ಉದಯಕಾಲ ನ್ಯೂಸ್, ಬೆಂಗಳೂರು: ಕರ್ನಾಟಕ ಸರ್ಕಾರದ ಆಡಳಿತ ಶಕ್ತಿ ಕೇಂದ್ರವಾದ ಐತಿಹಾಸಿಕ ವಿಧಾನಸೌಧದ ಕಟ್ಟಡದಲ್ಲಿ ಬಾಂಬ್ ಸ್ಫೋಟವಾದಂತೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಸುಳ್ಳು ವಿಡಿಯೋ ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಬಿಹಾರ ಮೂಲದ ವಲಸೆ ಕಾರ್ಮಿಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಿಹಾರದ ಅರಾರಿಯಾ ಜಿಲ್ಲೆಯ ನಿವಾಸಿ ಅಲಿ (25) ಬಂಧಿತ ಆರೋಪಿ. ಈತ ಕಳೆದ ಕೆಲವು ತಿಂಗಳುಗಳಿಂದ ಬೆಂಗಳೂರಿನಲ್ಲೇ ವಾಸವಿದ್ದು, ಪೈಪ್ ಫಿಟ್ಟರ್ ಆಗಿ ದಿನಗೂಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಯ ಹಿನ್ನೆಲೆ
ಅಕ್ಟೋಬರ್ 20 ರಂದು ಬೆಳಿಗ್ಗೆ ‘jnx__king__h_g’ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಧಾನಸೌಧ ಸ್ಫೋಟದ ಆತಂಕಕಾರಿ ವಿಡಿಯೋ ಅಪ್ಲೋಡ್ ಆಗಿತ್ತು. ವಿಡಿಯೋದ ಆರಂಭದಲ್ಲಿ ವಿಧಾನಸೌಧದ ಮುಂಭಾಗದ ನೈಜ ದೃಶ್ಯಗಳನ್ನು ತೋರಿಸಲಾಗಿದ್ದು, ತದನಂತರ ಎಐ ತಂತ್ರಜ್ಞಾನ ಬಳಸಿ ಕಟ್ಟಡದಲ್ಲಿ ಭಾರಿ ಸ್ಫೋಟ ಸಂಭವಿಸಿದಂತೆ ಸುಳ್ಳು ದೃಶ್ಯಾವಳಿಯನ್ನು ಸೃಷ್ಟಿಸಲಾಗಿತ್ತು. ಅಲ್ಲದೆ, “ಬಾಂಬ್‌ನಿಂದ ವಿಧಾನಸೌಧವನ್ನು ಸ್ಫೋಟಿಸಲಾಗಿದೆ” ಎಂಬ ಪ್ರಚೋದನಾಕಾರಿ ಅಡಿಬರಹವನ್ನು ಬರೆಯಲಾಗಿತ್ತು.
ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಟ್ಟಿದ್ದ ಪೊಲೀಸರ ಗಮನಕ್ಕೆ ಈ ವಿಡಿಯೋ ಬರುತ್ತಿದ್ದಂತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಯಿತು. ಸಾರ್ವಜನಿಕರಲ್ಲಿ ಭೀತಿ ಹಾಗೂ ಸುಳ್ಳು ಸುದ್ದಿ ಹರಡಿದ ಹಿನ್ನೆಲೆಯಲ್ಲಿ ವಿಧಾನಸೌಧ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಅವರು ನೀಡಿದ ದೂರಿನ ಮೇರೆಗೆ, ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 353(1)(B) ಮತ್ತು 353(2) ರಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಯಿತು.
ಮಿಂಚಿನ ಕಾರ್ಯಾಚರಣೆ
ತಾಂತ್ರಿಕ ಸುಳಿವುಗಳಾಧಾರಿತ ಕಾರ್ಯಾಚರಣೆ ನಡೆಸಿದ ವಿಧಾನಸೌಧ ಠಾಣೆ ಪೊಲೀಸರು, ವಿಡಿಯೋ ಅಪ್ಲೋಡ್ ಮಾಡಿದ್ದ ಆರೋಪಿ ಅಲಿಯಾಸ್ ಅಲಿ ಯನ್ನು ಬೆಂಗಳೂರಿನಲ್ಲೇ ಹೆಡೆಮುರಿ ಕಟ್ಟಿದ್ದಾರೆ. ಇಂತಹ ನಕಲಿ ಹಾಗೂ ಭಯ ಹುಟ್ಟಿಸುವ ವಿಡಿಯೋಗಳನ್ನು ಸೃಷ್ಟಿಸುವುದರ ಹಿಂದಿನ ಅಸಲಿ ಉದ್ದೇಶವೇನು? ಇದರ ಹಿಂದೆ ಬೇರೆ ಯಾರದ್ದಾದರೂ ಕೈವಾಡವಿದೆಯೇ ಎಂಬುದರ ಕುರಿತು ಪೊಲೀಸರು ತೀವ್ರ ವಿಚಾರಣೆ ಮುಂದುವರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಹಾಗೂ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
#VidhanaSoudha #AIVideo #BengaluruPolice #CyberCrime #UdayakalaNews #KarnatakaNews #FakeNewsArrest #BreakingNews #BengaluruCrime

