Menu

ಎಸ್‌ಐಆರ್‌ ಮಾತ್ರವಲ್ಲ, ಇವಿಎಂ ಕೂಡ ಹ್ಯಾಕ್‌ ಆಗ್ತಿದೆ: ನವದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಬೃಹತ್ ಪ್ರತಿಭಟನೆ

ಉದಯಕಾಲ ನ್ಯೂಸ್, ನವದೆಹಲಿ: ದೇಶದಲ್ಲಿ ಕೇವಲ ಎಸ್‌ಐಆರ್ (SIR) ಪ್ರಕ್ರಿಯೆ ಮಾತ್ರವಲ್ಲದೆ, ಇವಿಎಂ (EVM) ಕೂಡ ಹ್ಯಾಕ್ ಆಗುತ್ತಿದೆ ಎಂದು ಮಾಜಿ ಸಚಿವರು ಹಾಗೂ ಕಾಂಗ್ರೆಸ್‌ನ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ (TB Jayachandra) ಗುಡುಗಿದ್ದಾರೆ.ಸಂವಿಧಾನ ವಿರೋಧಿ ಧೋರಣೆ ಹಾಗೂ ಚುನಾವಣಾ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಖಂಡಿಸಿ ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ನವದೆಹಲಿಯಲ್ಲಿ ಸುಪ್ರೀಂ ಕೋರ್ಟ್ ಚಲೋ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದು, ಧರಣಿ ಆರಂಭವಾಗುವುದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಟಿ.ಬಿ. ಜಯಚಂದ್ರ ಮಾತನಾಡಿ “ನಾವು ಎಸ್‌ಐಆರ್ ಪ್ರಕ್ರಿಯೆಯನ್ನು ವಿರೋಧಿಸಿ ಪ್ರತಿಭಟಿಸಲು ಬಂದಿದ್ದೇವೆ. ಆದರೆ, ಕೇವಲ ಎಸ್‌ಐಆರ್‌ ಮಾತ್ರ ಅಲ್ಲ, ಇವಿಎಂ ಕೂಡ ಹ್ಯಾಕ್ ಆಗುತ್ತಿದೆ. ಹ್ಯಾಕರ್ಸ್‌ಗಳು ನಾವು ಮಾಡಿಕೊಡುತ್ತೇವೆ ಎಂದು ಬಹಿರಂಗವಾಗಿ ಪ್ರಚಾರ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಮುಖ್ಯವಾಗಿದ್ದು, ಜನರು ಹಾಕುವ ವೋಟಿಗೆ ಸೂಕ್ತ ಖಾತ್ರಿ ಸಿಗಬೇಕು” ಎಂದು ತಿಳಿಸಿದರು.

ಕೃಷಿ ಸಚಿವ ಚಲುವರಾಯಸ್ವಾಮಿ ಸಮಜಾಯಿಷಿ

“ಇಂದಿನ ನಮ್ಮ ಹೋರಾಟ ಯಾವುದೇ ಶಕ್ತಿ ಪ್ರದರ್ಶನ ಅಲ್ಲ, ಇದು ನಮ್ಮ ಸಂವಿಧಾನದ ಉಳಿವಿಗಾಗಿ ನಡೆಯುತ್ತಿರುವ ಹೋರಾಟ. ನಮ್ಮ ರಾಜ್ಯದಲ್ಲೂ ಎಸ್‌ಐಆರ್‌ನಲ್ಲಿ ಅಕ್ರಮ ನಡೆದಿದ್ದು, ಫಾರಂ-6ರಲ್ಲಿ (Form-6) ಯಾವ ರೀತಿಯ ಸಮಸ್ಯೆಗಳಾಗಿವೆ ಎಂಬುದನ್ನು ಈಗಾಗಲೇ ನಾವು ಬಹಿರಂಗಪಡಿಸಿದ್ದೇವೆ. ಚುನಾವಣಾ ಆಯೋಗವನ್ನು ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದು, ನಮ್ಮ ಹಕ್ಕುಗಳನ್ನು ನಾವು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ” ಎಂದರು.

ಸಚಿವ ಶಿವಲಿಂಗೇಗೌಡ: “ಪ್ರಜಾಪ್ರಭುತ್ವವನ್ನು ಉಳಿಸಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಈ ಹೋರಾಟಕ್ಕೆ ಕರೆ ನೀಡಿದೆ. ರಾಜ್ಯದಿಂದಲೂ ಶಾಸಕರು, ಸಚಿವರು ಹಾಗೂ ಪ್ರಮುಖ ನಾಯಕರು ದೆಹಲಿಗೆ ಬಂದಿದ್ದಾರೆ. ಚುನಾವಣಾ ಆಯೋಗವನ್ನು ಬಳಸಿಕೊಂಡು ಕೇಂದ್ರ ಸರ್ಕಾರ ಪ್ರಜಾಪ್ರಭುತ್ವವನ್ನು ಹಾಳುಗೆಡವುತ್ತಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತೇವೆ. ಇಡೀ ದೇಶಾದ್ಯಂತ ಈ ಹೋರಾಟ ವ್ಯಕ್ತವಾಗುತ್ತಿದ್ದು, ಚುನಾವಣಾ ವ್ಯವಸ್ಥೆಯಲ್ಲಿ ಆಗಿರುವ ಲೋಪಗಳನ್ನು ತಕ್ಷಣ ಸರಿಪಡಿಸಬೇಕು” ಎಂದು ಆಗ್ರಹಿಸಿದರು.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆರೋಪ
“ದೇಶಾದ್ಯಂತ ಇರುವ ಕಾಂಗ್ರೆಸ್ ನಾಯಕರು ದೆಹಲಿಗೆ ಬಂದು ಶಾಂತಿಯುತವಾಗಿ ಸುಪ್ರೀಂ ಕೋರ್ಟ್ ವರೆಗೆ ಮೆರವಣಿಗೆ ನಡೆಸುತ್ತಿದ್ದೇವೆ. ಸಂವಿಧಾನದಲ್ಲಿ ಮತದಾನದ ಹಕ್ಕು ಅತ್ಯಂತ ಅಮೂಲ್ಯವಾದ ಅಸ್ತ್ರವಾಗಿದೆ. ಆದರೆ, ವ್ಯವಸ್ಥಿತವಾಗಿ ಆ ಹಕ್ಕನ್ನೇ ಕಿತ್ತುಕೊಂಡು ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವ ಪ್ರಯತ್ನಗಳು ನಡೆಯುತ್ತಿವೆ” ಎಂದು ಆರೋಪಿಸಿದರು.

ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್‌ ಮಾತನಾಡುತ್ತಾ”ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಎಸ್‌ಐಆರ್‌ನಿಂದ ಸಾಕಷ್ಟು ಜನಸಾಮಾನ್ಯರಿಗೆ ತೊಂದರೆಯಾಗಿದೆ. ನಾವು ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದರೂ ಅದನ್ನು ಹತ್ತಿಕ್ಕುವ ಯತ್ನ ಮಾಡಲಾಗುತ್ತಿದೆ. ರಾಹುಲ್ ಗಾಂಧಿ (Rahul Gandhi) ಅವರನ್ನು ಹಿಯಾಳಿಸಿದರೂ, ಏನೇ ಅಡೆತಡೆಗಳನ್ನು ಒಡ್ಡಿದರೂ ನಾವು ಜನರ ಪರವಾಗಿ ಧ್ವನಿ ಎತ್ತುವುದನ್ನು ನಿಲ್ಲಿಸುವುದಿಲ್ಲ. ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ. ಅಮಿತ್ ಶಾ ಅಥವಾ ಆರ್‌ಎಸ್‌ಎಸ್‌ನವರ ಬೆದರಿಕೆಗಳಿಗೆ ನಾವು ಹೆದರುವುದಿಲ್ಲ” ಎಂದು ಎಚ್ಚರಿಸಿದರು.
ದೆಹಲಿಯಲ್ಲಿ ನಡೆದ ಈ ಬೃಹತ್ ಪ್ರತಿಭಟನೆಯು ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಚುನಾವಣಾ ವ್ಯವಸ್ಥೆ ಹಾಗೂ ಎಸ್‌ಐಆರ್-ಇವಿಎಂ ವಿವಾದ ಮುನ್ನೆಲೆಗೆ ಬಂದಿದೆ.
#NewDelhi #TBJayachandra #ChaluvarayaSwamy #Shivanlingegowda #LakshmiHebballakar #Manjunath #CongressProtest #SupremeCourtChalo #EVM #SIR #GyaneshKumar #ElectionCommission #RahulGandhi #PoliticalNews #UdayakalaNews

Related Posts

Leave a Reply

Your email address will not be published. Required fields are marked *