ಉದಯಕಾಲ ನ್ಯೂಸ್, ಬೆಂಗಳೂರು: ದೇಶ ವಿರೋಧಿ ಶಕ್ತಿಗಳಾದ ಇಂಡಿಯ ಒಕ್ಕೂಟಗಳು ಸಿಜೆಪಿ (CJP) ಮುಖಂಡರ ಜೊತೆ ಕೈಜೋಡಿಸಿ ದೆಹಲಿಯಲ್ಲಿ ಹೋರಾಟ ನಡೆಸುತ್ತಿವೆ ಇದು ಅರ್ಥಹೀನ ಹೋರಾಟವಷ್ಟೇ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರವಾಗಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಜೆಪಿ ಪ್ರತಿಭಟನೆಗೆ ಕೇಂದ್ರ ಸರ್ಕಾರ ಹೆದರಿಲ್ಲ ಮತ್ತು ಇದನ್ನು ಯಾರೂ ತಪ್ಪಾಗಿ ಅರ್ಥೈಸಿಕೊಳ್ಳಬೇಕಾಗಿಲ್ಲ ಎಂದರು. ಸಿಜೆಪಿ ಹೆಸರಿನಲ್ಲಿ ಕೆಲವೇ ಕೆಲವು ವ್ಯಕ್ತಿಗಳು ಪ್ರದರ್ಶನ ನಡೆಸುತ್ತಿದ್ದು, ದೇಶ ವಿರೋಧಿ ಶಕ್ತಿಗಳು ವಿದ್ಯಾರ್ಥಿಗಳನ್ನು ಬದಿಗಿಟ್ಟು ಈ ಹೋರಾಟದಲ್ಲಿ ನುಸುಳಿವೆ. ಈ ಎಲ್ಲ ವಿದ್ಯಮಾನಗಳ ಮೇಲೆ ಕೇಂದ್ರ ಸರ್ಕಾರದ ತೀವ್ರ ಕಣ್ಣಿದೆ ಎಂದು ತಿಳಿಸಿದರು.
ಪ್ರಕಾಶ್ ರಾಜ್ ವಿರುದ್ಧ ವಾಗ್ದಾಳಿ
ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರು ಸಾಂವಿಧಾನಿಕ ಹುದ್ದೆಯಲ್ಲಿರುವವರು. ಅವರ ನಿರ್ಧಾರದ ಬಗ್ಗೆ ಅಸಮಾಧಾನವಿದ್ದರೆ ಕೋರ್ಟ್ ಮೆಟ್ಟಿಲೇರಲು ಅವಕಾಶವಿದೆ, ಆದರೆ ಇದುವರೆಗೆ ಅವರು ಕೋರ್ಟ್‌ಗೆ ಹೋಗಲು ಮುಂದಾಗಿಲ್ಲ. ಇನ್ನು ನಟ ಪ್ರಕಾಶ್ ರಾಜ್ ಅವರು ‘ಎಸ್‌ಐಆರ್ (SIR) ಮಾಡಬೇಡಿ’ ಎಂದು ಹೇಳುತ್ತಾರೆ, ಹಾಗಾದರೆ ಮೃತರ ಹೆಸರುಗಳೂ ಮತದಾರರ ಪಟ್ಟಿಯಲ್ಲಿ ಹಾಗೆಯೇ ಇರಬೇಕು ಎನ್ನುವುದು ಅವರ ವಾದವೇ? ಎಂದು ಪ್ರಶ್ನಿಸಿದರು. ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಲು ಅವರು ಮಾಡಿರುವ ತಪ್ಪು ಏನೆಂಬುದನ್ನು ಸಾಕ್ಷಿ ಸಮೇತ ತೋರಿಸಬೇಕು, ಆದರೆ ಇದುವರೆಗೂ ಅದನ್ನು ಸಾಬೀತುಪಡಿಸಲು ಯಾರಿಂದಲೂ ಸಾಧ್ಯವಾಗಿಲ್ಲ ಎಂದರು.
ನ್ಯಾಯಾಲಯಗಳ ಮೇಲೆ ನಂಬಿಕೆ ಇಡದೆ ಭಯೋತ್ಪಾದಕರ ಹೆಸರನ್ನು ಮುನ್ನೆಲೆಗೆ ತಂದು ಮಾತನಾಡುತ್ತಿರುವುದು ಎಷ್ಟು ಸರಿ? ಹಾದಿ-ಬೀದಿಗಳಲ್ಲಿ ರಂಪಾಟ ಮಾಡುವುದು ಸರಿಯಲ್ಲ. ವಿಚ್ಛಿದ್ರಕಾರಿ ಶಕ್ತಿಗಳು ದೇಶದೊಳಗೆ ನುಸುಳಿ ಭಾರತವನ್ನು ಒಡೆಯುವ ಕೆಲಸದಲ್ಲಿ ನಿರತವಾಗಿವೆ ಎಂದು ತೀವ್ರವಾಗಿ ಕಿಡಿಕಾರಿದರು.
ಪ್ರಿಯಾಂಕ್ ಖರ್ಗೆ ಹಾಗೂ ಕಾಂಗ್ರೆಸ್ ನಾಯಕತ್ವದ ವಿರುದ್ಧ ಲೇವಡಿ
ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ವಾಗ್ದಾಳಿ ನಡೆಸಿದ ಛಲವಾದಿ ನಾರಾಯಣಸ್ವಾಮಿ, “ಪ್ರಿಯಾಂಕ್ ಖರ್ಗೆ ಅವರಿಗೆ ಅನುಭವದ ಕೊರತೆಯಿರುವುದರಿಂದ ಏನೇನೋ ಮಾತನಾಡುತ್ತಾರೆ. ನನ್ನ ಶಕ್ತಿ ನನ್ನ ತಂದೆ ಎನ್ನುತ್ತಾ ಅವರು ಭ್ರಮಿಸಬಾರದು. ನಾನು ಅವರನ್ನು ಹಿರಿಯ ಸಹೋದರನೆಂದು ಭಾವಿಸಿದ್ದೇನೆ. ಆದರೆ ರಾಜ್ಯದಲ್ಲಿ ದಲಿತರ ಮೇಲೆ ನಡೆಯುತ್ತಿರುವ ಹಲ್ಲೆ ಮತ್ತು ಕೊಲೆಗಳ ಬಗ್ಗೆ ಗಮನ ಹರಿಸುವುದನ್ನು ಬಿಟ್ಟು ಬೇರೆಲ್ಲದರಲ್ಲೂ ಆಸಕ್ತಿ ವಹಿಸುತ್ತಿದ್ದಾರೆ” ಎಂದು ಟೀಕಿಸಿದರು.
ಪ್ರಪಂಚವೇ ಗೌರವಿಸಿ ಹಾಡಿ ಹೊಗಳುವ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ದೇಶವನ್ನು ಮುನ್ನಡೆಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ನಾಯಕತ್ವ ಇಂದು ಸಂಪೂರ್ಣವಾಗಿ ನೆಲಕಚ್ಚಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅಹಿಂದ ನಾಯಕರನ್ನು ಸ್ವಲ್ಪ ಮಟ್ಟಿಗೆ ಹಿಡಿದಿಟ್ಟುಕೊಂಡಿದ್ದ ಕಾರಣಕ್ಕೆ ಮಾತ್ರ ಕರ್ನಾಟಕದಲ್ಲಿ ಕಾಂಗ್ರೆಸ್ ಜೀವ ಹಿಡಿದುಕೊಂಡಿದೆ. ಇನ್ನು ರಾಹುಲ್ ಗಾಂಧಿ ಅವರು ಬಿಜೆಪಿಯ ಸ್ಟಾರ್ ಕ್ಯಾಂಪೇನರ್ ರೀತಿಯಾಗಿದ್ದಾರೆ, ಹಾಗಿರುವಾಗ ಅವರಿಂದ ಕಾಂಗ್ರೆಸ್‌ಗೆ ಹೇಗೆ ತಾನೆ ನೆರವು ಸಿಗಲು ಸಾಧ್ಯ? ಕೊನೆಗೆ ಕಾಂಗ್ರೆಸ್ ಪಕ್ಷವೇ ಸಿಜೆಪಿಯಲ್ಲಿ ವಿಲೀನವಾದರೂ ಅಚ್ಚರಿಯಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಲೇವಡಿ ಮಾಡಿದರು.
#ChalavadiNarayanaswamy #CJPProtest #PrakashRaj #PriyankKharge #Congress #BJP #GyaneshKumar #SIRProcess #DelhiProtest #KarnatakaPolitics


