ಉದಯಕಾಲ ನ್ಯೂಸ್, ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ‘ಸ್ಟಿಂಗ್ ಆಪರೇಷನ್’ ಮತ್ತು ‘ಹನಿಟ್ರ್ಯಾಪ್’ ಪ್ರಯತ್ನಗಳ ವಿವಾದ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಕುರಿತು ತೀವ್ರ ವಾಗ್ದಾಳಿ ನಡೆಸಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ‘ಹನಿಟ್ರ್ಯಾಪ್’ ಘಟನೆಗಳಿಗೆ ಸಂಬಂಧಿಸಿದ ಮೂರು ವಿಡಿಯೋಗಳು ತಮ್ಮ ಮೊಬೈಲ್‌ಗೂ ಬಂದಿದ್ದು,ಆ ವಿಡಿಯೋಗಳನ್ನು ಜೋಪಾನವಾಗಿಟ್ಟಿದ್ದೇನೆಂದು ಹೇಳುವ ಮೂಲಕ ಹೊಸ ರಾಜಕೀಯ ಬಿರುಗಾಳಿ ಎಬ್ಬಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ವಿಷಯವನ್ನು ಲಘುವಾಗಿ ಪರಿಗಣಿಸಬಾರದು ಎಂದರು. “ಸಂವಿಧಾನದ ಅಡಿಯಲ್ಲಿ ನೀವು (ಡಿಕೆ ಶಿವಕುಮಾರ್) ಪ್ರಮಾಣವಚನ ಸ್ವೀಕರಿಸಿದ್ದೀರಿ. ನಿಮ್ಮ ಗಮನಕ್ಕೆ ಬಂದ ಮೇಲೆ ಯಾಕೆ ಕ್ರಮ ತೆಗೆದುಕೊಂಡಿಲ್ಲ? ದಾಖಲೆ ಸಿಕ್ಕಿದ್ದರೂ ಅದನ್ನು ಮುಚ್ಚಿಡುವುದು ಗಂಭೀರ ಅಪರಾಧ. ನನಗೆ ಕೂಡಾ ಕೆಲವು ಈ ಬಗೆಗಿನ ವಿಡಿಯೋಗಳನ್ನು ಕಳುಹಿಸಿದ್ದಾರೆ. ವಿಡಿಯೋಗಳು ಈಗ ಎಲ್ಲರ ಬಳಿಯಲ್ಲೂ ಓಡಾಡುತ್ತಿವೆ. ಇದರ ಬಗ್ಗೆ ಸಿಎಂ ಯಾಕೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ?” ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಮುಖ್ಯಮಂತ್ರಿಗಳ ಅಸಹಾಯಕತೆ ವಿರುದ್ಧ ವಾಗ್ದಾಳಿ
“ಇಷ್ಟು ದಿನ ಸಿಎಂ ಡಿ.ಕೆ. ಶಿವಕುಮಾರ್ ಭರವಸೆ ಕೊಡುತ್ತಿದ್ದಾರೆ ಎನ್ನಲಾಗಿತ್ತು. ಈಗ ನೋಡಿದರೆ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡುತ್ತಿದ್ದಾರೆ. ಸಂಪುಟ ಸಭೆಯಲ್ಲಿ ಸಚಿವರನ್ನೇ ಟ್ರ್ಯಾಪ್ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಿರುವ ಮುಖ್ಯಮಂತ್ರಿಗಳೇ ಅಸಹಾಯಕ ಸ್ಥಿತಿಯಲ್ಲಿ ನನ್ನ ಮೇಲೆ ಟ್ರ್ಯಾಪ್ ಆಗಿದೆ ಅಂತಾರೆ. ಸರ್ಕಾರ, ಕ್ಯಾಬಿನೆಟ್ ಸಚಿವರು, ಸಿಎಂಗೇ ಭದ್ರತೆ ಇಲ್ಲವಾದರೆ ಹೇಗೆ? ಯಾರು ಬೇಕಾದರೂ ಅವರನ್ನು ಹನಿಟ್ರ್ಯಾಪ್ ಮಾಡಬಹುದು” ಎಂದು ಆತಂಕ ವ್ಯಕ್ತಪಡಿಸಿದರು.
ಎಫ್‌ಐಆರ್ ದಾಖಲಿಸಲು ಆಗ್ರಹ
ತಮ್ಮನ್ನು ಟ್ರ್ಯಾಪ್ ಮಾಡಲು ಯತ್ನಿಸಿದ ಸ್ಪಷ್ಟ ದಾಖಲೆಗಳಿವೆ ಅಂತಾರೆ, ಹಾಗಾದರೆ ಸಿಎಂ ಡಿ.ಕೆ. ಶಿವಕುಮಾರ್ ಏಕೆ ದೂರು ನೀಡಿಲ್ಲ? ಇದರ ಬಗ್ಗೆ ಯಾಕಿನ್ನೂ ಎಫ್‌ಐಆರ್ ದಾಖಲಿಸಿಲ್ಲ? ಗಾಳಿಯಲ್ಲಿ ಗುಂಡು ಹಾರಿಸಲು ಬೇರೆಯೇ ಜಾಗವಿದೆ. ಸಿಎಂ ಅಧಿವೇಶನದಲ್ಲಿ ಬೆಂಗಳೂರಿನ ಹೊರಗಿನ ಸಚಿವರು, ಶಾಸಕರು ಎರಡೆರಡು ಮದುವೆಯಾಗಿದ್ದಾರೆ ಎಂದು ಹೇಳಿದ್ದಾರೆ. ಹಾಗಾದರೆ ಅವರ ಮೇಲೆ ಯಾಕೆ ಎಫ್‌ಐಆರ್ ಮಾಡಿಲ್ಲ? ಎಂದು ವಿಪಕ್ಷ ನಾಯಕ ಪ್ರಶ್ನಿಸಿ ವಾಗ್ದಾಳಿ ನಡೆಸಿದರು.
ರಾಜ್ಯದ ಸಚಿವರು ಮತ್ತು ರಾಜಕೀಯ ನಾಯಕರನ್ನು ಗುರಿಯಾಗಿಸಿಕೊಂಡು ‘ಸ್ಟಿಂಗ್ ಆಪರೇಷನ್’ ನಡೆಸುವ ಸಾಧ್ಯತೆ ಕುರಿತಾದ ಆರೋಪಗಳು ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿಯ ನಡುವೆ ತೀವ್ರ ಸಂಘರ್ಷಕ್ಕೆ ಕಾರಣವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸಿಎಂ ಡಿಕೆ ಶಿವಕುಮಾರ್ ಅವರು ಸಚಿವರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದರೆ, ಇಂತಹ ಕಾರ್ಯಾಚರಣೆಗಳ ಮೂಲಕ ಸರ್ಕಾರಕ್ಕೆ ಅಪಖ್ಯಾತಿ ತರುವ ಪ್ರಯತ್ನಗಳ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಸಹ ತಿಳಿಸಿದ್ದಾರೆ.
#RAshoka #HoneyTrapControversy #StingOperation #KarnatakaPolitics #DKShivakumar #BJPVsCongress #UdayakalaNews #BangaloreNews #KarnatakaGovernment


