Menu

ಸುಪ್ರೀಂ ಆವರಣದಲ್ಲಿ ನನ್ನ ಮೇಲೆ ರಾಹುಲ್ ಗಾಂಧಿಯಿಂದ ಹಲ್ಲೆ: ಗರ್ಭಿಣಿ ಪತ್ರಕರ್ತೆ ರಿಚಾ ಪರಾಶರ್ ಗಂಭೀರ ಆರೋಪ

ಉದಯಕಾಲ ನ್ಯೂಸ್, ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರೋಧಿಸಿ ಸುಪ್ರೀಂ ಕೋರ್ಟ್ (Supreme Court) ಆವರಣದಲ್ಲಿ ನಡೆದ ಪ್ರತಿಭಟನೆ ಹಾಗೂ ದೂರು ದಾಖಲಿಸುವ ಸಂದರ್ಭದಲ್ಲಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ತಮ್ಮ ಕೈಯನ್ನು ಬಲವಂತವಾಗಿ ಎಳೆದು ತಳ್ಳಿ ಹಲ್ಲೆ ನಡೆಸಿದ್ದಾರೆ ಎಂದು ಮೂರು ತಿಂಗಳ ಗರ್ಭಿಣಿ ಪತ್ರಕರ್ತೆಯೊಬ್ಬರು ಅತ್ಯಂತ ಗಂಭೀರ ಆರೋಪ ಮಾಡಿದ್ದಾರೆ.

ಡಿಜಿಟಲ್ ಮಾಧ್ಯಮದಲ್ಲಿ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸುತ್ತಿರುವ ರಿಚಾ ಪರಾಶರ್ (Richa Parashar) ಹಲ್ಲೆಗೊಳಗಾದವರು. ಘಟನೆಯ ಬಳಿಕ ತೀವ್ರ ಅಸ್ವಸ್ಥಗೊಂಡಿರುವ ಅವರು ಪ್ರಸ್ತುತ ದೆಹಲಿಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಬಿಜೆಪಿ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಪತ್ರಕರ್ತೆಯ ಆರೋಗ್ಯವನ್ನು ವಿಚಾರಿಸಿದ್ದು, ರಾಷ್ಟ್ರೀಯ ರಾಜಕಾರಣದಲ್ಲಿ ತೀವ್ರ ಕೋಲಾಹಲ ಸೃಷ್ಟಿಯಾಗಿದೆ.

ಆಸ್ಪತ್ರೆ ಬೆಡ್‌ ಮೇಲೆ ಮಲಗಿಯೇ ವಿವರಣೆ ನೀಡಿದ ರಿಚಾ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಚಾ ಪರಾಶರ್ ಮಾಧ್ಯಮಗಳೊಂದಿಗೆ ಮಾತನಾಡಿ, ಅಂದು ನಡೆದ ಘಟನೆಯ ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ.
“ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ನಡೆದ ಪ್ರತಿಭಟನೆಯ ವೇಳೆ ನಾನು ಸುಪ್ರೀಂ ಕೋರ್ಟ್ ಗೇಟ್ ಬಳಿ ರಾಹುಲ್ ಗಾಂಧಿ ಅವರ ಬೈಟ್ (ಪ್ರತಿಕ್ರಿಯೆ) ಪಡೆಯಲು ಮೈಕ್ ಹಿಡಿದು ಕಾಯುತ್ತಿದ್ದೆ.ಅವರು ಮೈಕ್ ಸರಿಸಲು ಸೂಚಿಸಿದಾಗ ನಾನು ಹಿಂದೆ ಸರಿದೆ. ಆದರೆ ಇತರ ಮಾಧ್ಯಮದವರು ಮೈಕ್ ಮುಂದೆ ಹಿಡಿದ ಕಾರಣ ಕರ್ತವ್ಯದ ಭಾಗವಾಗಿ ನಾನೂ ಮತ್ತೆ ಮೈಕ್ ಮುನ್ನಡೆದೆ. ಆ ವೇಳೆ ಕುಪಿತಗೊಂಡ ರಾಹುಲ್ ಗಾಂಧಿ ಇದ್ದಕ್ಕಿದ್ದಂತೆ ನನ್ನ ಕೈಯನ್ನು ಬಲವಾಗಿ ಹಿಡಿದು ಎಳೆದರು. ನಂತರ ಅವರ ಅಂಗರಕ್ಷಕರು ನನ್ನನ್ನು ತಳ್ಳಿದರು. ಈ ನೂಕುನುಗ್ಗಲಿನಲ್ಲಿ ನಾನು ಮೆಟ್ಟಿಲುಗಳ ಮೇಲೆ ಮುಗ್ಗರಿಸಿ ಬಿದ್ದೆ, ನನ್ನ ಮೊಣಕಾಲು ಮತ್ತು ಹೊಟ್ಟೆಯ ಭಾಗ ಬಲವಾಗಿ ನೆಲಕ್ಕೆ ಬಡಿಯಿತು. ನನ್ನ ಕ್ಯಾಮೆರಾಮನ್ ಹಾಗೂ ಇತರ 4-5 ಮಂದಿ ಕೂಡ ನನ್ನ ಮೇಲೆಯೇ ಬಿದ್ದರು. ನನಗೆ ಉಸಿರಾಡಲು ಕೂಡ ಕಷ್ಟವಾಯಿತು” ಎಂದು ಕಣ್ಣೀರಿಡುತ್ತಾ ತಮ್ಮ ದುಸ್ಥಿತಿಯನ್ನು ವಿವರಿಸಿದ್ದಾರೆ.

ಬಿಜೆಪಿಯಿಂದ ತೀವ್ರ ಖಂಡನೆ

ಮಹಿಳಾ ಪತ್ರಕರ್ತೆಯ ಮೇಲೆ ಹಲ್ಲೆ ನಡೆಸಿರುವ ಆರೋಪವನ್ನು ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. “ಮಹಿಳಾ ಸಬಲೀಕರಣ ಹಾಗೂ ಸಂವಿಧಾನದ ಬಗ್ಗೆ ಮಾತನಾಡುವ ರಾಹುಲ್ ಗಾಂಧಿ, ವೃತ್ತಿ ನಿರ್ವಹಿಸುತ್ತಿದ್ದ ಗರ್ಭಿಣಿ ಪತ್ರಕರ್ತೆಯ ಮೇಲೆಯೇ ಹಲ್ಲೆ ನಡೆಸಿರುವುದು ಅವರ ಅಸಹಿಷ್ಣುತೆಗೆ ಸಾಕ್ಷಿಯಾಗಿದೆ” ಎಂದು ಬಿಜೆಪಿ ವಕ್ತಾರರು ಹಾಗೂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸ್ಪಷ್ಟನೆ ಹಾಗೂ ತಿರುಗೇಟು

ಪತ್ರಕರ್ತೆಯ ಆರೋಪಗಳನ್ನು ಕಾಂಗ್ರೆಸ್ ಪಕ್ಷ ಹಾಗೂ ನಾಯಕರು ತಳ್ಳಿಹಾಕಿದ್ದಾರೆ. ಕಾಂಗ್ರೆಸ್ ನಾಯಕಿ ಅಲ್ಕಾ ಲಂಬಾ ಸಾಮಾಜಿಕ ಜಾಲತಾಣ ‘X’ ಮೂಲಕ ಪ್ರತಿಕ್ರಿಯಿಸಿ, ಇದು ಬಿಜೆಪಿಯ ರಾಜಕೀಯ ಪ್ರೇರಿತ ಷಡ್ಯಂತ್ರ ಎಂದು ದೂರಿದ್ದಾರೆ.
ಗರ್ಭಾವಸ್ಥೆಯಲ್ಲಿದ್ದಾಗ ಪ್ರತಿಭಟನೆಯಲ್ಲಿ ಭಾಗವಹಿಸುವುದು ಅಪಾಯಕಾರಿ ಎಂದಿರುವ ಅವರು, ರಾಹುಲ್ ಗಾಂಧಿ ಮಧ್ಯಾಹ್ನ 3-4 ಗಂಟೆಗೆ ತಳ್ಳಿದರು ಎನ್ನುವ ಪತ್ರಕರ್ತೆ ರಾತ್ರಿ 8.30ಕ್ಕೆ ಆಸ್ಪತ್ರೆಗೆ ದಾಖಲಾಗಿರುವುದೇಕೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಸ್ಥಳದಲ್ಲಿದ್ದ ವಿಡಿಯೋಗಳನ್ನು ಪರಿಶೀಲಿಸಿದಾಗ ಮಾಧ್ಯಮಗಳ ಸಹಜ ನೂಕುನುಗ್ಗಲು ಕಂಡುಬಂದಿದೆಯೇ ಹೊರತು, ರಾಹುಲ್ ಗಾಂಧಿ ಅವರು ಪತ್ರಕರ್ತೆಯ ಮೇಲೆ ನೇರವಾಗಿ ಹಲ್ಲೆ ನಡೆಸಿದ ಯಾವುದೇ ದೃಶ್ಯಗಳೂ ದಾಖಲಾಗಿಲ್ಲ ಎಂದು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ.
ಸದ್ಯ ಈ ಘಟನೆಯು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ವಾಙ್ನ ಯುದ್ಧಕ್ಕೆ ಕಾರಣವಾಗಿದ್ದು, ಮಾಧ್ಯಮ ವಲಯದಲ್ಲೂ ಪರ-ವಿರೋಧ ಚರ್ಚೆಗಳನ್ನು ಹುಟ್ಟುಹಾಕಿದೆ.
#RichaParashar #RahulGandhi #SupremeCourtProtest #JournalistAssaultAllegation #DelhiPolitics #BJPvsCongress #UdayakalaNews #SIRProtest #IndianPolitics

Related Posts

Leave a Reply

Your email address will not be published. Required fields are marked *