Saturday, October 17, 2026
Menu

ಮಕ್ಕಳೂ ಸೇರಿ ಪ್ರತಿಯೊಬ್ಬರಿಗೂ ಇಂಟರ್ನೆಟ್ ಬಳಕೆ ಮೂಲಭೂತ ಹಕ್ಕು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

ಉದಯಕಾಲ ನ್ಯೂಸ್, ನವದೆಹಲಿ: ಇಂಟರ್ನೆಟ್ ಬಳಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ಹಾಗೂ ಐತಿಹಾಸಿಕ ತೀರ್ಪೊಂದನ್ನು ಪ್ರಕಟಿಸಿದೆ. ಸಂವಿಧಾನದ ವಿಧಿ 21 (ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ) ಹಾಗೂ ವಿಧಿ 19(1)(ಎ) (ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ) ಅಡಿಯಲ್ಲಿ ಇಂಟರ್ನೆಟ್‌ ಪ್ರವೇಶಿಸುವುದು ಮತ್ತು ಬಳಸುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು ಎಂದು ನ್ಯಾಯಾಲಯ ಘೋಷಿಸಿದೆ. ವಿಶೇಷವಾಗಿ ಮಕ್ಕಳಿಗೂ ಇದೇ ಹಕ್ಕಿನ ರಕ್ಷಣೆ ಲಭ್ಯವಿದ್ದು, ಆನ್‌ಲೈನ್ ಜಗತ್ತಿನಲ್ಲಿರುವ ಅಪಾಯಗಳ ಕಾರಣ ನೀಡಿ ಮಕ್ಕಳಿಂದ ಈ ಹಕ್ಕನ್ನು ಸಂಪೂರ್ಣವಾಗಿ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

‘ಸುರಕ್ಷತೆಯ ಹಿತದೃಷ್ಟಿಯಿಂದ ಮಕ್ಕಳನ್ನು ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳಿಂದ ಸಂಪೂರ್ಣವಾಗಿ ದೂರವಿಡಬೇಕೇ?’ ಎಂಬ ಸಾರ್ವಜನಿಕ ಮಹತ್ವದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಈ ತೀರ್ಪು ನೀಡಿದೆ.

ತೀರ್ಪಿನ ಮುಖ್ಯಾಂಶಗಳು

ಮಕ್ಕಳಿಗೂ ಸಮಾನ ಹಕ್ಕು!
“ನಮ್ಮ ಮಕ್ಕಳು ವಯಸ್ಸಿನ ಹಂಗಿಲ್ಲದೆ ಇತರೆ ಪ್ರಜೆಗಳಂತೆ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ. ಅವರನ್ನು ಸಂಪೂರ್ಣವಾಗಿ ಇಂಟರ್ನೆಟ್‌ನಿಂದ ವಂಚಿತರನ್ನಾಗಿ ಮಾಡುವುದು, ಮಕ್ಕಳಿಗೆ ರಕ್ಷಿಸಬೇಕಾದ ವಿವೇಕವಿಲ್ಲ ಅಥವಾ ವಾಕ್ ಸ್ವಾತಂತ್ರ್ಯವಿಲ್ಲ ಎಂದು ವಾದಿಸಿದಂತೆ ಅಸಮಂಜಸವಾಗುತ್ತದೆ” ಎಂದು ಪೀಠ ಕಟು ಶಬ್ದಗಳಲ್ಲಿ ಅಭಿಪ್ರಾಯಪಟ್ಟಿದೆ.

ಸ್ವಾತಂತ್ರ್ಯ ಮತ್ತು ಸುರಕ್ಷತೆ ಎರಡೂ ಮುಖ್ಯ
ಮಕ್ಕಳ ಸುರಕ್ಷತೆ ಮತ್ತು ಅವರ ಸ್ವಾತಂತ್ರ್ಯ ಒಂದಕ್ಕೊಂದು ವಿರುದ್ಧವಾದವುಗಳಲ್ಲ. ನಮ್ಮ ಮಕ್ಕಳು ಈ ಎರಡೂ ಹಕ್ಕುಗಳಿಗೆ ಸಂಪೂರ್ಣವಾಗಿ ಅರ್ಹರಾಗಿದ್ದಾರೆ. ಆನ್‌ಲೈನ್‌ನಲ್ಲಿರುವ ಹಾನಿಕಾರಕ ಅಂಶಗಳನ್ನು ತಡೆಯುವ ಭರದಲ್ಲಿ ಮಕ್ಕಳ ಮೂಲಭೂತ ಹಕ್ಕನ್ನೇ ಮೊಟಕುಗೊಳಿಸುವುದು ಸರಿಯಲ್ಲ ಎಂದು ನ್ಯಾಯಾಲಯ ನುಡಿದಿದೆ.

ಮಾಹಿತಿ ಮತ್ತು ಕಲಿಯುವಿಕೆಗೆ ಏಕೈಕ ಆಧಾರ
ವಿಶೇಷವಾಗಿ ದೂರದ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗೆ ಡಿಜಿಟಲ್ ಶಿಕ್ಷಣ, ಕಲಿಕೆ ಮತ್ತು ಮಾಹಿತಿ ಪಡೆಯಲು ಇಂಟರ್ನೆಟ್ ಬಹುತೇಕ ಏಕೈಕ ಮೂಲವಾಗಿದೆ. ಜೊತೆಗೆ ವಿಶೇಷ ಅಗತ್ಯಗಳಿರುವ (Special Needs) ಮಕ್ಕಳಿಗೂ ಆನ್‌ಲೈನ್ ವೇದಿಕೆಗಳು ಸಮಾನ ಅವಕಾಶಗಳನ್ನು ಕಲ್ಪಿಸಿಕೊಡುತ್ತವೆ ಎಂದು ಕೋರ್ಟ್ ಸ್ಮರಿಸಿದೆ.

ಸಂಪೂರ್ಣ ನಿರ್ಬಂಧಕ್ಕೆ ಸುಪ್ರೀಂ ವಿರೋಧ ಹಾಗೂ ಆತಂಕ

ಇಂಟರ್ನೆಟ್ ಪರಿಸರವು ಮಕ್ಕಳಿಗೆ ಸಂಪೂರ್ಣ ಸುರಕ್ಷಿತವಾಗಿಲ್ಲ ಎಂಬುದನ್ನು ಒಪ್ಪಿಕೊಂಡಿರುವ ನ್ಯಾಯಾಲಯ, ಮಧ್ಯವರ್ತಿ ಸಂಸ್ಥೆಗಳು (Intermediaries) ಹಾನಿಕಾರಕ ವಿಷಯಗಳನ್ನು ತಡೆಯುವಲ್ಲಿ ವಿಫಲವಾಗಿವೆ ಎಂಬ ಕಾರಣಕ್ಕೆ ಮಕ್ಕಳನ್ನೇ ಇಂಟರ್ನೆಟ್‌ನಿಂದ ದೂರವಿಡುವುದು ಸರಿಯಲ್ಲ ಎಂದಿದೆ. ಇದು ತಪ್ಪಿತಸ್ಥರ ಬದಲಿಗೆ ಬಲಿಪಶುಗಳನ್ನೇ ಶಿಕ್ಷಿಸಿದಂತಾಗುತ್ತದೆ ಎಂದು ಎಚ್ಚರಿಸಿದೆ.

ಕೇವಲ ಕಾನೂನು ನಿಷೇಧದಿಂದ ಮಕ್ಕಳು ಇಂಟರ್ನೆಟ್ ಬಳಸುವುದನ್ನು ಬಿಡುವುದಿಲ್ಲ; ಬದಲಿಗೆ ಅವರು ಮತ್ತಷ್ಟು ಅನಿಯಂತ್ರಿತ ಮತ್ತು ಅಪಾಯಕಾರಿ ವೆಬ್‌ಸೈಟ್‌ಗಳತ್ತ ಮುಖ ಮಾಡುವ ಗಂಡಾಂತರವಿದೆ. ಅಷ್ಟೇ ಅಲ್ಲದೆ, ಆನ್‌ಲೈನ್‌ನಲ್ಲಿ ಬೆದರಿಕೆ ಅಥವಾ ಶೋಷಣೆಗೆ ಒಳಗಾಗುವ ಮಕ್ಕಳು, ಪೋಷಕರಿಗೆ ಇಂಟರ್ನೆಟ್ ಬಳಕೆಯೇ ಇಷ್ಟವಿಲ್ಲ ಎಂಬ ಭಯದಿಂದ ಘಟನೆಗಳನ್ನು ಮುಚ್ಚಿಹಾಕಬಹುದು, ಇದು ಅಪರಾಧಗಳನ್ನು ಬಹಿರಂಗಪಡಿಸುವುದಕ್ಕೂ ಅಡ್ಡಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.

ಸುಪ್ರೀಂ ಕೋರ್ಟ್ ಸೂಚಿಸಿರುವ ರಕ್ಷಣಾತ್ಮಕ ಕ್ರಮಗಳು

ಮಕ್ಕಳ ಮೇಲಿನ ಸಂಪೂರ್ಣ ನಿರ್ಬಂಧವನ್ನು ತಳ್ಳಿಹಾಕಿರುವ ಕೋರ್ಟ್, ಅವರ ಸುರಕ್ಷತೆಗಾಗಿ ವಯಸ್ಸಿಗೆ ಅನುಗುಣವಾದ ಕೆಲವು ಕಾವಲು ಕ್ರಮಗಳನ್ನು ಜಾರಿಗೊಳಿಸುವಂತೆ ನಿರ್ದೇಶಿಸಿದೆ

1. ಸಾಮಾಜಿಕ ಜಾಲತಾಣಗಳು ಹಾಗೂ ಆಪ್‌ಗಳಲ್ಲಿ ಮಕ್ಕಳಿಗಾಗಿಯೇ ಪ್ರತ್ಯೇಕವಾದ ಸುರಕ್ಷತಾ ಮೋಡ್ ಪರಿಚಯಿಸುವುದು.
2.ಮಕ್ಕಳು ಸಾಮಾಜಿಕ ಮಾಧ್ಯಮ ಬಳಸುವಾಗ ಪೋಷಕರ ಒಪ್ಪಿಗೆ, ಮಾರ್ಗದರ್ಶನ ಹಾಗೂ ಸಮಂಜಸವಾದ ಮೇಲ್ವಿಚಾರಣೆಗೆ ಒತ್ತು ನೀಡುವುದು.
3. ಅಪರಿಚಿತ ವಯಸ್ಕರು ಮಕ್ಕಳಿಗೆ ಸಂದೇಶ ಕಳುಹಿಸುವುದನ್ನು ಅಥವಾ ಸಂಪರ್ಕಿಸುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸುವುದು ಹಾಗೂ ಮಕ್ಕಳ ಖಾತೆಗಳನ್ನು ಆರಂಭದಿಂದಲೇ ಖಾಸಗಿಯಾಗಿ (Private) ಇಡುವುದು.
4. ಮಕ್ಕಳಿಗೆ ತೋರಿಸಲಾಗುವ ಆನ್‌ಲೈನ್ ಜಾಹೀರಾತುಗಳು ಹಾಗೂ ಹಾನಿಕಾರಕ ವಿಷಯಗಳ ಮೇಲೆ ಹದ್ದಿನ ಕಣ್ಣಿಡುವುದು.

ಈ ಎಲ್ಲಾ ಸುರಕ್ಷತಾ ಮಾರ್ಗಸೂಚಿಗಳನ್ನು ಮತ್ತು ಕ್ರಮಗಳನ್ನು ಹೇಗೆ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂಬ ಬಗ್ಗೆ ವಿಸ್ತೃತ ವಿವರಗಳನ್ನು ರೂಪಿಸುವ ಜವಾಬ್ದಾರಿಯನ್ನು ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ವಹಿಸಿದೆ. ಈ ಕುರಿತ ವರದಿ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ಮುಂದೂಡಲಾಗಿದೆ.
#UdayakalaNews #SupremeCourt #InternetAsFundamentalRight #RightToInternet #Article21 #ChildrenRights #DigitalIndia #SupremeCourtOfIndia #ChildSafetyOnline #LawNews #LegalUpdates

Related Posts

Leave a Reply

Your email address will not be published. Required fields are marked *