Wednesday, October 21, 2026
Menu

ಸುಂದರ ಹಸಿರು ಸೀರೆಯಲ್ಲಿ ತಾಯಿ ಚಾಮುಂಡೇಶ್ವರಿ, ಚಿನ್ನದಂಬಾರಿ ಹೊರಲಿರುವ ಕ್ಯಾಪ್ಟನ್ ಪ್ರಶಾಂತ!

ಉದಯಕಾಲ ನ್ಯೂಸ್, ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅತ್ಯಂತ ರೋಮಾಂಚಕ ಹಾಗೂ ಅಂತಿಮ ಘಟ್ಟವಾದ ವಿಶ್ವಪ್ರಸಿದ್ಧ ‘ಜಂಬೂಸವಾರಿ’ (Jamboo Savari) ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ಮೈಸೂರಿನ ರಾಜಬೀದಿಗಳಲ್ಲಿ ಸಂಭ್ರಮದ ಅಲೆ ಮೂಡಿದ್ದು, ಭಕ್ತರ ಕಣ್ಮನ ಸೆಳೆಯಲು ದೇವಿಯ ಮೆರವಣಿಗೆ ಸಿದ್ಧಗೊಂಡಿದೆ.

ಇಂದು ಬೆಳಿಗ್ಗೆಯಿಂದಲೇ ಐತಿಹಾಸಿಕ ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ವಿಶೇಷ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು. ಈ ಬಾರಿ ಪವಿತ್ರವಾದ ಹಸಿರು ಸೀರೆಯಲ್ಲಿ ಕಂಗೊಳಿಸುತ್ತಿರುವ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯಲು ಸಹಸ್ರಾರು ಭಕ್ತರು ಸಾಗರೋಪಾದಿಯಲ್ಲಿ ಹರಿದುಬಂದಿದ್ದಾರೆ. ವಿಶೇಷ ತೆರೆದ ವಾಹನದಲ್ಲಿ, ಮಂಗಳವಾದ್ಯಗಳ ಮೇಳದೊಂದಿಗೆ ಉತ್ಸವ ಮೂರ್ತಿಯು ಮೈಸೂರು ಅರಮನೆಯತ್ತ ಮೆರವಣಿಗೆಯಲ್ಲಿ ಸಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ನಿಂತು ಭಕ್ತರು ತಾಯಿಗೆ ಕೈಮುಗಿದು ನಮಿಸುತ್ತಿದ್ದಾರೆ.

ಚಿನ್ನದಂಬಾರಿ ಹೊರಲಿರುವಕ್ಯಾಪ್ಟನ್ ಪ್ರಶಾಂತ

ಮೈಸೂರು ದಸರೆಯ ಗಜಪಯಣದ ಪ್ರಮುಖ ಆಕರ್ಷಣೆಯಾಗಿರುವ ಅಂಬಾರಿ ಹೊರಡುವ ಜವಾಬ್ದಾರಿಯನ್ನು ಈ ಬಾರಿ ಪ್ರಶಾಂತ ಆನೆ ವಹಿಸಿಕೊಂಡಿದೆ. ಕಳೆದ 18 ವರ್ಷಗಳಿಂದ ಜಂಬೂಸವಾರಿಯಲ್ಲಿ ತಪ್ಪದೆ ಪಾಲ್ಗೊಂಡು ಬಂದಿರುವ ಪ್ರಶಾಂತ, ಇದೇ ಮೊದಲ ಬಾರಿಗೆ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಹೆಜ್ಜೆಯಿಡಲು ಸಂಪೂರ್ಣ ಸಿದ್ಧನಾಗಿದ್ದಾನೆ.

ಗಜಪಡೆಗೆ ಬಣ್ಣ-ಬಣ್ಣದ ಚಿತ್ತಾರಗಳಿಂದ ಭವ್ಯವಾದ ಅಲಂಕಾರ ಮಾಡುವ ಕಾರ್ಯವು ಖ್ಯಾತ ಕಲಾವಿದ ನಾಗಲಿಂಗಸ್ವಾಮಿ ನೇತೃತ್ವದ ತಂಡದಿಂದ ಅತ್ಯಂತ ಅಂದವಾಗಿ ಮೂಡಿಬರುತ್ತಿದೆ.

ಈ ಬಾರಿಯ ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಒಟ್ಟು 13 ಆನೆಗಳ ಪೈಕಿ 12 ಗಜಪಡೆ ಗಾಂಭೀರ್ಯದಿಂದ ಹೆಜ್ಜೆ ಹಾಕಲಿವೆ

ಅಂಬಾರಿ ಆನೆ ಕ್ಯಾಪ್ಟನ್ ಪ್ರಶಾಂತ (ಮೊದಲ ಬಾರಿಗೆ ಚಿನ್ನದಂಬಾರಿ ಹೊರಲಿರುವ ಸಾಹಸಿ)
ನಿಶಾನೆ ಆನೆ: ಅನುಭವಿ ಅಭಿಮನ್ಯು
ಕುಮ್ಕಿ ಆನೆಗಳು: ಲಕ್ಷ್ಮಿ ಮತ್ತು ಕಾವೇರಿ
ಸಾಮೂಹಿಕ ಸಾಲಾನೆಗಳು: ಗೋಪಿ, ನೌಪತ್, ಶ್ರೀಕಂಠ, ಏಕಲವ್ಯ, ಮಹೇಂದ್ರ, ಸುಗ್ರೀವ, ಶ್ರೀರಾಮ, ರೂಪಾ ಹಾಗೂ ಚೈತ್ರಾ.
(ಸೂಚನೆ: ಈ ಬಾರಿ ಧನಂಜಯ ಆನೆಗೆ ಮೆರವಣಿಗೆಯಿಂದ ವಿಶ್ರಾಂತಿ ನೀಡಲಾಗಿದೆ)

ಮೈಸೂರು ಅರಮನೆಯ ಒಳಾವರಣದಿಂದ ಬನ್ನಿಮಂಟಪದವರೆಗೆ ಸಾಗುವ ಈ ಐತಿಹಾಸಿಕ ಜಂಬೂಸವಾರಿ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ನಾಡಿನ ಮೂಲೆಮೂಲೆಗಳಿಂದ ಮಾತ್ರವಲ್ಲದೆ, ದೇಶ-ವಿದೇಶಗಳಿಂದಲೂ ಲಕ್ಷಾಂತರ ಪ್ರವಾಸಿಗರು ಮೈಸೂರಿಗೆ ಆಗಮಿಸಿದ್ದು, ದಸರಾ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ.
#MysuruDasara2026 #JambooSavari #Chamundeshwari #KaptainPrashanth #UdayakalaNews #MysuruPalace #KarnatakaCulture #DasaraFestival

Related Posts

Leave a Reply

Your email address will not be published. Required fields are marked *