ವೇಗದಲ್ಲಿ ಬಂದು ನೆಲದಲ್ಲಿದ್ದ ಉರಿಯುವ ಗೂಟಗಳನ್ನು ಈಟಿಯಿಂದ ಕಿತ್ತೊಯ್ದ ಸಾಹಸ ಪ್ರೇಕ್ಷಕರ ಹುಬ್ಬೇರಿಸುವಂತೆ ಮಾಡಿತು.

ಪಂಜಿನ ಆಕೃತಿಗಳು ಮತ್ತು ಪಥ ಸಂಚಲನ
ಪೊಲೀಸ್ ತರಬೇತಿ ಶಾಲೆಯ 300 ಪ್ರಶಿಕ್ಷಣಾರ್ಥಿಗಳು 600 ಪಂಜುಗಳನ್ನು ಹಿಡಿದು ಬ್ಯಾಂಡ್ ಹಿಮ್ಮೇಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ‘ಡ್ರಗ್ಸ್ ಬೇಡ ಬ್ರೋ’, ‘ಸಂವಿಧಾನವೇ ಶಕ್ತಿ’, ‘ಜೈ ಅಭಿಮನ್ಯು’, ‘ಜೈ ಕರ್ನಾಟಕ ಪೊಲೀಸ್’, ‘ದೇವನವಿ ಕಾವೇರಿ’, ‘ಹ್ಯಾಪಿ ದಸರಾ’ ಸೇರಿದಂತೆ ವಿವಿಧ ಅರ್ಥಪೂರ್ಣ ಅಕ್ಷರಾಕೃತಿಗಳನ್ನು ಸೃಷ್ಟಿಸಿದರು. ಎನ್‌ಸಿಸಿ, ಸ್ಕೌಟ್ಸ್ ಅಂಡ್ ಗೈಡ್ಸ್, ಕೆಎಸ್‌ಆರ್‌ಪಿ ಸೇರಿದಂತೆ ಒಟ್ಟು 18 ತುಕಡಿಗಳ ಆಕರ್ಷಕ ಪಥ ಸಂಚಲನ ಮೆರಗು ತಂದಿತು.

ಗಣ್ಯರ ಉಪಸ್ಥಿತಿ
ನೂತನ ರಾಜ್ಯಪಾಲೆ ಡಾ. ಸುಧಾ ಯಾದವ್ ಅವರು ಪ್ರಥಮ ಬಾರಿಗೆ ದಸರಾ ಪಂಜಿನ ಕವಾಯತು ಕಾರ್ಯಕ್ರಮಕ್ಕೆ ಆಗಮಿಸಿ ಗೌರವ ವಂದನೆ ಸ್ವೀಕರಿಸಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಡಿಸಿಎಂ ಡಾ.ಜಿ. ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಸಚಿವ ಶಿವರಾಜ್ ತಂಗಡಗಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಅಲ್ಲದೆ, ಬೆಲ್ಜಿಯಂ, ಇಸ್ರೇಲ್, ಆಸ್ಟ್ರೇಲಿಯಾ, ಬ್ರಿಟನ್, ಅಮೆರಿಕ ಸೇರಿದಂತೆ ನಾನಾ ದೇಶಗಳ ರಾಜತಾಂತ್ರಿಕ ಅಧಿಕಾರಿಗಳು ಭಾಗವಹಿಸಿ ದಸರಾ ಸಂಭ್ರಮಕ್ಕೆ ಸಾಕ್ಷಿಯಾದರು.
#MysuruDasara2026 #DasaraGrandFinale #PanjinaKavayathu #DroneShow #MysuruDasara #BikeStunts #UdayakalaNews #KarnatakaNews #MysuruDiaries #DasaraParade

Related Posts

Leave a Reply

Your email address will not be published. Required fields are marked *